ADVERTISEMENT

‘ಶಿಕ್ಷಕರು ಗುಣಾತ್ಮ ಕ ಶಿಕ್ಷಣದ ಆಧಾರ ಸ್ತಂಭ’

ಪ್ರಾಥಮಿಕ/ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ಜಿಲ್ಲಾ ಮಟ್ಟದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 7:22 IST
Last Updated 13 ಮಾರ್ಚ್ 2014, 7:22 IST
ಹಾವೇರಿ ಜಿಲ್ಲಾ ಗುರುಭವನದಲ್ಲಿ ಬುಧವಾರ ನಡೆದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ಜಿಲ್ಲಾ ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಸ್‌.ಬಿ.ಕೊಡ್ಲಿ ಮಾತನಾಡಿದರು. ಝಡ್‌.ಎಂ.ಖಾಜಿ, ಎಂ.ಡಿ.ಬಳ್ಳಾರಿ ಮತ್ತಿತರರು ಚಿತ್ರದಲ್ಲಿದ್ದಾರೆ.
ಹಾವೇರಿ ಜಿಲ್ಲಾ ಗುರುಭವನದಲ್ಲಿ ಬುಧವಾರ ನಡೆದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ಜಿಲ್ಲಾ ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಸ್‌.ಬಿ.ಕೊಡ್ಲಿ ಮಾತನಾಡಿದರು. ಝಡ್‌.ಎಂ.ಖಾಜಿ, ಎಂ.ಡಿ.ಬಳ್ಳಾರಿ ಮತ್ತಿತರರು ಚಿತ್ರದಲ್ಲಿದ್ದಾರೆ.   

ಹಾವೇರಿ: ಮಗುವಿನ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಿಸಿ ಆಟದಿಂದ ಪಾಠದವರೆಗೆ ಕರೆದೊಯ್ಯುವಲ್ಲಿ ದೈಹಿಕ ಶಿಕ್ಷಣದ ಪಾತ್ರ ಮಹತ್ವದ್ದಾಗಿದ್ದು, ದೈಹಿಕ ಶಿಕ್ಷಣ ಬೋಧಿಸುವ ಶಿಕ್ಷಕರು ಗುಣಾತ್ಮಕ ಶಿಕ್ಷಣದ ಆಧಾರ ಸ್ತಂಭವಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಸ್‌.ಬಿ.ಕೊಡ್ಲಿ ಹೇಳಿದರು.

ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಜಿಲ್ಲಾ ಗುರುಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ಜಿಲ್ಲಾ ಮಟ್ಟದ ಕಾರ್ಯಾಗಾರ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಸ್ತು ಮತ್ತು ಸಂಯಮಕ್ಕೆ ಮತ್ತೊಂದು ಹೆಸರೇ ದೈಹಿಕ ಶಿಕ್ಷಕರು. ಮಕ್ಕಳ ಬಾಹ್ಯ ಅಭಿವೃದ್ಧಿಯಲ್ಲಿ ದೈಹಿಕ ಶಿಕ್ಷಕರ ಪಾತ್ರ ಪ್ರಮುಖ ಎಂದರಲ್ಲದೇ, ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಮಾಧ್ಯಮಿಕ ಯೋಜನೆ ಜಾರಿಗೆ ಬರಲಿದೆ. ಈ ಯೋಜನೆ ಮೂಲಕ ಜಿಲ್ಲೆಯ ಶಾಲೆಗಳಿಗೆ ದೈಹಿಕ ಶಿಕ್ಷಕರ ಕೊಠಡಿ, ಪ್ರಯೋಗಾಲಯ, ತರಬೇತಿ ಕೇಂದ್ರ ಇತ್ಯಾದಿ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.

ಸಮಾರಂಭದಲ್ಲಿ ‘ಸಾಧನ ಸರಳ’ ಪುಸ್ತಕ ಬಿಡುಗಡೆ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಮಾತನಾಡಿ, ಮಕ್ಕಳು ಶಾಲೆ ಎಂಬ ತೋಟದಲ್ಲಿ ಅರಳುವ ಗುಲಾಬಿ ಹೂವುಗಳಿದ್ದಂತೆ. ಇಂತಹ ಮುಗ್ಧ ಹೂವುಗಳಿಗೆ ಶಿಕ್ಷಕರು ಅಕ್ಷರ ಎಂಬ ಜ್ಞಾನದ ನೀರು ಎರೆದು ಪೋಷಿಸುವ ಮೂಲಕ ಅವರನ್ನು ಸತ್ಪ್ರಜೆಗಳನ್ನಾಗಿ ನಿರ್ಮಿಸಬೇಕು ಎಂದು ಸಲಹೆ ಮಾಡಿದರು.

ವಿಷಯ ಶಿಕ್ಷಕರು ಮಕ್ಕಳಿಗೆ ಪಠ್ಯದ ಜ್ಞಾನ ನೀಡಿದರೇ, ದೈಹಿಕ ಶಿಕ್ಷಕರು ಮಕ್ಕಳ ಕಲ್ಯಾಣಕ್ಕಾಗಿ ಸಮಾಜದಲ್ಲಿ ಬದುಕುವ ನೈತಿಕ ಶಿಕ್ಷಣ ನೀಡುತ್ತಾರೆ. ಈ ಕಾರಣದಿಂದ ದೈಹಿಕ ಶಿಕ್ಷಕರು ಶಿಕ್ಷಣ ಇಲಾಖೆಯ ಚೈತನ್ಯ ಶಕ್ತಿಯಾಗಿದ್ದಾರೆ ಎಂದು ಹೇಳಿದರು.

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಓಂಕಾರಪ್ಪ ಮಾತನಾಡಿ, ಶಿಕ್ಷಣ ಇಲಾಖೆ ಆಧಾರ ಸ್ತಂಭವಾದ ದೈಹಿಕ ಶಿಕ್ಷಕರ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಅಲ್ಲದೇ, ದೈಹಿಕ ಶಿಕ್ಷಕರ ಅಭಿವೃದ್ಧಿಗೆ ವೈದ್ಯನಾಥ ವರದಿ ಹಾಗೂ ವೃಂದ ನೇಮಕಾತಿ ಪ್ರಕ್ರಿಯೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಡಯಟ್‌ ಕಾಲೇಜಿನ ಪ್ರಾಚಾರ್ಯ ಎಂ.ಡಿ.ಬಳ್ಳಾರಿ, ಜಿಲ್ಲಾ ಅಕ್ಷರ ದಾಸೋಹ ಯೋಜನಾ ಅಧಿಕಾರಿ ಝಡ್‌.ಎಂ.ಖಾಜಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಹೋಬಾ ನಾಯಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ವಿವಿಧ ಅಧಿಕಾರಿಗಳನ್ನು, ಜಿಲ್ಲಾ ಹಾಗೂ ರಾಜ್ಯ ಪ್ರಶಸ್ತಿ ಪಡೆದ ದೈಹಿಕ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ರಾಜಗೋಪಾಲ್‌ ನಾಯಕ, ಖಜಾಂಚಿ ನರಸೋಜಿ, ದೈಹಿಕ ಶಿಕ್ಷಕರ ಸಂಘದ ಹೋರಾಟಿ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌.ಎಸ್‌. ಹುಸೇನಿ, ಹಾನಗಲ್‌ ಬಿಇಓ ಪ್ರಭು ಸುಣಗಾರ, ಹಿರೇಕೆರೂರ ಬಿಇಓ ಎಂ.ಸಿ.ಆನಂದ, ಪ್ರಾಥಮಿಕ ವಿಭಾಗದ ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ವಿ. ಕೋಳಿವಾಡ, ಉಪಾಧ್ಯಕ್ಷ ಎಸ್‌.ಯು.ಮಾಸಿ, ವಿಷಯ ಪರಿವೀಕ್ಷಕರಾದ ಎನ್‌.ಐ.ಇಚ್ಚಂಗಿ, ಎಂ.ಎನ್‌.ನಿಂಗನಗೌಡ್ರ, ಎ.ವಿ.ಚಂದ್ರಶೇಖರ   ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿದ್ಯಾರ್ಥಿನಿ ಮಾಧುರಿ ಪ್ರಾರ್ಥಿಸಿದರು. ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಪಿ.ಜೆ.ಓಲೇಕಾರ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.