ADVERTISEMENT

11 ಅಂತರರಾಜ್ಯ ಕಳ್ಳರ ಬಂಧನ

ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ₹12 ಲಕ್ಷ ಮೌಲ್ಯದ ಚಿನ್ನಾಭರಣ ವಶ: ಎಸ್ಪಿ ಹನುಮಂತರಾಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 14:03 IST
Last Updated 14 ಆಗಸ್ಟ್ 2022, 14:03 IST
ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 11 ಅಂತರರಾಜ್ಯ ಕಳ್ಳರನ್ನು ಬಂಧಿಸಿ, ಅವರಿಂದ ವಶಪಡಿಸಿಕೊಂಡ ಚಿನ್ನಾಭರಣಗಳನ್ನು ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಪ್ರದರ್ಶಿಸಲಾಯಿತು. ಎಸ್ಪಿ ಹನುಮಂತರಾಯ, ಎಎಸ್ಪಿ ವಿಜಯಕುಮಾರ ಸಂತೋಷ ಇದ್ದಾರೆ   
ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 11 ಅಂತರರಾಜ್ಯ ಕಳ್ಳರನ್ನು ಬಂಧಿಸಿ, ಅವರಿಂದ ವಶಪಡಿಸಿಕೊಂಡ ಚಿನ್ನಾಭರಣಗಳನ್ನು ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಪ್ರದರ್ಶಿಸಲಾಯಿತು. ಎಸ್ಪಿ ಹನುಮಂತರಾಯ, ಎಎಸ್ಪಿ ವಿಜಯಕುಮಾರ ಸಂತೋಷ ಇದ್ದಾರೆ      

ಹಾವೇರಿ: ಮನೆ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ 11 ಅಂತರರಾಜ್ಯ ಕಳ್ಳರನ್ನು ರಾಣೆಬೆನ್ನೂರು ಶಹರದ ಪೊಲೀಸರು ಬಂಧಿಸಿ, ಆರೋಪಿಗಳಿಂದ ₹12 ಲಕ್ಷ ಮೌಲ್ಯದ ಚಿನ್ನಾಭರಣವನ್ನು (250 ಗ್ರಾಂ ಚಿನ್ನಾಭರಣ, 379 ಗ್ರಾಂ ಬೆಳ್ಳಿ ಆಭರಣ) ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ರಾಣೆಬೆನ್ನೂರು ನಗರದಲ್ಲಿ ಮನೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ‘ವಿಶೇಷ ತಂಡ’ ರಚಿಸಲಾಗಿತ್ತು. ರಾಣೆಬೆನ್ನೂರು ನಗರದ ಹೊರವಲಯದ ಎರೇಕುಪ್ಪಿ ಬೈಪಾಸ್‌ ರಸ್ತೆ ಸೇತುವೆ ಕೆಳಗೆ ಆ.4ರಂದು ಮಾರಕಾಸ್ತ್ರಗಳನ್ನು ಹಿಡಿದು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಮತ್ತು ಜಾಲನಾ ಜಿಲ್ಲೆಗಳಿಗೆ ಸೇರಿದ ಶಂಕರ ಸಾಯಬಾ ಜಾಧವ, ವಿಜಯ ಸರ್ಜರಾವ್‌, ಮಿಥುನ ಮಾರುತಿ ಜಾಧವ, ಬಾಬು (ಬಾಪು) ಗಂಗಾರಾಮ್‌ ಪವಾರ್‌, ಮಂಗೇಶ ಅಂಕುಶ ಸಿಂಧೆ, ದೀಪಕ್‌ ಗಂಗಾರಾಮ ಸಿಂಧೆ, ಶಿವಾಜಿ ಚಿಮೊಜಿ ಜಾಧವ, ಆಕಾಶ ಶಿವ ಸಿಂಧೆ, ದೀಪಕ್‌ ಸುರೇಶ ಪವಾರ್‌, ಅನಿಲ್‌ ಶಿಶಿರಾವ್‌ ಸಿಂದೆ ಹಾಗೂ ರಮೇಶ ಅಣ್ಣಾ ಶೋ ಸಿಂಧೆ ಬಂಧಿತ ಆರೋಪಿಗಳು.

ADVERTISEMENT

ಒಂಟಿ ಮನೆಗಳೇ ಗುರಿ:

ಆರೋಪಿಗಳು ಎರಡು, ಮೂರು ಗುಂಪುಗಳಾಗಿ ವಿಂಗಡಣೆ ಮಾಡಿಕೊಂಡು ಶಹರದ ಹೊರ ವಲಯದ ಬೀಗ ಹಾಕಿದ ಒಂಟಿ ಮನೆಗಳನ್ನು ಗುರುತಿಸಿಕೊಂಡು ಹಗಲು ಮತ್ತು ರಾತ್ರಿ ವೇಳೆಯಲ್ಲಿ ಆಯುಧದಿಂದ ಬಾಗಿಲಿನ ಬೀಗ ಮುರಿದು, ಒಳಗೆ ನುಗ್ಗಿ ಚಿನ್ನಾಭರಣ, ನಗದು ದೋಚುತ್ತಿದ್ದರು. ರಾಣೆಬೆನ್ನೂರು ನಗರದಲ್ಲಿ ನಡೆದ ಆರು ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ 7 ಆರೋಪಿಗಳನ್ನು ಹಾಗು ಇತರೆ ನಾಲ್ವರು ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಆರೋಪಿಗಳಲ್ಲಿ ಒಬ್ಬ ತೆಲಂಗಾಣ ಮತ್ತು ಆಂಧ್ರದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದವನಾಗಿದ್ದು, ಕೆಲವರು ಮೊದಲ ಬಾರಿಗೆ ಬಂಧಿತರಾಗಿದ್ದಾರೆ. ಇವರ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಹೆಚ್ಚಿನ ತನಿಖೆ ನಡೆಸಿದರೆ ಇತರ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ ಎಂದರು.

‘ಕರ್ನಾಟಕ ಪಬ್ಲಿಕ್‌ ಸೇಫ್ಟಿ ಆ್ಯಕ್ಟ್‌’ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶೀಘ್ರದಲ್ಲೇ ನಗರಸಭೆ, ವಾಣಿಜ್ಯೋದ್ಯಮಿಗಳ ಸಂಘ ಮತ್ತು ಇತರೆ ಸಂಘಟನೆಗಳನ್ನು ಆಹ್ವಾನಿಸಿ ಸಭೆ ನಡೆಸಲಾಗುವುದು. ವಾಣಿಜ್ಯ ಸಂಕೀರ್ಣ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು ಎಂದು ಎಸ್ಪಿ ಸಲಹೆ ನೀಡಿದರು.

ಕಾರ್ಯಾಚರಣೆಯಲ್ಲಿ ರಾಣೆಬೆನ್ನೂರು ಶಹರ ಇನ್‌ಸ್ಪೆಕ್ಟರ್‌ ಎಂ.ಐ.ಗೌಡಪ್ಪಗೌಡ್ರ, ಸಬ್‌ಇನ್‌ಸ್ಪೆಕ್ಟರ್‌ಗಳಾದ ಸುನಿಲ ಬಿ ತೇಲಿ, ಎಚ್‌.ಎನ್‌.ದೊಡ್ಡಮನಿ ಹಾಗೂ ಅಪರಾಧ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷ ಹಾಗೂ ಸಿಬ್ಬಂದಿ ಇದ್ದರು.

***

ಇರಾನಿ ಗ್ಯಾಂಗ್‌ ಮೇಲೆ ಸಂಶಯ

ಹಾವೇರಿ ನಗರದಲ್ಲಿ ನಡೆದಿರುವ ಮೂರ್ನಾಲ್ಕು ಸರಗಳ್ಳತನ ಪ್ರಕರಣಗಳಲ್ಲಿ ಇರಾನಿ ಗ್ಯಾಂಗ್‌ ಕೈವಾಡದ ಶಂಕೆಯಿದೆ. ಈ ವರ್ಷ ನಗರದಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿಲ್ಲ. ನಗರದಲ್ಲಿ ನಡೆದ ಸರಗಳ್ಳತನ ಮತ್ತು ಮನೆ ಕಳ್ಳತನದ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.

***

ರಾಣೆಬೆನ್ನೂರಿನ 6 ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ವಿಶೇಷ ತಂಡದ ಕಾರ್ಯ ಶ್ಲಾಘನೀಯವಾಗಿದ್ದು, ಬಹುಮಾನ ನೀಡಲಾಗುವುದು
– ಹನುಮಂತರಾಯ, ಹಾವೇರಿ ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.