ADVERTISEMENT

ರಸ್ತೆ ಮಧ್ಯ ವಿದ್ಯುತ್‌ ಕಂಬ: ಅಭಿವೃದ್ಧಿ ಕುಂಠಿತ

ಪ್ರವೀಣ ಸಿ.ಪೂಜಾರ
Published 8 ಜನವರಿ 2018, 9:58 IST
Last Updated 8 ಜನವರಿ 2018, 9:58 IST
ಹಾವೇರಿ ವಿದ್ಯಾನಗರದ ಪಶ್ಚಿಮ ಬಡಾವಣೆಯ 2ನೇ ಕ್ರಾಸ್‌ನ ರಸ್ತೆಯ ಮಧ್ಯದಲ್ಲಿ ವಿದ್ಯುತ್‌ ಕಂಬ ಇರುವುದು
ಹಾವೇರಿ ವಿದ್ಯಾನಗರದ ಪಶ್ಚಿಮ ಬಡಾವಣೆಯ 2ನೇ ಕ್ರಾಸ್‌ನ ರಸ್ತೆಯ ಮಧ್ಯದಲ್ಲಿ ವಿದ್ಯುತ್‌ ಕಂಬ ಇರುವುದು   

ಹಾವೇರಿ: ವಿದ್ಯುತ್‌ ಕಂಬವನ್ನು ರಸ್ತೆಯ ಅಥವಾ ಗಟಾರದ ಪಕ್ಕದಲ್ಲಿ ಇರುವು ಸಾಮಾನ್ಯ. ಆದರೆ, ಇಲ್ಲಿನ ವಿದ್ಯಾನಗರದ ಪಶ್ಚಿಮ ಬಡಾವಣೆಯ 2ನೇ ಕ್ರಾಸ್‌ನಲ್ಲಿ ರಸ್ತೆಯ ಮಧ್ಯದಲ್ಲಿಯೇ ವಿದ್ಯುತ್‌ ಕಂಬ ಹಾಕಲಾಗಿದೆ. ಹೀಗಾಗಿ ರಸ್ತೆಯ ಮೆಟ್ಲಿಂಗ್‌ ಹಾಗೂ ಡಾಂಬ ರೀಕರಣ ಕಾಮಗಾರಿಗೆ ತೊಂದರೆ ಯಾಗಿದ್ದು, ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ. ಸ್ಥಳೀಯರು ನಗರಸಭೆ ಹಾಗೂ ಹೆಸ್ಕಾಂ ಅಧಿಕಾರಿಗಳನ್ನು ಶಪಿಸುತ್ತಿದ್ದಾರೆ.

ಪಕ್ಕದ ಬಡಾವಣೆಯ ರಸ್ತೆಗೆ ಸುಮಾರು 20 ವರ್ಷಗಳಲ್ಲಿ ಎರಡ್ಮೂರು ಬಾರಿ ಮೆಟ್ಲಿಂಗ್‌ ಹಾಗೂ ಡಾಂಬರ್‌ ಹಾಕಲಾಯಿತು. ಆದರೆ, ನಮ್ಮ ಬಡಾವಣೆಯ ಅಡ್ಡ ರಸ್ತೆಯಲ್ಲಿ ವಿದ್ಯುತ್‌ ಕಂಬ ಇರುವುದರಿಂದ ಮೆಟ್ಲಿಂಗ್‌ ಕೂಡಾ ಮಾಡಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

‘ರಸ್ತೆಯಲ್ಲಿ ಕಪ್ಪು ಮಣ್ಣು ಇರುವ ಕಾರಣಕ್ಕೆ ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಸಂಚರಿಸುವುದು ದುಸ್ತರವಾಗುತ್ತಿದೆ. ರಸ್ತೆಯಲ್ಲಿ ದೊಡ್ಡ ತಗ್ಗು ಗುಂಡಿಗಳು ಬಿದ್ದಿವೆ. ಈಗಲೂ ಈ ಮಾರ್ಗದಲ್ಲಿ ಬರುವ ಎಷ್ಟೋ ವಾಹನಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಾಸ್‌ ಹೋಗುತ್ತವೆ’ ಎಂದು ಸ್ಥಳೀಯರಾದ ಸಿ.ಎಚ್‌.ಖಂಡೆಪ್ಪಗೌಡ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನಮ್ಮ ಬಡಾವಣೆಯಲ್ಲಿ ಒಂದೇ ಒಂದು ಕಸದ ತೊಟ್ಟಿ ಇಲ್ಲ. ಹೀಗಾಗಿ, ಜನ ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ. ಅದನ್ನು ನಗರಸಭೆಯಿಂದ ವರ್ಷದಲ್ಲಿ ಒಮ್ಮೆ ವಿಲೇವಾರಿ ಮಾಡಿದರೆ, ಅದು ನಮ್ಮ ಪುಣ್ಯ’ ಎಂದು ಅಳಲು ತೊಡಿಕೊಂಡರು.

‘ರಸ್ತೆ ಮಧ್ಯದ ಕಂಬವನ್ನು ಸ್ಥಳಾಂತರಿಸುವಂತೆ ನಗರಸಭೆ ಅಧ್ಯಕ್ಷೆ, ಸದಸ್ಯರಿಗೆ, ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಆದರೆ,  ನಗರಸಭೆಯವರು ವಿದ್ಯುತ್‌ ಕಂಬವನ್ನು ಸ್ಥಳಾಂತರಿಸುವುದು ಹೆಸ್ಕಾಂನವರ ಕೆಲಸ ಎಂದು ಸಬೂಬು ನೀಡುತ್ತಾರೆ’ ಎಂದು ಸ್ಥಳೀಯರಾದ ಎಚ್‌.ವಿ.ಭಗವಂತಗೌಡ್ರ ದೂರಿದರು.

‘ನಗರದ ಕೆ.ಇ.ಬಿ. ಗ್ರಿಡ್‌ನಿಂದ ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ಲೈನ್‌ ಕಂಬವು ವಿದ್ಯಾನಗರದ ರಸ್ತೆ ಮಧ್ಯದಲ್ಲಿಯೇ ಇದೆ. ಅದನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ನಗರಸಭೆಯಿಂದ ಹಣ ಪಾವತಿ ಮಾಡಲಾಗಿದೆ. ಆದರೆ, ಆರು ತಿಂಗಳಲ್ಲಿಯೇ ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ಮಾರ್ಗವನ್ನು ತೆರವುಗೊಳಿಸ ಲಾಗುವುದು ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸುತ್ತಿದ್ದಾರೆ’ ಎಂದು ನಗರಸಭೆ ಸದಸ್ಯ ಶಿವಬಸವ ವನ್ನಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ವಿದ್ಯಾನಗರ ಪಶ್ಚಿಮ ಬಡಾವಣೆಯಲ್ಲಿನ ವಿದ್ಯುತ್‌ ಕಂಬವನ್ನು ಸ್ಥಳಾಂತರಿಸುವ ಕುರಿತು ಯಾರೂ ನನ್ನ ಗಮನಕ್ಕೆ ತಂದಿಲ್ಲ
ಸಿ.ಬಿ.ಹೊಸಮನಿ ಹೆಸ್ಕಾಂನ ಸಹಾಯ ಕಾರ್ಯನಿರ್ವಾಹಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.