ADVERTISEMENT

ಹಾವೇರಿಯ ದೂಳಿಗೆಂದು ಮುಕುತಿ?

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 8:10 IST
Last Updated 6 ಫೆಬ್ರುವರಿ 2012, 8:10 IST

ಹಾವೇರಿ: ದೂಳು,ದೂಳು, ದೂಳು... ನಗರದ ಯಾವುದೇ ರಸ್ತೆಗೆ ಹೋದರೂ ಮನುಷ್ಯನ ಬೆನ್ನಿಗೆ ಅಂಟಿದ ನೆರಳಿನಂತೆ ಈ ದೂಳು ಕಾಡದೇ ಬಿಡುವುದಿಲ್ಲ.

ಯಾಲಕ್ಕಿ ಕಂಪಿನ ನಗರವೆಂದು ಖ್ಯಾತಿ ಪಡೆದ ನಗರ ಈಗ ದೂಳಿನ ನಗರವಾಗಿ ಪರಿವರ್ತನೆಗೊಂಡಿದ್ದು, ಆಮೆ ವೇಗದಲ್ಲಿ ನಡೆದಿರುವ ಒಳಚರಂಡಿ, ರಸ್ತೆ ಅಗಲೀಕರಣ ಕಾಮ ಗಾರಿ ಮತ್ತು ಹದಗೆಟ್ಟ ರಸ್ತೆಗಳೇ ಈ ಧೂಳಿಗೆ ಪ್ರಮುಖ ಕಾರಣ.

ಒಂದೊಂದು ರಸ್ತೆಯಲ್ಲಿ ಒಂದೊಂದು ರೀತಿಯ ದೂಳು ಕಾಣಿಸಿ ಕೊಳ್ಳತ್ತಿದೆ. ನಗರದ ಮಧ್ಯವರ್ತಿ ಸ್ಥಳವಾದ ಎಂ.ಜಿ. ಮಾರುಕಟ್ಟೆ ರಸ್ತೆ, ಜೆ.ಪಿ.ವೃತ್ತದ ರಸ್ತೆ, ಬಸ್ ನಿಲ್ದಾಣದ ರಸ್ತೆಯಲ್ಲಿ ಕೆಂದೂಳು ಏಳುತ್ತಿದ್ದರೆ, ಗುತ್ತಲ ರಸ್ತೆಯಲ್ಲಿ ಬೂದು ಬಣ್ಣದ ಧೂಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ನಗರದ ಯಾವ ರಸ್ತೆಯಲ್ಲಿ ಅಡ್ಡಾಡಿ ದರೂ ದೂಳಿನ ಸ್ನಾನ ಗ್ಯಾರಂಟಿ ಎನ್ನುವಂತಾಗಿದೆ.

ಕುಂಟುತ್ತ ಸಾಗಿರುವ ಕಾಮಗಾರಿ: ಕಳೆದ ಎರಡು ವರ್ಷದಿಂದ ನಗರದಲ್ಲಿ ನಡೆದಿರುವ ಒಳಚರಂಡಿ ಕಾಮಗಾರಿ ಕುಂಟುತ್ತಾ ತೆವಳುತ್ತಾ ಸಾಗಿದೆ. ಗುತ್ತಿಗೆದಾರರಿಗೆ ನೀಡಿದ ಅವಧಿ ಮುಗಿದು ಹೋಗಿದ್ದರೂ ಕಾಮಗಾರಿ ಮಾತ್ರ ಮುಗಿಯುತ್ತಿಲ್ಲ. ಮುಗಿದ ಕಡೆಯೂ ರಸ್ತೆಗಳ ನಿರ್ಮಾಣ ಮಾಡ ಲಾಗಿಲ್ಲ. ಹೀಗಾಗಿ ಒಳಚರಂಡಿಗಾಗಿ ರಸ್ತೆ ಮಧ್ಯದಲ್ಲಿ ತೋಡಿದ ಗುಂಡಿಗಳನ್ನು ಹಾಗೆ ಮುಚ್ಚಿದ್ದರಿಂದ ಡಾಂಬರ್ ರಸ್ತೆಗಳು ಮಣ್ಣಿನ ರಸ್ತೆಗಳಾಗಿ ಪರಿವರ್ತನೆಗೊಂಡಿವೆ.

ನಗರದ ಒಂದು ಸುತ್ತ ಹಾಕಿ ಬಂದರೆ ಸಾಕು, ಮೈಮೇಲೆ ಹಾಕಿ ಕೊಂಡ ಬಟ್ಟೆಯನ್ನು ಬದಲಾಯಿಸಬೇಕು. ಮತ್ತೊಮ್ಮೆ ಸ್ನಾನ ಮಾಡಬೇಕು. ಇಲ್ಲವಾದರೆ, ಮನುಷ್ಯ ಮಣ್ಣು ಹೊರುವ ಕೆಲಸ ಮಾಡಿಬಂದವರಂತೆ ಗೋಚರಿಸುತ್ತಾರೆ. ಈ ಧೂಳಿನಿಂದ ಬೇಸತ್ತು ಹೋಗಿರುವ ಜನರು, ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರ ವಿರುದ್ಧ ಹಾಗೂ ಅದಕ್ಕೆ ಒತ್ತಡ ಹೇರದ ಜನಪ್ರತಿನಿಧಿ ಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ನಡೆದ ಅತಿಕ್ರಮಣ ತೆರವಿನಿಂದ ಹಾಳಾಗಿರುವ ಎಂ.ಜಿ.ರಸ್ತೆಯಲ್ಲಿದ್ದ ಗಟಾರುಗಳು ಅತಿಕ್ರಮಣ ತೆರವಿನಿಂದ ಮುಚ್ಚಿ ಹೋಗಿವೆ. ಹೊಸ ಗಟಾರು ನಿರ್ಮಾಣ ಕಾರ್ಯ ಇನ್ನೂ ಆರಂಭಿಸಿಲ್ಲ. ಮಣ್ಣಿ ನಿಂದ ಕೂಡಿದ ರಸ್ತೆಗಳಲ್ಲಿ ಗಟಾರು ನೀರು ಸೇರಿ ಇಡೀ ರಸ್ತೆಗಳು ಕೆಸರುಮಯವಾಗಿವೆ. ಅದು ಒಣಗಿದರೆ ದೂಳಾಗಿ ಬದಲಾಗುತ್ತದೆ. ಕೆಲವಡೆ ಒಂದು ವಾಹನ ಹಾಯ್ದು ಹೋದರೆ ಸಾಕು ಮುಂದೆನಿದೆ ಎಂದು ಕಾಣದಷ್ಟು ದಟ್ಟ ದೂಳು ಏಳುತ್ತದೆ.

ಅತ್ತ ರೈಲು ನಿಲ್ದಾಣದ ಮೇಲ್ಸು ತುವೆ ಕಾಮಗಾರಿ ನಡೆದಿರುವುದರಿಂದ ಗುತ್ತಲ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇನ್ನು ಸರಕಾರಿ ಆಸ್ಪತ್ರೆ, ಕಾಗಿನೆಲೆ ರಸ್ತೆ, ಹಾನಗಲ್ ರಸ್ತೆ ಮೊದಲಾದ ರಸ್ತೆಗಳಲ್ಲಿಯೂ ಕೂಡ ಧೂಳಿನ ಕಾಟ ತಪ್ಪುತ್ತಿಲ್ಲ. ಇಲ್ಲಿನ ರಸ್ತೆಗಳ ತೇಪೆಹಾಕುವ ಕೆಲಸ ಮಾಡಿದ್ದರೂ ಪ್ರಯೋಜನಕ್ಕೆ ಬಂದಿಲ್ಲ ಎಂದು ಆರೋಪಿಸುತ್ತಾರೆ ನಗರದ ನಿವಾಸಿ ಮೆಹಬೂಬ್. ಹೀಗೆ ನಗರದ ಯಾವುದೇ ರಸ್ತೆಗೆ ಹೋದರೂ ದೂಳಿನ ಸ್ನಾನ ಮಾಡದೇ ವಾಪಸ್ಸು ಬರುವ ಹಾಗಿಲ್ಲ ಎನ್ನುವಂತಾಗಿದೆ ನಗರದ ಜನರ ಸ್ಥಿತಿ.
 
ಅಸ್ಥಮಾ ಸಂಖ್ಯೆ ಹೆಚ್ಚಳ: ನಗರದ ರಸ್ತೆಗಳು ಎಷ್ಟು ಹದಗೆಟ್ಟಿವೆಯೋ ಧೂಳು ಕುಡಿದು ಅದಕ್ಕಿಂತ ಹೆಚ್ಚು ಜನರ ಆರೋಗ್ಯ ಹದಗೆಡುತ್ತಿದೆ. ಒಂದು ಅಂದಾಜಿನ ಪ್ರಕಾರ ಕಳೆದ ಒಂದು ವರ್ಷದಿಂದ ನಗರದಲ್ಲಿ ಅಸ್ತಮಾ ರೋಗಿಗಳ ಸಂಖ್ಯೆ ಎರಡ್ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.  ಜನತೆಗೆ ಆಗುತ್ತಿ ರುವ ಕಿರಿಕಿರಿ ಹಾಗೂ ತೊಂದರೆಯನ್ನು ಗಮನ ದಲ್ಲಿಟ್ಟುಕೊಂಡು ತಕ್ಷಣವೇ ರಸ್ತೆಗಳ ದುರಸ್ತಿ ಮಾಡಿ ದೂಳಿನಿಂದ ಮುಕ್ತಿಗೊಳಿಸಬೇಕು.
 
ಇಲ್ಲವಾದರೆ, ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ದಾರರ ವಿರುದ್ಧ, ನಗರಸಭೆ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.