ADVERTISEMENT

ಹೆಚ್ಚುವರಿ ಸೇವಾಕೇಂದ್ರ ತೆರೆಯಲು ಆಗ್ರಹ

ಪಡಿತರ ಚೀಟಿ ವಿತರಣೆಗೆ ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 6:42 IST
Last Updated 12 ಜೂನ್ 2013, 6:42 IST

ರಾಣೆಬೆನ್ನೂರು: ಹೊಸದಾಗಿ ಪಡಿತರ ಚೀಟಿ ವಿತರಿಸುವ ಉದ್ದೇಶದಿಂದ ತೆರೆಯಲಾಗಿರುವ ಸೇವಾ ಕೇಂದ್ರಗಳಲ್ಲಿ ನಿತ್ಯ ನೂಕುನುಗ್ಗಲು ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಹೆಚ್ಚುವರಿ ಸೇವಾ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ನಗರದ ವಿವಿಧ ಬಡಾವಣೆಗಳ ನಿವಾಸಿಗಳು ಸೋಮವಾರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾತಿಮಾಬೀ ಇಂದುಪುರ, `ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಲು ನಗರದ ಬಡ ಜನತೆ, ಕೂಲಿ ಕಾರ್ಮಿಕರು, ಹಿಂದಳಿದ ವರ್ಗದವರು, ಮಹಿಳೆಯರು ತಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು ದಿನವಿಡಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ನಸುಕಿನ ಜಾವ 5 ಗಂಟೆಗೆಯಿಂದ ಸಂಜೆ 5 ಗಂಟೆವರೆಗೂ ಸರದಿಯಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಸೇವಾ ಕೇಂದ್ರದಲ್ಲಿ 20 ರಿಂದ 30 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ನಗರದಲ್ಲಿ ಸೇವಾ ಕೇಂದ್ರದ ಸಂಖ್ಯೆಯನ್ನು ಹೆಚ್ಚಿಸಬೇಕು. ಸೇವಾ ಕೇಂದ್ರಗಳು ದೂರ ಇದ್ದು, ಸಾರ್ವಜನಿಕರಿಗೆ ಅನುಕೂಲವಾಗು ಉದ್ದೇಶದಿಂದ ಸಮೀಪದಲ್ಲಿ ಸೇವಾ ಕೇಂದ್ರ ತೆರೆಯಬೇಕು. ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿ ವರ್ಷವಿಡಿ ಅರ್ಜಿ ಸ್ವೀಕರಿಸುವಂತೆ ಮಾಡಬೇಕು. ಸೇವಾ ಕೇಂದ್ರಗಳಲ್ಲಿ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕು. ಸೇವಾ ಕೇಂದ್ರದ ಸಿಬ್ಬಂದಿಗೆ ಸೌಜನ್ಯದಿಂದ ವರ್ತಿಸಲು ಅಧಿಕಾರಿಗಳು ಸೂಚನೆ ನೀಡಬೇಕು' ಎಂದು ಪಾತಿಮಾಬೀ ಆಗ್ರಹಿಸಿದರು.

ಅಮಿನಾಬಿ ಹಲಗೇರಿ, ನಾಗಪ್ಪ ಹಡಗಲಿ, ನಾಗಪ್ಪ ಕೊಕ್ಕನೂರು, ಹರ್ಷದ ನಾರಂಗಿ, ಆಶಾಬಿ ಕಾಗಿನೆಲೆ, ದ್ಯಾಮವ್ವ ಗೋಂದಕರ, ಲತಾ ಜೀವಳ್ಳಿ, ಶಿವಕ್ಕ ಮಾಗೋಡ, ಮಾಮಾ ಶ್ರೀಮುಲ್ಲಾ, ಶಿವಕ್ಕ ಕಳಸದ, ಇಸ್ಮಾಯಿಲ್ ಕಾಗಿನೆಲೆ, ಆಶಾಬಿ ಲೋಹಾರ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.