ADVERTISEMENT

ಅನ್ನ ಕೊಡುವ ರೈತ ಗಾಂಜಾ ಕೊಡಬಾರದು: ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 12:21 IST
Last Updated 12 ಸೆಪ್ಟೆಂಬರ್ 2020, 12:21 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಹಾವೇರಿ: ‘ರೈತರು ಇಡೀ ದೇಶಕ್ಕೆ ಅನ್ನ ಕೊಡುವವರು. ಅವರು ಯಾವುದೇ ಕಾರಣಕ್ಕೂ ಗಾಂಜಾ ಕೊಡಬಾರದು. ಕೆಲವರು ಗಾಂಜಾ ಬೆಳೆದಿರುವುದು ರೈತ ಕುಲಕ್ಕೆ ಮಾಡಿದ ಅಪಮಾನವಾಗಿದೆ. ಅಂಥ ಕೀಳುಮಟ್ಟಕ್ಕೆ ಯಾರೂ ಹೋಗಬಾರದು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ರೈತರು ಅನ್ನ ಕೊಡುವುದರಿಂದ ಎಲ್ಲರೂ ಅವರನ್ನು ಅಭಿಮಾನದಿಂದ ನೆನೆಸುತ್ತಾರೆ. ಹಾಗಾಗಿ ಗಾಂಜಾ ಬೆಳೆಯುವುದು ಸರಿಯಲ್ಲ.ಕೊರೊನಾ ಸೋಂಕು ಕಡಿಮೆಯಾದ‌ ನಂತರ ರೈತರ ಮನೆಯಲ್ಲಿ ವಾಸ್ತವ್ಯ ಮಾಡುತ್ತೇನೆ ಎಂದು ತಿಳಿಸಿದರು.

‘ನಾವು ಚಿತ್ರರಂಗದಲ್ಲಿ ಇದ್ದಾಗ ಪರಿಶುದ್ಧವಾದ ವಾತವಾರಣವಿತ್ತು. ಯಾರಾದರೂ ತಪ್ಪು ಮಾಡಿದರೆ ಪಶ್ಚಾತ್ತಾಪ ಪಡುತ್ತಿದ್ದರು. ಇತ್ತೀಚೆಗೆ ಡ್ರಗ್‌ ಚಿತ್ರರಂಗಕ್ಕೆ ಕಾಲಿಟ್ಟಿದ್ದು ದುರದೃಷ್ಟಕರ. ಚಿತ್ರರಂಗದವರು ಗಾಜಿನ ಮನೆಯಲ್ಲಿರುವವರು. ನಟ–ನಟಿಯರನ್ನು ಹಿಂಬಾಲಿಸುವವರು ದೊಡ್ಡ ಸಂಖ್ಯೆಯಲ್ಲಿರುತ್ತಾರೆ. ಹಾಗಾಗಿ ಚಿತ್ರರಂಗದವರು ಇತರರಿಗೆ ‘ರೋಲ್‌ ಮಾಡೆಲ್‌’ ಆಗಿರಬೇಕು. ದಾರಿ ತಪ್ಪಿದರೆ ಅಭಿಮಾನಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂದು ಹೇಳಿದರು.

ADVERTISEMENT

ಇಡಿ ಚಿತ್ರಂಗ ಕೆಟ್ಟಿದೆ ಎಂದು ನಾನು ಹೇಳುವುದಿಲ್ಲ. ಯಾರೋ ಒಂದಿಬ್ಬರು ಮಾಡಿದ ತಪ್ಪಿಗೆ ಕಳಂಕ ಅಂಟಿಕೊಂಡಿದೆ. ಒಂದು ಕೊಡ ಹಾಲಿಗೆ ಒಂದು ಹರಳು ಉಪ್ಪು ಬಿದ್ದರೆ ಹಾಳಾಗುವಂತೆ ಚಿತ್ರರಂಗಕ್ಕೆ ಕೆಟ್ಟ ಹೆಸರು ಬಂದಿದೆ ಎಂದರು.

ಬಿಜೆಪಿ ಸರ್ಕಾರದಲ್ಲೇ ಅಶ್ಲೀಲ ವಿಡಿಯೊ ವ್ಯಸನಿಗಳಿದ್ದಾರೆ. ಡ್ರಗ್ಸ್‌ ಮಟ್ಟ ಹಾಕಲು ಹೇಗೆ ಸಾಧ್ಯ ಎಂದು ಸಾ.ರಾ.ಮಹೇಶ್ ಟ್ವೀಟ್‌ ಮಾಡಿದ್ದಾರೆ ಎಂಬ ಪ್ರಶ್ನೆಗೆ, ಯಾವ ಹುತ್ತದಲ್ಲಿ ಯಾವ ಹಾವಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಸಾ.ರಾ.ಮಹೇಶ್‌ ಹುತ್ತದಲ್ಲಿ ಯಾವ ಹಾವಿದೆಯೋ?. ಬಿಜೆಪಿಯಲ್ಲಿ ಅಂಥ ವಾತಾವರಣವಿಲ್ಲ ಎಂದರು.

‘ಬೆಳೆ ಸಮೀಕ್ಷೆ’ ಸಮರ್ಥಿಸಿಕೊಂಡ ಸಚಿವ:2017ರಲ್ಲಿ ರೈತರಿಂದ ಬೆಳೆ ಸಮೀಕ್ಷೆ ಮಾಡಿಸಿದಾಗ 3 ಸಾವಿರ ರೈತರು ವಿವರ ದಾಖಲಿಸಿದ್ದರು. ಈ ಬಾರಿ 76 ಲಕ್ಷ ರೈತರು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ನಾವು 5 ಲಕ್ಷ ರೈತರು ಭಾಗವಹಿಸಬಹುದು ಎಂದು ನಿರೀಕ್ಷಿಸಿದ್ದೆವು. ಹಾಗಾಗಿ ಬೆಳೆ ಸಮೀಕ್ಷೆ ಕರ್ನಾಟಕದ ಒಂದು ಹೆಮ್ಮೆ ಎಂದು ‘ಬೆಳೆ ಸಮೀಕ್ಷೆ’ ಯೋಜನೆಯನ್ನು ಸಮರ್ಥಿಸಿಕೊಂಡರು.

ಬೆಳೆ ಸಮೀಕ್ಷೆ ಯೋಜನೆಯನ್ನು ಕೇಂದ್ರ ಸರ್ಕಾರ ಶ್ಲಾಘಿಸಿದ್ದು, ದೇಶದಾದ್ಯಂತ ವಿಸ್ತರಣೆ ಮಾಡಲು ಒಲವು ತೋರಿದೆ. ಸೆ.11ರಿಂದ ಪಿ.ಆರ್‌.ಗಳಿಂದ ಬೆಳೆ ಸಮೀಕ್ಷೆ ಮಾಡಿಸಲಾಗುತ್ತಿದೆ. ಕೆಲವು ಕಡೆ ನೆಟ್‌ವರ್ಕ್‌ ಸಮಸ್ಯೆಯಾದ ಕಾರಣ ಸಮೀಕ್ಷೆಗೆ ತೊಡಕಾಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.