ರಟ್ಟೀಹಳ್ಳಿ: ‘ದೇಶದಲ್ಲಿ ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಆಮ್ಆದ್ಮಿ ಪಕ್ಷ ಒಳ್ಳೆಯ ಆಡಳಿತ ನೀಡಿ ಜನಮೆಚ್ಚುಗೆ ಪಡೆದುಕೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತದಲ್ಲಿಯ ಭ್ರಷ್ಟಾಚಾರ ವ್ಯವಸ್ಥೆಯನ್ನು ಕೊನೆಗಾಣಿಸಲು ಪರ್ಯಾಯವಾಗಿ ಆಮ್ಆದ್ಮಿ ಪಕ್ಷ ಕೆಲಸ ಮಾಡುತ್ತಿದೆ ಎಂದು ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಹೇಳಿದರು.
ರಟ್ಟೀಹಳ್ಳಿಯ ಪ್ರವಾಸಿಮಂದಿರದಲ್ಲಿ ಬುಧವಾರ ಪಟ್ಟಣ ಪಂಚಾಯಿತಿ ಚುನಾವಣೆ ನಿಮಿತ್ತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಉಚಿತ ಆರೋಗ್ಯಸೇವೆ, ಉಚಿತ ಗುಣಮಟ್ಟದ ಶಿಕ್ಷಣ, ಉಚಿತ ಕುಡಿಯುವ ನೀರು, ವಿದ್ಯುತ್, ಸುಂದರ ಸ್ವಚ್ಛ ಪರಿಸರ ನಿರ್ಮಾಣದೊಂದಿಗೆ ಮೂಲ ಸೌಕರ್ಯಗಳನ್ನು ಜನರಿಗೆ ಒದಗಿಸಿದೆ. ಪ್ರಾಮಾಣಿಕ ಆಡಳಿತಕ್ಕಾಗಿ ಜನರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ. ಸರ್ಕಾರಿ ಕಚೇರಿಗಳು ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದ್ದು, ಸಾರ್ವಜನಿಕರು ಹಣ ನೀಡದ ಹೊರತು ಯಾವುದೇ ಕೆಲಸ ಆಗುತ್ತಿಲ್ಲ ಎನ್ನುವುದು ಪಟ್ಟಣ ಜನತೆಯ ಧ್ವನಿಯಾಗಿದೆ’ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ‘ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 15 ವಾರ್ಡ್‌ಗಳಿಂದ ಆಮ್ ಆದ್ಮಿ ಪಕ್ಷದ ಹುರಿಯಾಳುಗಳು ಸ್ಪರ್ಧಿಸಲಿದ್ದಾರೆ. ರಾಜ್ಯ ರಾಜಕೀಯ ಚುನಾವಣೆಯಲ್ಲಿ ಕಳೆದ ಹಲವು ವರ್ಷಗಳಿಂದ ಉತ್ತಮ ಆಡಳಿತ ನೀಡಿದ ಬಿಜೆಪಿ ಕಾಂಗ್ರೆಸ್ ಕಾರ್ಯವೈಖರಿಗೆ ಜನ ಬೇಸತ್ತು ಹೋಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
ಪಕ್ಷದ ರಾಜ್ಯ ಕಾರ್ಯದರ್ಶಿ ರವಿ ಬೆಂಗಳೂರು, ಉತ್ತರ ಕರ್ನಾಟಕ ಜಂಟಿ ಕಾರ್ಯದರ್ಶಿ ಪರೀದ ನದಾಫ್, ಜಿಲ್ಲಾ ಕಾರ್ಯದರ್ಶಿ ಕುಮಾರಸ್ವಾಮಿ, ಯೋಗಿಮಠ, ರಟ್ಟೀಹಳ್ಳಿ ತಾಲ್ಲೂಕು ಅಧ್ಯಕ್ಷ ಕಲೀಲಸಾಬ ದೊಡ್ಡಮನಿ, ಹಿರೇಕೆರೂರ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ದೂದಿಹಳ್ಳಿ, ಪ್ರಧಾನ ಕಾರ್ಯದರ್ಶಿ ರಾಜೇಶ ಅಂಗಡಿ, ರಾಣೇಬೆನ್ನೂರ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಸಂಬೋಜಿ, ರುದ್ರಗೌಡ ಪಾಟೀಲ, ಮಾಲತೇಶ ಮಡಿವಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.