ADVERTISEMENT

ಕಸ ಸಾಗಣೆಗೆ 11 ಹೊಸ ಟಿಪ್ಪರ್‌: ಕಸ ಸಂಗ್ರಹ ವಿಳಂಬ ತಪ್ಪಿಸಲು ಕ್ರಮ

ಹಾವೇರಿ ನಗರಸಭೆಯಿಂದ ₹57 ಲಕ್ಷ ವೆಚ್ಚದಲ್ಲಿ ಖರೀದಿ

ಸಿದ್ದು ಆರ್.ಜಿ.ಹಳ್ಳಿ
Published 21 ಜೂನ್ 2021, 6:31 IST
Last Updated 21 ಜೂನ್ 2021, 6:31 IST
ಮನೆ–ಮನೆಯಿಂದ ಕಸ ಸಂಗ್ರಹಿಸಲು ಹಾವೇರಿ ನಗರಸಭೆಗೆ ಹೊಸದಾಗಿ ಬಂದಿರುವ ‘ಟಿಪ್ಪರ್‌ ಡಂಪರ್‌’ ವಾಹನಗಳು  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ
ಮನೆ–ಮನೆಯಿಂದ ಕಸ ಸಂಗ್ರಹಿಸಲು ಹಾವೇರಿ ನಗರಸಭೆಗೆ ಹೊಸದಾಗಿ ಬಂದಿರುವ ‘ಟಿಪ್ಪರ್‌ ಡಂಪರ್‌’ ವಾಹನಗಳು  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ   

ಹಾವೇರಿ:ಮನೆ–ಮನೆಯಿಂದ ಕಸ ಸಂಗ್ರಹಿಸಿ, ಸಾಗಣೆ ಮಾಡಲು ಹಾವೇರಿ ನಗರಸಭೆಗೆ ₹57 ಲಕ್ಷ ವೆಚ್ಚದ ಒಟ್ಟು 11 ಹೊಸ ‘ಟಿಪ್ಪರ್‌ ಡಂಪರ್‌’ ವಾಹನಗಳು ಬಂದಿವೆ.ವಾರವಾದರೂ ಕಸ ತೆಗೆದುಕೊಂಡು ಹೋಗಿಲ್ಲ ಎಂದು ದೂರುತ್ತಿದ್ದ ನಾಗರಿಕರ ಪಾಲಿಗೆ ಇದು ಶುಭ ಸುದ್ದಿಯಾಗಿದೆ.

ಹಾವೇರಿ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, ಸುಮಾರು 78 ಸಾವಿರ ಜನಸಂಖ್ಯೆಯಿದೆ. ನಗರಸಭೆಯಲ್ಲಿ ಪ್ರಸ್ತುತ ಇದ್ದ 10 ಟಿಪ್ಪರ್‌ಗಳಲ್ಲಿ 5 ವಾಹನಗಳು ಕೆಟ್ಟು ಮೂಲೆ ಸೇರಿವೆ. ಉಳಿದ ಐದು ಟಿಪ್ಪರ್‌ಗಳು ಚಾಲ್ತಿಯಲ್ಲಿದ್ದರೂ ಹಲವಾರು ತಾಂತ್ರಿಕ ಸಮಸ್ಯೆಗಳಿಂದ ಆಗಾಗ್ಗೆ ದುರಸ್ತಿಗೆ ಬರುತ್ತಿವೆ.

ವಾಹನಗಳ ಕೊರತೆಯಿಂದ ಮನೆ–ಮನೆಯಿಂದ ಕಸ ಸಂಗ್ರಹ ವಿಳಂಬವಾಗುತ್ತಿದೆ. ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಕಸ ಸಂಗ್ರಹಿಸಲಾಗುತ್ತಿದೆ. ಕೆಲವು ವಾರ್ಡ್‌ಗಳಿಗೆ ವಾಹನವೇ ಬರುವುದಿಲ್ಲ ಎಂಬ ದೂರುಗಳು ಇವೆ. ಒಂದೇ ವಾಹನ ಐದಾರು ವಾರ್ಡ್‌ಗಳಿಗೆ ಹೋಗಿ ಕಸ ಸಂಗ್ರಹ ಮಾಡುತ್ತಿದ್ದ ಕಾರಣ ವಿಳಂಬವಾಗುತ್ತಿದೆ ಎಂಬುದು ಪೌರಕಾರ್ಮಿಕರ ಉತ್ತರ.

ADVERTISEMENT

₹77 ಲಕ್ಷ ಮೀಸಲು:‘ಕಸ ಸಂಗ್ರಹಿಸುವಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಹೊಸ ವಾಹನಗಳ ಖರೀದಿಗೆ ₹77 ಲಕ್ಷ ಮೀಸಲಿಟ್ಟಿದ್ದೆವು. ನಂತರ ನಗರಸಭೆಯಲ್ಲಿ ಠರಾವು ಮಾಡಿ, ಜಿಲ್ಲಾಧಿಕಾರಿ ನೇತೃತ್ವದ ತಾಂತ್ರಿಕ ಸಲಹಾ ಸಮಿತಿಗೆ ಪ್ರಸ್ತಾವ ಕಳುಹಿಸಲಾಗಿತ್ತು. ಸಮಿತಿಯಿಂದ ಅನುಮೋದನೆಗೊಂಡ ನಂತರ, ‘ಗವರ್ನಮೆಂಟ್‌ ಇ–ಮಾರ್ಕೆಟ್‌ಪ್ಲೇಸ್‌’ (ಜಿ.ಇ.ಎಂ) ಪೋರ್ಟಲ್‌ ಮೂಲಕ ₹57 ಲಕ್ಷ ವೆಚ್ಚದ 11 ಹೊಸ ಟಿಪ್ಪರ್‌ಗಳನ್ನು ಖರೀದಿಸಿದ್ದೇವೆ’ ಎಂದು ಪ್ರಭಾರ ಪರಿಸರ ಎಂಜಿನಿಯರ್‌ ಸೋಮಶೇಖರ ಮಲ್ಲಾಡದ ತಿಳಿಸಿದರು.

ಹಲವು ವೈಶಿಷ್ಟ್ಯಗಳು:ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ ಬಂದ ಹೊಸ ಟಿಪ್ಪರ್‌ಗಳಲ್ಲಿ ಹಸಿ ಕಸ ಮತ್ತು ಒಣ ಕಸ ಸಂಗ್ರಹಿಸಲು ಪ್ರತ್ಯೇಕ ಡಬ್ಬಗಳಿವೆ. ಹೈಡ್ರಾಲಿಕ್‌ ಸಿಸ್ಟಂ ಮೂಲಕ ಕಸವನ್ನು ‘ಕಾಂಪ್ಯಾಕ್ಟರ್‌’ ವಾಹನಕ್ಕೆ ಸುಲಭವಾಗಿ ಸುರಿಯಬಹುದು. ಪ್ರತಿಯೊಂದು ವಾಹನಕ್ಕೂ ‘ಜಿಪಿಎಸ್‌’ ಸೌಲಭ್ಯವಿದೆ. ತಲಾ ವಾಹನ ‘3 ಕ್ಯೂಬಿಕ್‌ ಮೀಟರ್‌’ ಸಾಮರ್ಥ್ಯವನ್ನು ಹೊಂದಿದ್ದು, ಹಳೆಯ ವಾಹನಗಳಿಗಿಂತ ಹೆಚ್ಚು ಕಸ ಸಂಗ್ರಹಿಸಬಹುದು.

‘ವಾಹನಗಳ ಮೇಲೆ ಚಾಲಕರ ಹೆಸರು ಮತ್ತು ಮೊಬೈಲ್‌ ಸಂಖ್ಯೆಯನ್ನು ನಮೂದಿಸುತ್ತೇವೆ. ಯಾವ ವಾರ್ಡಿಗೆ ಎಂದು ಮತ್ತು ಯಾವಾಗ ಬರುತ್ತದೆ ಎಂಬ ಮಾಹಿತಿ ನೀಡಲಾಗುತ್ತದೆ. ಜತೆಗೆ ಎಲ್ಲ ವಾಹನಗಳಿಗೂ ಧ್ವನಿವರ್ಧಕ ಅಳವಡಿಸಲಾಗಿದೆ. ಪೆಟ್ರೋಲ್‌ ಬಿಎಸ್‌–6 ಎಂಜಿನ್‌ಗಳನ್ನು ಹೊಂದಿದ್ದು, ತಲಾ ವಾಹನದಲ್ಲಿ ಒಬ್ಬ ಚಾಲಕ ಮತ್ತು ಸಹಾಯಕನನ್ನು ನಿಯೋಜಿಸಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ತಿಳಿಸಿದರು.

ಕಸದ ಸಮಸ್ಯೆ: ಸಹಾಯವಾಣಿ ಶೀಘ್ರ ಆರಂಭ

‘ಹಾವೇರಿ ನಗರದ ಕಸ ಸಂಗ್ರಹ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಸಲಹೆ ಮತ್ತು ದೂರುಗಳನ್ನು ನೀಡಲು ‘ನಾಗರಿಕರ ಸಹಾಯವಾಣಿ’ಯನ್ನು ಶೀಘ್ರ ಆರಂಭಿಸುತ್ತೇವೆ. ಇನ್ನೊಂದು ವಾರದಲ್ಲಿ 11 ಹೊಸ ಟಿಪ್ಪರ್‌ಗಳಿಗೆ ಚಾಲನೆ ನೀಡಿ, ನಾಗರಿಕರ ಸೇವೆಗೆ ಅರ್ಪಿಸಲಿದ್ದೇವೆ’ ಎಂದು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ಮೂರ್ನಾಲ್ಕು ದಿನಗಳಲ್ಲಿ ಹೊಸ ಜೆಸಿಬಿ ಮತ್ತು 3 ಟ್ರ್ಯಾಕ್ಟರ್‌ ಟ್ರೈಲರ್‌ಗಳು ಬರಲಿವೆ. ಚಾಲ್ತಿಯಲ್ಲಿರುವ ಹಳೆಯ ಟಿಪ್ಪರ್‌ಗಳಲ್ಲಿ ಮೂರನ್ನು ‘ಸ್ಕ್ರಾಪ್‌’ ಮಾಡಿ, ಎರಡನ್ನು ಉಳಿಸಿಕೊಳ್ಳುತ್ತೇವೆ. ಮಾಂಸದ ತ್ಯಾಜ್ಯ, ಕೋಳಿಯ ಪುಕ್ಕ ಸಾಗಣೆಗೆ ಒಂದು ವಾಹನ ಹಾಗೂ ಸತ್ತ ಹಂದಿ ಮತ್ತು ನಾಯಿ ಸಾಗಣೆಗೆ ಮತ್ತೊಂದು ವಾಹನ ಮೀಸಲಿಡುತ್ತೇವೆ. ಕಸ ವಿಲೇವಾರಿ ಸಮಸ್ಯೆ ಶೀಘ್ರ ಬಗೆಹರಿಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.