ADVERTISEMENT

ಹುಲ್ಲತ್ತಿ ಗ್ರಾಮಸ್ಥರ ಪ್ರತಿಭಟನೆ

ನಿವೇಶನ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 8:28 IST
Last Updated 4 ಡಿಸೆಂಬರ್ 2012, 8:28 IST

ಹಾವೇರಿ: ನಿವೇಶನ ರಹಿತ ಬಡವರಿಗೆ ಸರ್ಕಾರಿ ಜಮೀನಿನಲ್ಲಿ ನಿವೇಶನ ನೀಡುವಂತೆ ಒತ್ತಾಯಿಸಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕು ಹುಲ್ಲತ್ತಿ ಗ್ರಾಮದ ಜನರು ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಜಿಲ್ಲಾಸ್ಪತ್ರೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನಾ ರ‌್ಯಾಲಿ ನಡೆಸಿದ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ರವೀಂದ್ರಗೌಡ ಪಾಟೀಲ ಮಾತನಾಡಿ, ಹುಲ್ಲತ್ತಿ ಗ್ರಾಮದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗದ ಸಾಕಷ್ಟು ಬಡ ಜನರು ನಿವೇಶನವಿಲ್ಲದೇ ಅಲ್ಲಿ ಇಲ್ಲಿ ಗುಡಿಸಲು ಇತ್ಯಾದಿಗಳಲ್ಲಿ ವಾಸ ಮಾಡುತ್ತಿದ್ದಾರೆ.

ಗ್ರಾಮದಲ್ಲಿ ಸಾಕಷ್ಟು ಸರ್ಕಾರಿ ಸ್ವಾಮ್ಯದ ಖುಲ್ಲಾ ಜಮೀನು, ಗೋಮಾಳ, ಹುಲ್ಲುಗಾವಲಿದೆ. ಅಲ್ಲಿ ಅವರಿಗೆ ಮನೆ ನಿರ್ಮಿಸಿಕೊಳ್ಳಲು ನಿವೇಶನ ನೀಡುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಈವರೆಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನಮಂತಪ್ಪ ದೀವಿಗಿಹಳ್ಳಿ ಮಾತನಾಡಿ, ಜಮೀನಿನನ್ನು ಖಾಸಗಿಯವರಿಗೆ ಹಾಗೂ ಸರ್ಕಾರಿ ಕಟ್ಟಡಗಳಿಗೆ ನೀಡುತ್ತಿದ್ದಾರೆ. ನಿವೇಶನ ರಹಿತ ಬಡವರಿಗೆ ನೀಡಲು ಮಾತ್ರ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.

ಬಡವರಿಗೆ ನಿವೇಶನ ನೀಡುವಂತೆ ಈಗಾಗಲೇ ಗ್ರಾಮಸಭೆಯಲ್ಲಿ ಚರ್ಚಿಸಿ ಠರಾವು ಪಾಸು ಮಾಡಿ ಮೇಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಅದಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಸರ್ಕಾರದ ಗಮನ ಸೆಳೆದು ಸೂರಿಲ್ಲದ ಬಡವರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕಾಳವ್ವ ಕೋಡದ, ರಮೇಶ ಕೋಡದ, ಶಾಂತವ್ವ ವೀರಾಪುರ, ಜಯವ್ವ ಮೇಗಳಮನಿ, ನಿರ್ಮಲಾ ಹಾರೋಗೊಪ್ಪದ, ಹನಮಂತಪ್ಪ ಕರಿಯಣ್ಣನವರ, ಮಾರುತಿ ಯತ್ತಿನಹಳ್ಳಿ, ಚೌಡಪ್ಪ ಕೊಪ್ಪದ, ಬಸವರಾಜ ನೂಲಗೇರಿ ಸೇರಿದಂತೆ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.