ADVERTISEMENT

‘ಜಾತಿ ಪದ್ಧತಿ ಬದಿಗೊತ್ತಿ ಸಾಮರಸ್ಯಕ್ಕೆ ಒತ್ತು ನೀಡಿ’

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 10:17 IST
Last Updated 9 ಫೆಬ್ರುವರಿ 2018, 10:17 IST

ಅಕ್ಕಿಆಲೂರ: ‘ಜಾಗತೀಕರಣದ ಬಿರುಗಾಳಿಯಲ್ಲಿ ಬದುಕುವ ರೀತಿ–ನೀತಿ ಕಳೆದುಕೊಂಡಿದ್ದೇವೆ. ನೈತಿಕತೆಯ ದಿವಾಳಿತನದಿಂದ ಬಸವಳಿದು ದಾರಿ ತಪ್ಪಿರುವ ಸಮಾಜಿಕ ವ್ಯವಸ್ಥೆಗೆ ಹೊಸ ಚೈತನ್ಯ ತುಂಬುವ ಅಗತ್ಯವಿದ್ದು, ಜಾತಿಯ ಮೇಲಾಟ ಬದಿಗೊತ್ತಿ ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಬೇಕಿದೆ’ ಎಂದು ಮೂಲೆಗದ್ದಿಯ ಸದಾನಂದ ಶಿವಯೋಗಾಶ್ರಮದ ಚನ್ನಬಸವ ಸ್ವಾಮೀಜಿ ಹೇಳಿದರು.

ಇಲ್ಲಿನ ವಿರಕ್ತಮಠದಲ್ಲಿ ‘ಅಕ್ಕಿಆಲೂರ ಉತ್ಸವ’ದ ನಿಮಿತ್ತ ಮಂಗಳವಾರ ನಡೆದ ಆಯೋಜಿಸಿದ್ದ ಧರ್ಮಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಒತ್ತಡದ ಬದುಕಿನಿಂದಾಗಿ ಇಂದು ಪ್ರತಿಯೊಬ್ಬರೂ ಮಾನಸಿಕ ನೆಮ್ಮದಿ ಇಲ್ಲದೇ ಪರದಾಡುತ್ತಿದ್ದಾರೆ. ದಿನಕಳೆದಂತೆ ಸೌಲಭ್ಯ ಅಧಿಕವಾಗುತ್ತಿದ್ದು, ಪರಸ್ಪರ ಸಂಬಂಧ ಕಳಚುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ‘ನಮ್ಮ ಧರ್ಮವನ್ನು ಪ್ರೀತಿಸುವ ಜೊತೆಗೆ ಅನ್ಯ ಧರ್ಮಗಳನ್ನೂ ಗೌರವಿಸುವುದನ್ನು ಕಲೆಯಬೇಕು. ಮಕ್ಕಳಿಗೆ ಸಂಸ್ಕಾರ ನೀಡುವ ಮೂಲಕ ಸನ್ಮಾರ್ಗದಲ್ಲಿ ನಡೆಸಬೇಕು’ ಎಂದು ಸಲಹೆ ನೀಡಿದರು. ನರಗುಂದ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿದರು.

ADVERTISEMENT

ದುಂಡಸಿಯ ವಿರಕ್ತಮಠದ ಕುಮಾರ ಸ್ವಾಮೀಜಿ, ಬಾಳೂರಿನ ಅಡವಿಸ್ವಾಮಿಗಳ ಮಠದ ಕುಮಾರ ಸ್ವಾಮೀಜಿ, ಇಲ್ಲಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ, ಹುಬ್ಬಳ್ಳಿಯ ಶಿವಪ್ರಸಾದ ದೇವರು, ರಾಣೆಬೆನ್ನೂರಿನ ನಿಶಾ ಸಂಸ್ಥೆಯ ಅಧ್ಯಕ್ಷೆ ರುಕ್ಮಿಣಿ ಸಾವುಕಾರ, ಸ್ಥಳೀಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಮಹೇಶ ವಿರಪಣ್ಣನವರ ಅವರಿಗೆ ಸೇವಾ ಸಿರಿ, ಅರ್ಚಕರಾದ ಗದಗಯ್ಯ ಮಠದ, ಬಸಯ್ಯ ವಾಚದಮಠ, ಶಾಂತಯ್ಯ ಹಿರೇಮಠ, ಬಸಯ್ಯ ಜವಳಿಮಠ ಇದ್ದರು.

ವಚನ ನೃತ್ಯ ಪ್ರದರ್ಶನ: ಮಂಗಳವಾರ ರಾತ್ರಿ ವಿರಕ್ತಮಠದ ಅಕ್ಕನ ಬಳಗದ ಶರಣೆಯರು ಅನುಭವ ಮಂಟಪದ ರೂಪಕ ಹಾಗೂ ವಚನ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಬಸವಣ್ಣನ ಪಾತ್ರದಲ್ಲಿ ನಂದಿನಿ ವಿರಪಣ್ಣನವರ, ಅಲ್ಲಮಪ್ರಭುವಾಗಿ ಸುಜಾತಾ ಕೊಲ್ಲಾವರ, ಶರಣಯ್ಯನಾಗಿ ಶಿಕ್ಷಕಿ ಶೋಭಾ ಪಾಟೀಲ, ಬ್ರಾಹ್ಮಣನಾಗಿ ನಿರ್ಮಲಾ ಉಪ್ಪಿನ, ಅಕ್ಕಮಹಾದೇವಿಯಾಗಿ ದೀಪಾ ವಿರಪಣ್ಣನವರ, ಹರಳಯ್ಯನ ವೇಷದಲ್ಲಿ ಗಿರಿಜಾ ವಿರಪಣ್ಣನವರ ಉತ್ತಮ ಅಭಿನಯ ನೀಡಿದರೆ, ವಚನ ಗೀತೆಗೆ ಸುಮಾ ಬಡಿಗೇರ, ಮಾನಸಾ ಅಪ್ಪಾಜಿ, ವಿಮಲಾ ರಾಜಪುರೋಹಿತ್, ನಿವೇದಿತಾ ಮಿರ್ಜಿ, ಪೂಜಾ ದುರ್ಗದ, ಶೈಲಾ ದೇಶಮುಖ, ಶಿಲ್ಪಾ ಜಳಕಿ, ಅರುಣಾ ಪಾವಲಿ, ತೇಜಸ್ವಿನಿ ಸಾಲಿಮಠ, ಮಾಲಾ ವಿರಪಣ್ಣನವರ, ಸವಿತಾ ಸೊಲಬಣ್ಣನವರ, ದೀಪಾ ಗೋಧಿ ಹೆಜ್ಜೆ ಹಾಕಿದರು. ನಂತರ ಸ್ವಸ್ಥಿ ಹೆಬ್ಬಾರ ಮತ್ತು ತಂಡ ಭರತನಾಟ್ಯ ಪ್ರದರ್ಶಿಸಿತು. ಶಾಲೆ–ಕಾಲೇಜುಗಳ ವಿದ್ಯಾರ್ಥಿಗಳು ನೃತ್ಯ ವೈಭವ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.