ADVERTISEMENT

ಕನ್ನಡ ನುಡಿ ಸಂಭ್ರಮಕ್ಕೆ ಅಂತಿಮ ಸಿದ್ಧತೆ

ಸುರೇಖಾ ಪೂಜಾರ
Published 20 ಜನವರಿ 2018, 9:50 IST
Last Updated 20 ಜನವರಿ 2018, 9:50 IST
ಅಕ್ಕಿಆಲೂರಿನಲ್ಲಿ ಕನ್ನಡ ನುಡಿ ಸಂಭ್ರಮದ ಭವ್ಯ ಮಂಟಪ ನಿರ್ಮಾಣ ಅಂತಿಮ ಹಂತಕ್ಕೆ ತಲುಪಿದೆ
ಅಕ್ಕಿಆಲೂರಿನಲ್ಲಿ ಕನ್ನಡ ನುಡಿ ಸಂಭ್ರಮದ ಭವ್ಯ ಮಂಟಪ ನಿರ್ಮಾಣ ಅಂತಿಮ ಹಂತಕ್ಕೆ ತಲುಪಿದೆ   

ಅಕ್ಕಿಆಲೂರ: ವಿನಯ, ಶ್ರದ್ಧೆ, ಭಕ್ತಿ, ದಾನ, ಧರ್ಮ ಹಾಗೂ ಆಧ್ಯಾತ್ಮದಂಥ ಸದ್ಗುಣಗಳನ್ನು ಮೈಗೂಡಿಸಿಕೊಂಡು ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿರುವ ಅಕ್ಕಿಆಲೂರಿನಲ್ಲೀಗ 27 ನೇ ವರ್ಷದ ‘ಕನ್ನಡ ನುಡಿ ಸಂಭ್ರಮ’ದ ಸಡಗರ ಮನೆ ಮಾಡಿದೆ.

ಇದೇ 20 ರಿಂದ 22 ರವರೆಗೆ ಇಲ್ಲಿಯ ದುಂಡಿಬಸವೇಶ್ವರ ಜನಪದ ಕಲಾಸಂಘದ ಸಹಯೋಗದಲ್ಲಿ ಕನ್ನಡ ನುಡಿ ಸಂಭ್ರಮ ವಿಶೇಷ ಸಾಂಸ್ಕೃತಿಕ ಸಮಾರಂಭ ವೈಶಿಷ್ಟ್ಯಮಯವಾಗಿ ಆಚರಿಸುತ್ತಿರುವುದು ಸಾಹಿತ್ಯಾಸಕ್ತರಲ್ಲಿ ಸಂತಸ ಮೂಡಿಸಿದೆ. ನುಡಿ ಸಂಭ್ರಮದ ಸುಮಧುರ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನಾಗರಿಕರು ಕಾತರರಾಗಿದ್ದಾರೆ.

ಶಿರಸಿ ಗಡಿ ಅಂಚಿಗೆ ಹೊಂದಿಕೊಂಡಿರುವ ಅರೆಮಲೆನಾಡು ಪ್ರದೇಶ ಅಕ್ಕಿಆಲೂರ ವಿಶಿಷ್ಟ ಐತಿಹಾಸಿಕ ಹಿನ್ನೆಲೆ ಹೊಂದಿದೆ. 13 ನೇ ಶತಮಾನಕ್ಕೆ ಸೇರಿದ ಒಂದು ಶಾಸನ ಮತ್ತು ಎರಡು ವೀರಗಲ್ಲುಗಳು ಇಲ್ಲಿಯ ಶ್ರೀಮಂತ ಪರಂಪರೆಯನ್ನು ಸಾದರ ಪಡಿಸುತ್ತವೆ.

ADVERTISEMENT

ಇಲ್ಲಿಯ ಜನರ ಮುಖ್ಯ ಕಸುಬು ವ್ಯವಸಾಯವಾದರೂ ವ್ಯಾಪಾರಸ್ಥರ ಸಂಖ್ಯೆಯೂ ಹೆಚ್ಚಿದೆ. ಮಲೆನಾಡಿನ ಅಂಚಿನಲ್ಲಿರುವುದರಿಂದ ಇಲ್ಲಿ ಮಳೆಬೆಳೆಗೆ ಕೊರತೆಯಿಲ್ಲ. ಭತ್ತ, ಕಬ್ಬು, ಮಾವು, ಗೋವಿನಜೋಳ, ಬಾಳೆ, ಅಡಿಕೆ, ತೆಂಗು ಇಲ್ಲಿಯ ಪ್ರಮುಖ ಬೆಳೆಗಳು. ಪ್ರತಿವರ್ಷ ಮಳೆಯಿಂದ ತುಂಬಿ ತುಳುಕುವ ಕೆರೆಕಟ್ಟೆಗಳು ಮತ್ತು ಧರ್ಮಾ ನದಿಯ ಕಾಲುವೆಯ ನೀರು ಇಲ್ಲಿರುವ ಕೃಷಿ ಭೂಮಿಗೆ ಮೂಲಾಧಾರ. ಒಂದು ಕಾಲದಲ್ಲಿ ಯತೇಚ್ಛವಾಗಿ ಭತ್ತ ಬೆಳೆಯುತ್ತಿದ್ದ ಈ ಭಾಗವು ಭತ್ತದ ಕಣಜವಾಗಿ ಗಮನ ಸೆಳೆದಿತ್ತು.

ಸುಮಾರು ಎರಡೂವರೆ ಶತಮಾನದ ಹಿಂದೆ ಅಕ್ಕಿಆಲೂರ ಕೆರೆಯ ದಡದ ಮೇಲಿತ್ತೆಂದು ತಿಳಿದು ಬರುತ್ತದೆ. ತಗ್ಗು ಪ್ರದೇಶವಾಗಿದ್ದರಿಂದ ಮಳೆಗಾಲದಲ್ಲಿ ತುಂಬಿ ಕೋಡಿ ಬೀಳುತ್ತಿದ್ದರಿಂದ ಜನರು ಪ್ರವಾಹದ ಭೀತಿ ಎದುರಿಸುತ್ತಿದ್ದರು. ಊರಿನ ಜನ ಸದಾಕಾಲ ಶೀತ ಮತ್ತು ಜ್ವರದಿಂದ ಬಳಲುತ್ತಿದ್ದರು. ಇದನ್ನು ಮನಗಂಡ ಊರಿನ ಪವಾಡ ಪುರುಷ ಲಿಂ.ಚನ್ನವೀರ ಶಿವಯೋಗಿಗಳು ಈಗಿರುವ ಸ್ಥಳದಲ್ಲಿ ಊರನ್ನು ನಿರ್ಮಿಸಲು ಜನರಿಗೆ ಅಪ್ಪಣೆ ದಯಪಾಲಿಸಿದರು. ಆಗ ಈ ಪ್ರದೇಶವನ್ನು ಸವಣೂರಿನ ನವಾಬರು ಆಳುತ್ತಿದ್ದರು. ನವಾಬರ ಅನುಮತಿ ಪಡೆದು ಎತ್ತರವಾದ ಸ್ಥಳದಲ್ಲಿ ವಿಶಾಲವಾದ ಬೀದಿಗಳೊಂದಿಗೆ ಹೊಸ ಊರು ನಿರ್ಮಾಣ ಮಾಡಲಾಯಿತು ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ.

ಕಿತ್ತೂರು ಸಂಸ್ಥಾನವನ್ನು ಆಳುತ್ತಿದ್ದ ಮಲ್ಲಸರ್ಜ ದೊರೆ ಒಂದು ಬಾರಿ ಇಲ್ಲಿಗೆ ಬಂದಾಗ ಚನ್ನವೀರ ಶಿವಯೋಗಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಪ್ರಭಾವಿತನಾಗಿದ್ದರಂತೆ. ಶಿವಯೋಗಿಗಳ ಆಶೀರ್ವಾದದ ಫಲವಾಗಿ ಯುದ್ಧದಲ್ಲಿ ತನಗೆ ಜಯ ಲಭಿಸಿತು ಎಂಬ ಕೃತಜ್ಞತಾ ಭಾವದಿಂದ ವಿರಕ್ತಮಠಕ್ಕೆ ಹೆಬ್ಬಾಗಿಲು ಕಟ್ಟಿಸಿದ ಎಂದು ತಿಳಿದು ಬರುತ್ತದೆ. 1930 ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಉಪ್ಪಿನ ಸತ್ಯಾಗ್ರಹದ ಮೂಲಕ ರಾಷ್ಟ್ರವ್ಯಾಪಿ ಆಂದೋಲನಕ್ಕೆ ಕರೆ ನೀಡಿದರು.

1934 ರಲ್ಲಿ ಗಾಂಧೀಜಿ ಅಖಿಲ ಭಾರತ ಭಾರತ ಯಾತ್ರೆ ಕೈಗೊಂಡಾಗ ಅವರನ್ನು ಇಲ್ಲಿಗೆ ಬರಮಾಡಿಕೊಂಡು ₹300 ನಿಧಿಯನ್ನು ಸ್ವಾತಂತ್ರ್ಯ ಚಳವಳಿಗೆ ಸಲ್ಲಿಸಿದ ಶ್ರೇಯಸ್ಸು ಇಲ್ಲಿನ ದೇಶಭಕ್ತರದ್ದು. ಇಂಥ ವಿಶಿಷ್ಟ ಐತಿಹಾಸಿಕ ಹಿನ್ನೆಲೆ ಒಡಲಲ್ಲಿಟ್ಟುಕೊಂಡಿರುವ ಊರಿನಲ್ಲಿ ಕನ್ನಡ ನಾಡು, ನುಡಿಯ ಜಾಗೃತ ಸಂದೇಶ ಸಾರುವ ‘ಕನ್ನಡ ನುಡಿ ಸಂಭ್ರಮ'ಕ್ಕೆ ಸಿದ್ಧತೆಗಳು ನಡೆದಿವೆ. ಹಾವೇರಿ ಜಿಲ್ಲೆಯು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಭಾಗ್ಯದಿಂದ ವಂಚಿತವಾಗಿರುವ ಈ ಸಂದರ್ಭದಲ್ಲಿ ಪ್ರತಿ ಮನಸ್ಸುಗಳು ನುಡಿ ಜಾತ್ರೆಯ ಸಂಭ್ರಮವನ್ನು ಸಡಗರದಿಂದ ಎದುರು ನೋಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.