ADVERTISEMENT

228 ಅಂಗವಿಕಲರ ಮನೆಗಳಿಗೆ ಭೇಟಿ

‘ವಿದ್ಯಾಗಮ’ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಇಒ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 14:56 IST
Last Updated 11 ಸೆಪ್ಟೆಂಬರ್ 2020, 14:56 IST
ಹಾವೇರಿ ತಾಲ್ಲೂಕಿನ ಅಂಗವಿಕಲ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಶೈಕ್ಷಣಿಕ ಚಟುವಟಿಕೆ ಮತ್ತು ಆರೋಗ್ಯ ವಿಚಾರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್‌.ಪಾಟೀಲ 
ಹಾವೇರಿ ತಾಲ್ಲೂಕಿನ ಅಂಗವಿಕಲ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಶೈಕ್ಷಣಿಕ ಚಟುವಟಿಕೆ ಮತ್ತು ಆರೋಗ್ಯ ವಿಚಾರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್‌.ಪಾಟೀಲ    

ಹಾವೇರಿ: ಗೃಹಾಧಾರಿತ ಶಿಕ್ಷಣ ಪಡೆಯುವ ಅಂಗವಿಕಲಮಕ್ಕಳ ಮನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್‌.ಪಾಟೀಲ್ ಶುಕ್ರವಾರ ಭೇಟಿ ನೀಡಿ ಪಾಲಕರಿಗೆ ಹಾಗೂ ಮಕ್ಕಳಿಗೆ ಕಾಳಜಿ ಮತ್ತು ಆರೋಗ್ಯ ವೃದ್ಧಿಯ ಬಗ್ಗೆ ಮಾರ್ಗದರ್ಶನ ನೀಡಿದರು.

ಈ ಮಕ್ಕಳನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಿಸಲು ಸೂಚಿಸಿದರು. ತಾಲ್ಲೂಕಿನ ಎಲ್ಲ ಮೇಲುಸ್ತುವಾರಿ ಅಧಿಕಾರಿಗಳು, ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಸುಮಾರು 228 ಅಂಗವಿಕಲ ಮಕ್ಕಳ ಮನೆಗಳಿಗೆ ಭೇಟಿ ನೀಡಿ ನೀಡಿದರು.

ಗುತ್ತಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 16 ಅಂಗವಿಕಲ ಮಕ್ಕಳನ್ನು ಬಿಇಒ ಭೇಟಿ ಮಾಡಿದರು. ಪಾಲಕರಿಗೆ ಹಾಗೂ ಮಕ್ಕಳಿಗೆ ದೈನಂದಿನ ಕೌಶಲಗಳನ್ನು ಕಲಿಸುವುದು, ಸ್ವಚ್ಛತೆ ಬಗ್ಗೆ, ಎಸ್.ಓ.ಪಿ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, ಅಂತರ ಕಾಪಾಡುವುದು, ಅಂಗವಿಕಲ ಮಕ್ಕಳು ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಸಾಮಾನ್ಯ ಮಕ್ಕಳಂತೆ ಭಾಗವಹಿಸಿ ಕಲಿಕೆಯಲ್ಲಿ ಆಸಕ್ತಿ ವಹಿಸುವ ಬಗ್ಗೆ ತಿಳಿವಳಿಕೆ ನೀಡಿದರು.

ADVERTISEMENT

ಮಕ್ಕಳಿಗೆ ಯಾವುದಾದರೂ ವಿಷಯದ ಬಗ್ಗೆ ಅರ್ಥವಾಗದಿದ್ದರೆ ತಮ್ಮ ತರಗತಿ ಶಿಕ್ಷಕರನ್ನು ಕೇಳಿ ಅರ್ಥೈಸಿಕೊಳ್ಳುವುದು, ಶಿಕ್ಷಕರು ಈ ಮಕ್ಕಳ ಕಲಿಕೆ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಹೀಗೆ ಹಲವು ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಕುರಿತು ಮಾರ್ಗದರ್ಶನ ನೀಡಿದರು.

ಹಾವೇರಿ ತಾಲ್ಲೂಕಿನಲ್ಲಿ ಒಟ್ಟು 612 ಅಂಗವಿಕಲ ಮಕ್ಕಳಿದ್ದು, ಎಸ್.ಎ.ಟಿ.ಎಸ್.ನಲ್ಲಿ ದಾಖಲು ಮಾಡಲಾಗಿದೆ. ದೃಷ್ಟಿದೋಷ, ಪೂರ್ಣದೃಷ್ಟಿದೋಷ, ಮಾತಿನ ವಿಕಲತೆ, ದೈಹಿಕ ವಿಕಲತೆ, ಬುದ್ಧಿಮಾಂದ್ಯತೆ, ಬಹುವಿಕಲತೆ, ಸೆರಬ್ರಲ್ ಪಾಲಿಸಿ, ಆಟಿಸಂ, ವಿಕಲತೆಯಿಂದ ಬಳಲುತ್ತಿದ್ದಾರೆ. ಈ ಮಕ್ಕಳಲ್ಲಿ 64 ಮಕ್ಕಳು ಶಾಲೆಗೆ ಬರಲು ಆಗದೆ ಮನೆಯಲ್ಲಿ ಉಳಿದಿದ್ದು, ಗೃಹಾಧಾರಿತ ಶಿಕ್ಷಣ ಪಡೆಯುತ್ತಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಅಂಗವಿಕಲ ಮಕ್ಕಳು ಶಾಲೆಗೆ ಬರಲು ಸಾಧ್ಯವಾಗದೇ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ಈ ಅಂಗವಿಕಲ ಮಕ್ಕಳ ಶೈಕ್ಷಣಿಕ ಹಾಗೂ ವೈದ್ಯಕೀಯ ಮಾರ್ಗದರ್ಶನವನ್ನು ಎಲ್ಲಾ ಮೇಲುಸ್ತುವಾರಿ ಅಧಿಕಾರಿಗಳು ಅಂಗವಿಕಲ ಮಕ್ಕಳ ಮನೆ-ಮನೆಗೆ ಭೇಟಿ ನೀಡಲಾಗುತ್ತಿದೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಎಲ್ಲ 32 ಮೇಲುಸ್ತುವಾರಿ ಅಧಿಕಾರಿಗಳಾದ ಕ್ಷೇತ್ರ ಸಮನ್ವಯಾಧಿಕಾರಿಗಳು, ಇ.ಸಿ.ಒ.ಗಳು, ಬಿ.ಆರ್.ಪಿ.ಗಳು, ಬಿ.ಐ.ಇ.ಆರ್.ಟಿ.ಗಳು ಶುಕ್ರವಾರ ಅಂಗವಿಕಲ ಮಕ್ಕಳ ಮನೆಗೆ ಭೇಟಿ ಹಾಗೂ ಸ್ಥಳೀಯ ಶಾಲಾ ಶಿಕ್ಷಕರೊಂದಿಗೆ ಭೇಟಿ ಮಾಡಿ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಕುರಿತು ಚರ್ಚಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಸ್.ಭಗವಂತಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.