ADVERTISEMENT

‘ಮಕ್ಕಳೆಂಬ ಹೂವುಗಳನ್ನು ಅರಳಿಸಿ’

ಹಾವೇರಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 6:23 IST
Last Updated 19 ಡಿಸೆಂಬರ್ 2013, 6:23 IST

ಹಾವೇರಿ: ‘ಮಕ್ಕಳೆಂಬ ಮೊಗ್ಗಿನ ಹೂವುಗಳು ಅರಳಲು, ಸೂರ್ಯನ ಕಿರಣಗಳಂತೆ ಶಿಕ್ಷಕರು ಹಾಗೂ ಪಾಲಕರು ನೆರವಾದಾಗ ಮಾತ್ರ ಅವರಲ್ಲಿರುವ ಸುಪ್ತ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ’ ಎಂದು ಹುಕ್ಕೇರಿಮಠದ ಸದಾಶಿವ ಶ್ರೀಗಳು ಹೇಳಿದರು.

ನಗರದ ಹುಕ್ಕೇರಿಮಠದ ಶಿವಬಸವೇಶ್ವರ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯ್ತಿ, ಸರ್ವಶಿಕ್ಷಣ ಅಭಿಯಾನ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತನ್ನು ನಡುಗಿಸುವ ಪತ್ರಿಭೆಗಳು ನಮ್ಮ ನಾಡಲ್ಲಿದ್ದಾರೆ. ದೇಶಿಯ ವಿಜ್ಞಾನಿಗಳು, ಎಂಜಿಯರ್‌ಗಳು ಹಾಗೂ ವೈದ್ಯರು ವಿದೇಶಗಳಲ್ಲಿ  ಭಾರತೀಯ ಸಂಸ್ಕೃತಿಯ ಛಾಪು ಮೂಡಿಸಿದ್ದಾರೆ. ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಪ್ರತಿಭೆ ಗುರುತಿಸಬೇಕು ಎಂದು ಸಲಹೆ ಮಾಡಿದರು.
ಜಿ.ಪಂ. ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡ್ರ ಮಾತನಾಡಿ, ಶಿಕ್ಷಣ ಸದಾ ಹರಿಯುವ ನೀರು. ಮನುಷ್ಯನಿಗೆ ಅಜ್ಞಾನದಿಂದ ಸುಜ್ಞಾನದ ಕಡೆಗೆ ತೆರಳಲು ಶಿಕ್ಷಣ ಅಗತ್ಯ. ಮಕ್ಕಳಗೆ ಹೊಸ ವಿಚಾರಗಳ ಕುರಿತು ತಿಳಿಹೇಳಿ ಅವರನ್ನು ಭವಿಷತ್ತಿನ ಜೀವನಕ್ಕೆ ಸಿದ್ಧಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ. ನಿರ್ಣಾಯಕರು ಯಾವುದೇ ತಾರತಮ್ಯ ಮಾಡದೇ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಉತ್ತಮ ಪ್ರತಿಭೆಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರುದ್ರಪ್ಪ ಲಮಾಣಿ ಮಾತನಾಡಿ, ಪಾಲಕರು ಮನೆಗಳಲ್ಲಿ ಟಿವಿ ಕಾರ್ಯಕ್ರಮ ವೀಕ್ಷಿಸುವುದನ್ನು ಬಿಟ್ಟು ನಿಮ್ಮ ಮಕ್ಕಳೇ ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ನೋಡಿ ಆನಂದಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜವ್ವ ಆಡಿನ, ಜಿ.ಪಂ. ಸದಸ್ಯೆ ಸುಜಾತಾ ಕೊಟಗಿಮನಿ, ಜಿ.ಪಂ. ಉಪಕಾರ್ಯದರ್ಶಿ ಜಿ.ಗೋವಿಂದ ಸ್ವಾಮಿ, ನಗರಸಭೆ ಅಧ್ಯಕ್ಷ ಐ.ಯು. ಪಠಾಣ, ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ, ಡಯಟ್‌ ಕಾಲೇಜ್‌ ಎಂ.ಡಿ.ಬಳ್ಳಾರಿ, ಶಿಕ್ಷಣಾಧಿಕಾರಿ ಜಿ.ಎನ್‌. ಜಾವೂರ, ನಿಜಲಿಂಗಪ್ಪ ಬಸೇಗಣ್ಣಿ, ಶಿವಲಿಂಗೇಶ್ವರ ವಿದ್ಯಾಪೀಠದ ಚೇರಮನ್‌ ಪಿ.ಡಿ.ಶಿರೂರ, ಕಾರ್ಯದರ್ಶಿ ವೀರಣ್ಣ ಅಂಗಡಿ ಅನೇಕ ಗಣ್ಯರು ಹಾಜರಿದ್ದರು.

ಚನ್ನಬಸಪ್ಪ ಮಾಗಾವಿ ಪ್ರೌಢ ಶಾಲೆಯ ವಿದ್ಯಾರ್ಥಿನಿರು ಪ್ರಾರ್ಥಿಸಿದರು. ಡಿಡಿಪಿಐ ಎಸ್‌.ಬಿ. ಕೊಡ್ಲಿ ಸ್ವಾಗತಿಸಿದರು. ಹನುಮಂತ ಗೌಡ ಗೊಲ್ಲರ ಹಾಗೂ ನಾಗರಾಜ ನಡುವಿನಮಠ ನಿರೂಪಿಸಿದರು. ನೋಡಲ್‌ ಅಧಿಕಾರಿ ಎಚ್‌.ಪಿ. ರಾಮಣ್ಣನವರ ವಂದಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.