ADVERTISEMENT

ಹಾವೇರಿ | ತೀವ್ರ ಜ್ವರ: 26 ಶಂಕಿತ ಡೆಂಗಿ ಪ್ರಕರಣಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 15:39 IST
Last Updated 30 ಜುಲೈ 2024, 15:39 IST

ಹಾವೇರಿ: ಜಿಲ್ಲೆಯಲ್ಲಿ ಇದುವರೆಗೂ 611 ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಮಂಗಳವಾರ ಒಂದೇ ದಿನದಲ್ಲಿ 26 ಹೊಸದಾಗಿ ಶಂಕಿತ ಡೆಂಗಿ ಪ್ರಕರಣಗಳು ಪತ್ತೆಯಾಗಿವೆ.

ನಿರಂತರ ಮಳೆ ಹಾಗೂ ನೈರ್ಮಲ್ಯದಿಂದಾಗಿ ಡೆಂಗಿ ಪ್ರಕರಣಗಳು ಏರಿಕೆಯಾಗುತ್ತಿವೆ. ಜನವರಿಯಿಂದ ಜುಲೈ 30ರ ವರೆಗೆ 611 ಡೆಂಗಿ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ. ಈ ಪೈಕಿ 606 ಮಂದಿ ಗುಣಮುಖವಾಗಿದ್ದಾರೆ. ನಾಲ್ವರು ಮಾತ್ರ ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘611 ಪ್ರಕರಣಗಳ ಪೈಕಿ, 1 ವರ್ಷದಿಂದ 16 ವರ್ಷದೊಳಗಿನ 388 ಮಂದಿಗೆ ಡೆಂಗಿ ಇತ್ತು. ಗ್ರಾಮೀಣ ಪ್ರದೇಶದ 522 ಹಾಗೂ ನಗರ ಪ್ರದೇಶದ 89 ಮಂದಿ ಡೆಂಗಿ ಪೀಡಿತರಿದ್ದಾರೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಜ್ವರ ಹಾಗೂ ತೀವ್ರ ಜ್ವರ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಮಾಹಿತಿ ಪಡೆಯಲಾಗಿದೆ. ಇವರನ್ನು ರ‍್ಯಾಪಿಡ್ ಕಿಟ್‌ ಮೂಲಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 26 ಮಂದಿ ವರದಿ ಪಾಸಿಟಿವ್ ಬಂದಿದೆ. ಇವರೆಲ್ಲರನ್ನೂ ಎಲಿಸಾ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಪರಿಶೀಲನೆ ನಡೆಯುತ್ತಿದ್ದು, ಡೆಂಗಿ ಇದೆಯೋ ಅಥವಾ ಇಲ್ಲವೋ ಎಂಬುದು ಕೆಲ ದಿನಗಳ ನಂತರ ತಿಳಿಯಲಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಪೈಕಿ ಹಾನಗಲ್ ತಾಲ್ಲೂಕಿನಲ್ಲಿ 215 ಪ್ರಕರಣಗಳು ವರದಿಯಾಗಿದೆ. ಹಾವೇರಿ ತಾಲ್ಲೂಕಿನಲ್ಲಿ 71, ಬ್ಯಾಡಗಿಯಲ್ಲಿ 102, ರಾಣೆಬೆನ್ನೂರಿನಲ್ಲಿ 31, ಹಿರೇಕೆರೂರಿನಲ್ಲಿ 102, ರಟ್ಟೀಹಳ್ಳಿಯಲ್ಲಿ 29, ಶಿಗ್ಗಾವಿಯಲ್ಲಿ 33, ಸವಣೂರಿನಲ್ಲಿ 23 ಪ್ರಕರಣಗಳು ವರದಿಯಾಗಿವೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.