ADVERTISEMENT

‘ಅಂಬೇಡ್ಕರ್‌ ಚಿಂತನೆ ಜೀವನದಲ್ಲಿ ಅಳವಡಿಸಿಕೊಳ್ಳಿ’

ಡಾ.ಅಂಬೇಡ್ಕರ್‌ರ 57ನೇ ಪರಿನಿರ್ವಾಣ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 8:34 IST
Last Updated 7 ಡಿಸೆಂಬರ್ 2013, 8:34 IST

ಹಾವೇರಿ: ಸಮಾಜದಲ್ಲಿ ಸಮಾನತೆ ತರಲು ಪ್ರಯತ್ನಿಸಿದ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ ಅವರ ಚಿಂತನೆಗಳ ಅನುಷ್ಠಾನಕ್ಕೆ ಯುವ ಮನಸ್ಸುಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಹೇಳಿದರು.

ನಗರದ ದೇವರಾಜ ಅರಸು ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ   ಡಾ. ಬಿ.ಆರ್.ಅಂಬೇಡ್ಕರ್‌ರ ೫೭ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಬದುಕಿನುದ್ದಕ್ಕೂ ದಲಿತರ ಏಳಿಗೆಗೆ ಶ್ರಮಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದ ಕೀರ್ತಿ ಅಂಬೇಡ್ಕರ್‌ಗೆ ಸಲ್ಲುತ್ತದೆ. ಅಂತಹ ವ್ಯಕ್ತಿಯನ್ನು ಕೇವಲ ಸಂವಿಧಾನ ದಿನ ಆಚರಣೆ, ಅಂಬೇಡ್ಕರ ಜಂಯತಿ ಸಂದರ್ಭಗಳಲ್ಲಿ ನೆನೆದರೆ ಸಾಲದು, ಅವರ ಆದರ್ಶ ಸಮಾಜದ ಚಿಂತನೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಧಾರವಾಡ ಕವಿವಿ ಸ್ನಾತಕೋತ್ತರ ಕೇಂದ್ರದ  ಆಡಳಿತಾಧಿಕಾರಿ ಡಾ. ಟಿ.ಎಂ.ಭಾಸ್ಕರ್‌ ಮಾತನಾಡಿ, ಪರಿಶಿಷ್ಟ ಜಾತಿ ವರ್ಗಗಳ ಯುವ ಪೀಳಿಗೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಂಡು ಉತ್ತಮ ಶಿಕ್ಷಣ ಪಡೆದು, ಸಮಾಜದಲ್ಲಿ ಬೆರೆತು ಸೌಹಾರ್ದ ಬದುಕು ಸಾಗಿಸಲು ಮುಂದಾಗಬೇಕು ಎಂದು ಸಲಹೆ ಮಾಡಿದರು.

ಸಮಾರಂಭದಲ್ಲಿ ನಗರಸಭೆ ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಮುಖ್ಯ ಲೆಕ್ಕಾಧಿಕಾರಿ ಶಿವಪುತ್ರಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ವೀರೇಶ್ವರಿ ಸುರಳಿಹಳ್ಳಿ, ಜಿ.ಪಂ.ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಡಿಎಸ್‌ಎಸ್‌ ಮುಖಂಡ ವಾಸುದೇವ ಬಸವ್ವನವರ ಸೇರಿದಂತೆ ಅನೇಕ ದಲಿತ ಮುಖಂಡರು ಪಾಲ್ಗೊಂಡಿದ್ದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ ಹೊರಪೇಟೆ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ವಂದಿಸಿದರು.

ಎಬಿವಿಪಿಯಿಂದ ಆಚರಣೆ
ಹಿರೇಕೆರೂರ:
ಸಂವಿಧಾನ ಶಿಲ್ಪಿ, ಬಾಬಾಸಾಹೇಬ್‌ ಡಾ.ಬಿ.ಆರ್. ಅಂಬೇಡ್ಕರ್ ಅವರ 57ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಶುಕ್ರವಾರ ಪಟ್ಟಣದ ಸಂತೆ ಮೈದಾನದ ಸಮೀಪವಿರುವ ಅಂಬೇಡ್ಕರ್‌ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಇಲ್ಲಿ ಅಂಬೇಡ್ಕರ್ ವೃತ್ತವನ್ನು ನೆಪ ಮಾತ್ರಕ್ಕೆ ನಿರ್ಮಿಸಲಾಗಿದೆ. ವೃತ್ತವನ್ನು ನಿರ್ಮಿಸಿ ಅನೇಕ ವರ್ಷಗಳಾಗಿದ್ದು, ಯಾವುದೇ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ.

ಅಂಬೇಡ್ಕರ್ ಹೆಸರಿನಲ್ಲಿ ನಿರ್ಮಿಸಿರುವ ವೃತ್ತದಲ್ಲಿ ಸಂವಿಧಾನ ಶಿಲ್ಪಿಯ ಪ್ರತಿಮೆ ಸ್ಥಾಪಿಸುವುದು ಅಗತ್ಯವಿದೆ. ಕೂಡಲೇ ವೃತ್ತದ ಸಮಗ್ರ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಂಡು ಸಂವಿಧಾನ ಶಿಲ್ಪಿಯ ಪ್ರತಿಮೆ ಸ್ಥಾಪಿಸುವ ಬಗ್ಗೆ ಪಟ್ಟಣ ಪಂಚಾಯಿತಿಯವರು ಕ್ರಮ ಕೈಗೊಳ್ಳಬೇಕು ಎಂದು ಎಬಿವಿಪಿ ಕಾರ್ಯಕರ್ತರು ಮನವಿ ಮಾಡಿಕೊಂಡರು.

ಅಂಬೇಡ್ಕರ್ ಜಯಂತಿ ಬರುವ ಏಪ್ರಿಲ್ ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಿವಲೀಲಾ ಎಸ್.ಆರ್. ಹಾಗೂ ಉಪಾಧ್ಯಕ್ಷ ಮಹೇಂದ್ರ ಬಡಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಶಿವಕುಮಾರ ತಿಪ್ಪಶೆಟ್ಟಿ, ಎಬಿವಿಪಿ ಮುಖಂಡರಾದ ದೇವರಾಜ ಹಂಚಿನಮನಿ, ಅನಿಲ ಪಾಟೀಲ, ವಿಜಯ ಮುದಿಗೌಡ್ರ, ಮಲ್ಲಿಕಾರ್ಜುನ ಕಲ್ಯಾಣಿ, ನವೀನ ಹಲವಾಗಿಲ, ವಿವೇಕ ಅರಳಿ, ಚೇತನಾ ಎಸ್.ಎಚ್, ಶ್ವೇತಾ ಸಂಕೊಳ್ಳಿ, ಪವಿತ್ರಾ ಎನ್.ಕೆ. ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.