ADVERTISEMENT

ಸಮಾನತೆಗಾಗಿ ಸಾಮಾಜಿಕ ಕ್ರಾಂತಿ ಅವಶ್ಯ: ಶಾಸಕ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 10:26 IST
Last Updated 23 ಜನವರಿ 2018, 10:26 IST

ಶಿಗ್ಗಾವಿ: ‘ಸರ್ವ ಸಮಾಜದ ಸಮಾನತೆಗಾಗಿ ಅಂದು ಹೋರಾಡಿದ ಬಸವಣ್ಣನವರ ಸಾಮಾಜಿಕ ಕ್ರಾಂತಿ ಮತ್ತೆ ಅವಶ್ಯವಾಗಿದೆ. ಅದರಿಂದ ಮಾತ್ರ ಸಮಾಜದ ಏಳಿಗೆ ಸಾಧ್ಯವಿದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಸಂಗನಬಸವ ಮಂಗಲಭವನದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ಮೋಚಿಗಾರ ಸಮಾಜದ ಶಿಗ್ಗಾವಿ, ಸವಣೂರ ತಾಲ್ಲೂಕು ಸಂಘ ಹಾಗೂ ವಧು ವರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿ ಕ್ಷೇತ್ರದಲ್ಲಿ ಐಕ್ಯತೆ ಮೂಡಿದೆ. ಆದರೆ ಸಾಮಾಜಿಕ ಐಕ್ಯತೆ ಇನ್ನು ಮೂಡಿಲ್ಲ. ಹೀಗಾಗಿ ಮೋಚಿಗಾರ ಸಮಾಜ ಇತರ ಸೌಲಭ್ಯಗಳಿಂದ ಸಾಕಷ್ಟು ವಂಚಿತವಾಗಿದೆ. ಸಮಾಜದ ಯುವಕರಲ್ಲಿ ಸಾಕಷ್ಟು ಪ್ರತಿಭೆಯಿದೆ. ಆದರೆ ಅವಕಾಶಗಳಿಲ್ಲ. ಹೀಗಾಗಿ ಸಾಮಾಜಿಕ ಐಕ್ಯತೆ ಮೂಡಿದಾಗ ಮಾತ್ರ ಅದು ಪರಿಪೂರ್ಣವಾಗಿ ಬೆಳವಣಿಗೆಯಾಗಲು ಸಾಧ್ಯ’ ಎಂದರು.

ADVERTISEMENT

‘ಸಮಾಜದ ಜನರಲ್ಲಿ ಸಂಘಟ ನಾತ್ಮಕ ಗುಣಗಳು ಬೆಳೆಯಬೇಕು. ಅಲ್ಲದೆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡು ತ್ತೇವೆ ಎಂಬ ಸಂಕಲ್ಪ ಮಾಡುವುದು ಅವಶ್ಯವಾಗಿದೆ’ ಎಂದ ಅವರು, ಎಸ್ಸಿ/ಎಸ್ಟಿ ಮೀಸಲಾತಿ ಅನುದಾನ ಸುಮಾರು ₹13ಕೋಟಿ ಸಂಗ್ರಹವಿದ್ದು, ಅದನ್ನು ಸರಿಯಾಗಿ ಬಳಕೆ ಮಾಡಿಲ್ಲ ಎಂದು ಸರ್ಕಾರ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಅಜ್ಜಂಪೀರ್‌ ಖಾದ್ರಿ, ಮೋಚಿಗಾರ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಶಿವಪ್ಪ ಮುಳಗುಂದ ಮಾತನಾಡಿದರು. ಪ್ರೊ.ರಾಜು ಕೆಂಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮತನಾಡಿದರು.

ಸಂಘದ ಅಧ್ಯಕ್ಷ ಶಿವಾನಂದ ಗೌಡರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿಮರದ, ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಅರ್ಜುನ ಹಂಚಿನಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.