ಹಾವೇರಿ: ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದೊಳಗೆ ಸಾರ್ವಜನಿಕ ಸಂಚಾರಕ್ಕೆ ಅಗತ್ಯವಾದ ದಾರಿ ಬಿಡುವಂತೆ ಒತ್ತಾಯಿಸಿ ಶಾಸಕ ರುದ್ರಪ್ಪ ಲಮಾಣಿ ಅವರು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಿಗೆ ಮನವಿ ನೀಡಿರುವುದನ್ನು ಖಂಡಿಸಿ ಬುಧವಾರ ವಕೀಲರು ರಾಷ್ಟ್ರೀಯ ಹೆದ್ದಾರಿ–4ನ್ನು ತಡೆದು ಪ್ರತಿಭಟನೆ ನಡೆಸಿದರು.
ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಮೆರವಣಿಗೆ ಮೂಲಕ ಹೆದ್ದಾರಿಗೆ ಬಂದ ವಕೀಲರು, ಶಾಸಕರ ವಿರುದ್ಧ ಘೋಷಣೆ ಕೂಗಿದರಲ್ಲದೇ, ನ್ಯಾಯಾಲಯ ಎದುರಿನ ರಾಷ್ಟ್ರೀಯ ಹೆದ್ದಾರಿಯನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
‘ಈ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದ್ದಾಗಲೂ ಶಾಸಕರು ರಾಜಕೀಯ ಲಾಭಕ್ಕೋಸ್ಕರ ನ್ಯಾಯಾಲಯ ಆವರಣದಲ್ಲಿ ಸಾರ್ವಜನಿಕ ರಸ್ತೆ ಬಿಡಲು ವಿನಂತಿಸಿ ಮನವಿ ನೀಡಿದ್ದಾರೆ. ಜತೆಗೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ರಸ್ತೆಗಾಗಿ ಸರ್ವೆ ಮಾಡಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ’ ಎಂದು ಪ್ರತಿಭಟನಾ ನಿರತ ವಕೀಲರು ಆರೋಪಿಸಿದರು.
ಈ ಹಿಂದೆಯೇ ನ್ಯಾಯಾಲಯದ ಅಕ್ಕ ಪಕ್ಕದ ಪ್ರದೇಶದ ನಿವಾಸಿಗಳು, ನ್ಯಾಯಾಲಯ ಆವರಣದ ಮಧ್ಯೆ ರಸ್ತೆ ನೀಡಬೇಕು ಎಂದು ಹಿಂದಿನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಿಗೆ, ಹೈಕೋರ್ಟ್ ನಾ್ಯಯಮೂರ್ತಿಗಳಿಗೆ ಮನವಿ ಸಲ್ಲಿಸಿದ್ದರು. ಸಾರ್ವಜನಿಕರ ಈ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ನಾ್ಯಯಮೂರ್ತಿ ಸ್ಪಷ್ಟಪಡಿಸಿದ್ದರು.
ಇದರಿಂದ ಅಲ್ಲಿನ ನಿವಾಸಿಗಳು ಸುಮ್ಮನಿದ್ದರೂ ಈಗ ಅದೇ ಬೇಡಿಕೆಯನ್ನಿಟ್ಟುಕೊಂಡು ಶಾಸಕ ರುದ್ರಪ್ಪ ಲಮಾಣಿ ಅವರು, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಲು ಮುಂದಾಗಿದ್ದಾರೆ.
ನ್ಯಾಯಾಲಯವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದಕ್ಕೆ ಅವಕಾಶ ನೀಡು ವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
‘ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಸಂದರ್ಭದಲ್ಲಿ ಜನರಿಗೆ ದಾರಿ ಮಾಡಿಸಿಕೊಡುವ ಆಮಿಷ ತೋರಿಸುತ್ತಿರುವ ಶಾಸಕ ರುದ್ರಪ್ಪ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಬೇಕು’ ಎಂದು ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಚುನಾವಣಾಧಿಕಾರಿ ಪಂಪನಗೌಡ ಮೇಲ್ಸೀಮೆ ಅವರಿಗೆ ವಕೀಲರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಕೀಲ ಸಂಘದ ಮಾಜಿ ಅಧ್ಯಕ್ಷ ವಿ. ಎಫ್. ಕಟ್ಟೆಗೌಡ್ರ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಹಿರೇತನದ, ವಕೀಲರಾದ ಪರಶುರಾಮ ಅಗಡಿ, ವಿರೇಶ ಜಾಲವಾಡಗಿ, ಎ.ಸಿ. ನೀರಲಗಿ, ಪಿ.ಎಂ. ಬೆನ್ನೂರ, ಎಸ್.ಜಿ. ಹೆಗಡೆ, ಎಸ್.ಎಫ್. ವಾರ್ತೆ, ಎಸ್.ಎಚ್. ಜತ್ತಿ ಸೇರಿದಂತೆ ನೂರಾರು ವಕೀಲರು ಪಾಲ್ಗೊಂಡಿದ್ದರು.
ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತಲ್ಲದೇ, ಸುಮಾರು ಒಂದೂವರೆ ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.