ADVERTISEMENT

ವ್ಯಕ್ತಿ ಚಾರಿತ್ರ್ಯಕ್ಕಿದೆ ಹೆಚ್ಚು ಶಕ್ತಿ: ಹಜಾರೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 10:05 IST
Last Updated 31 ಜನವರಿ 2018, 10:05 IST
ಕಾರ್ಯಕ್ರಮದಲ್ಲಿ ಅಣ್ಣಾ ಹಜಾರೆ ಅವರು ಉಪನ್ಯಾಸ ನೀಡಿದರು
ಕಾರ್ಯಕ್ರಮದಲ್ಲಿ ಅಣ್ಣಾ ಹಜಾರೆ ಅವರು ಉಪನ್ಯಾಸ ನೀಡಿದರು   

ಬ್ಯಾಡಗಿ (ಹಾವೇರಿ ಜಿಲ್ಲೆ): ವ್ಯಕ್ತಿ ಚಾರಿತ್ರ್ಯಕ್ಕೆ ಇರುವ ಶಕ್ತಿ ಯಾವುದೇ ಹಣ, ಆಸ್ತಿ, ಹುದ್ದೆ ಸಂಪತ್ತಿಗೆ ಇಲ್ಲ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಪಟ್ಟಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಯುವಶಕ್ತಿಯೇ ರಾಷ್ಟ್ರ ಶಕ್ತಿ’ ಕುರಿತು ಅವರು ಉಪನ್ಯಾಸ ನೀಡಿದರು.\ ‘ಚಾರಿತ್ರ್ಯ ಕಳೆದುಕೊಂಡರೆ, ಮಾತಿನ ಬೆಲೆ ಬಿದ್ದು ಹೋಗುತ್ತದೆ. ಅದಕ್ಕಾಗಿ ಬದುಕಿನಲ್ಲಿ ಆಚಾರ, ವಿಚಾರ ಹಾಗೂ ನಿಷ್ಕಳಂಕ ವ್ಯಕ್ತಿತ್ವ ಕಾಯ್ದುಕೊಳ್ಳಬೇಕು.

‘ನಾನು ಮತ್ತು ನನ್ನದು’ ಎಂದು ಎಲ್ಲರೂ ಪ್ರತಿನಿತ್ಯವೂ ಓಡುತ್ತಲೇ ಇರುತ್ತಾರೆ. ಕೆಲವರು ನನ್ನದು ಮಾತ್ರವಲ್ಲ, ‘ನಿನ್ನದೂ ನನ್ನದೇ’ ಎನ್ನುತ್ತಾರೆ. ಆದರೆ, ನಾವು ಈ ಲೋಕಕ್ಕೆ ಬರುವಾಗ ಮತ್ತು ಹೋಗುವಾಗ ಬರಿಗೈ ಇರುತ್ತದೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ.

ADVERTISEMENT

‘ಇದೆನ್ನಲ್ಲ ಕಂಡ ನನಗೆ 25ನೇ ವಯಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವ ಚಿಂತನೆ ಬಂತು. ಆದರೆ, ವಿವೇಕಾನಂದರ ಫೋಟೊ ನೋಡಿ ಉತ್ಸಾಹ ಬಂತು, ಅವರ ಜೀವನ ಚರಿತ್ರೆ ಓದಿ ಮನಸ್ಸೇ ಬದಲಾಗಿದ್ದು, ಜನರ ಸೇವೆ ಮಾಡಲು ನಿರ್ಧರಿಸಿದೆ.

‘ಅ ಬಳಿಕ, ಈ ಜೀವನವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದೇನೆ. ಸೇವೆ ಎಂದರೆ ನಾಲ್ಕು ಗೋಡೆಗಳ ಮಧ್ಯೆ ಮೂರ್ತಿಯನ್ನು ಪೂಜಿಸುವುದಲ್ಲ, ಹಳ್ಳಿ ಮತ್ತು ದೇಶವೇ ನನಗೆ ದೇವಾಲಯ, ಜನರೇ ಜನಾರ್ದನ’ ಎಂದ ಅವರು, ಅದಕ್ಕಾಗಿ ಮದುವೆ ಆಗಬಾರದು ಎಂದು ನಿರ್ಧರಿಸಿದೆ.

‘45 ವರ್ಷಗಳಿಂದ ನನ್ನ ಕುಟುಂಬದ ಬಳಿ ಹೋಗಿಲ್ಲ. ಸಹೋದರರ ಮಕ್ಕಳ ಹೆಸರೂ ನನಗೆ ಗೊತ್ತಿಲ್ಲ. ಹಳ್ಳಿ ಮತ್ತು ದೇಶವೇ ನನ್ನ ಕುಟುಂಬ. ನಮ್ಮ ಹಳ್ಳಿಯ ಗುಡಿಯಲ್ಲೆ ವಾಸ, ಊಟಕ್ಕೊಂದು ತಟ್ಟೆ ಮತ್ತು ಚಾಪೆಯೇ ನನ್ನ ಆಸ್ತಿ.

‘ಆದರೆ, ಪ್ರಶಸ್ತಿ, ಕೊಡುಗೆಗಳ ರೂಪದಲ್ಲಿ ಕೋಟಿಗಟ್ಟಲೆ ಹಣ ಬಂದಿದೆ. ಆ ಹಣವನ್ನು ಟ್ರಸ್ಟ್‌ ಸ್ಥಾಪಿಸಿ, ಜಮಾ ಮಾಡಿದ್ದೇನೆ. ಬಡ್ಡಿಯ ಹಣವನ್ನು ಬಡವರ ಸೇವೆಗಾಗಿ ಬಳಸುತ್ತಿದ್ದೇನೆ. ಆದರೆ, ನನ್ನ ಖಾತೆಯಲ್ಲಿ ಒಂದು ಪೈಸೆಯೂ ಇಟ್ಟಿಲ್ಲ ಎಂದರು.

‘ಹಣ, ಆಸ್ತಿ, ಹೆಸರಿಗಾಗಿ ಆಸೆ ಪಡಬೇಡಿ. ದೇಶವೇ ನಿಮ್ಮ ಕುಟುಂಬ ಅಂದುಕೊಳ್ಳಿ ಆಗ ನೆಮ್ಮದಿ ಸಿಗುತ್ತದೆ. ಸ್ವಾರ್ಥವಿದ್ದರೆ, ಶೌಚಾಲಯದ ಪಾಟೆ ಕಳೆದುಕೊಂಡರೂ ಚಿಂತೆ ಶುರು ಆಗುತ್ತದೆ. 40 ಸಾರಾಯಿ ಅಂಗಡಿಗಳಿದ್ದ ನಮ್ಮ ಊರಿನಲ್ಲಿ ಈಗ ಒಂದು ಮದ್ಯ, ಗುಟ್ಕಾ, ಸಿಗರೇಟು ಇತ್ಯಾದಿಗಳ ಅಂಗಡಿಗಳೇ ಇಲ್ಲ. ಯಾರಿಗೂ ಚಟವೂ ಇಲ್ಲ. ‘ಬ್ಯಾಡಗಿಯಲ್ಲಿ ಇಂತಹುದೇ ಒಂದು ಹಳ್ಳಿ ನಿರ್ಮಿಸಿ. ನಮ್ಮ ಬಳ್ಳಿಗೆ ಬಂದ ಎಲ್ಲರನ್ನೂ ಇಲ್ಲಿಗೆ ಕಳುಹಿಸುತ್ತೇನೆ ’ ಎಂದರು.

‘ಸಚಿವರು, ಅಧಿಕಾರಿಗಳು ಮನೆಗೆ’: ‘ಕಳೆದ 30 ವರ್ಷದಿಂದ ವಿವಿಧ ಆಂದೋಲನ ನಡೆಸುತ್ತಿದ್ದೇನೆ. ಇದರಿಂದ ಮಾಹಿತಿ ಹಕ್ಕು ಕಾಯಿದೆ ಸೇರಿದಂತೆ 8 ಪ್ರಬಲ ಕಾನೂನುಗಳು ಜಾರಿಗೊಂಡಿವೆ. 6 ಸಚಿವರು ಹಾಗೂ 400ಕ್ಕೂ ಹೆಚ್ಚು ಅಧಿಕಾರಿಗಗಳು ಮನೆಗೆ ಹೋಗಿದ್ದಾರೆ. ನಾನು ಲೋಕಸಭೆಯ ಹೊರಗೆ ಇದ್ದುಕೊಂಡೇ, ಯಾವುದೇ ಸಂಸದ, ಸಚಿವರಿಗಿಂತ ಪ್ರಬಲವಾಗಿಯೇ ಹೋರಾಟ ನಡೆಸುತ್ತಿದ್ದೇನೆ’ ಎಂದು ಅಣ್ಣಾ ಹಜಾರೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸ್ಮಶಾನಕ್ಕೆ ಹೋಗುವ ತನಕವೂ ಕುರ್ಚಿಯಲ್ಲಿ ಇರಬೇಕು ಎಂಬ ರಾಜಕಾರಣಿಗಳ ಆಶಯದಿಂದಲೇ ದೇಶದ ದುಸ್ಥಿತಿ ಹೀಗಾಗಿದೆ’ ಎಂದು ಹೇಳಿದರು. ಈಶ್ವರೀಯ ವಿಶ್ವವಿದ್ಯಾಲಯದ ಡಾ. ಬಸವರಾಜ್, ಭಾರತಿ ದೇವಿ, ಲೀಲಾಜಿ ಇದ್ದರು. ಮಾಜಿ ಸೈನಿಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಪರಮಣ್ಣ ಹರಕಂಗಿ ಅವರು ಅಣ್ಣಾ ಅವರನ್ನು ಗೌರವಿಸಿದರು.

‘6 ಸಚಿವರು, 400ಕ್ಕೂ ಹೆಚ್ಚು ಅಧಿಕಾರಿಗಳು ಮನೆಗೆ’

‘ಕಳೆದ 30 ವರ್ಷದಿಂದ ವಿವಿಧ ಆಂದೋಲನ ನಡೆಸುತ್ತಿದ್ದೇನೆ. ಇದರಿಂದ ಮಾಹಿತಿ ಹಕ್ಕು ಕಾಯಿದೆ ಸೇರಿದಂತೆ 8 ಪ್ರಬಲ ಕಾನೂನುಗಳು ಜಾರಿಗೊಂಡಿವೆ. 6 ಸಚಿವರು ಹಾಗೂ 400ಕ್ಕೂ ಹೆಚ್ಚು ಅಧಿಕಾರಿಗಗಳು ಮನೆಗೆ ಹೋಗಿದ್ದಾರೆ. ನಾನು ಲೋಕಸಭೆಯ ಹೊರಗೆ ಇದ್ದುಕೊಂಡೇ, ಯಾವುದೇ ಸಂಸದ, ಸಚಿವರಿಗಿಂತ ಪ್ರಬಲವಾಗಿಯೇ ಹೋರಾಟ ನಡೆಸುತ್ತಿದ್ದೇನೆ’ ಎಂದು ಅಣ್ಣಾ ಹಜಾರೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

’ಸ್ಮಶಾನಕ್ಕೆ ಹೋಗುವ ತನಕವೂ ಕುರ್ಚಿಯಲ್ಲಿ ಇರಬೇಕು ಎಂಬ ರಾಜಕಾರಣಿಗಳ ಆಶಯದಿಂದಲೇ ದೇಶದ ದುಸ್ಥಿತಿ ಹೀಗಾಗಿದೆ. ಆದರೆ, ನಾನು ದೇಹದಲ್ಲಿ ಜೀವ ಇರುವ ತನಕ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ’ ಎಂದರು.

’2 ಬಾರಿ ಸುಪ್ರೀಂ ಕೋರ್ಟ್ ಚಾಟಿ ಬೀಸಿದರೂ ಕೇಂದ್ರವು ಪ್ರಬಲ ಲೋಕಪಾಲ್ ಕಾಯಿದೆ ಜಾರಿ ಮಾಡಿಲ್ಲ, ಅವರ ಪಕ್ಷವೇ ಆಡಳಿತದಲ್ಲಿರುವ ರಾಜ್ಯಗಳಲ್ಲೇ ಲೋಕಾಯುಕ್ತ ಇಲ್ಲ. ಅವರಿಗೆ ಮನಸ್ಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.