ADVERTISEMENT

ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಕ್ರಮ: ಧನ್ಯಕುಮಾರ ಗುಂಡೆ

ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 13:08 IST
Last Updated 5 ಏಪ್ರಿಲ್ 2022, 13:08 IST
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ‌ ಧನ್ಯಕುಮಾರ ಜಿನ್ನಪ್ಪ ಗುಂಡೆ ಅವರು ಕೇಂದ್ರ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು 
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ‌ ಧನ್ಯಕುಮಾರ ಜಿನ್ನಪ್ಪ ಗುಂಡೆ ಅವರು ಕೇಂದ್ರ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು    

ಹಾವೇರಿ: ‘ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿ ದೃಷ್ಟಿಯಿಂದ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಜಾರಿಗೊಳಿಸಲಾಗಿದೆ’ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ ಧನ್ಯಕುಮಾರ್ ಜಿನ್ನಪ್ಪ ಗುಂಡೆ ಅವರು ಹೇಳಿದರು.

ಹಾವೇರಿ ನಗರದ ಪ್ರವಾಸ ಮಂದಿರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಮುದಾಯದ ಅಲ್ಪಸಂಖ್ಯಾತರ ಸಮುದಾಯಗಳಿಗೆ ವಿಶೇಷ ಸವಲತ್ತು ನೀಡುವುದರೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಅಲ್ಪಸಂಖ್ಯಾತ ಸಮುದಾಯದ ಯುವಕರು ಸ್ವ-ಉದ್ಯೋಗ ಪ್ರಾರಂಭಿಸಲು ಶೇ 2 ಹಾಗೂ ಮಹಿಳೆಯರು ಸ್ವ-ಉದ್ಯೋಗ ಆರಂಭಿಸಲು ಶೇ 50ರಂತೆ ಸಬ್ಸಿಡಿ ಸಾಲ ಸೌಲಭ್ಯ ಒದಗಿಸಿ ಅಲ್ಪಸಂಖ್ಯಾತ ಸಮುದಾಯವನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಶ್ರಮಿಸಲಾಗುತ್ತಿದೆ. ಪ್ರೀ ಮೆಟ್ರಿಕ್, ಪೋಸ್ಟ್‌ ಮೆಟ್ರಿಕ್, ವೃತ್ತಿಪರ ಕೋರ್ಸ್‍ಗಳು ಸೇರಿ ವಿವಿಧ ಶೈಕ್ಷಣಿಕ ಚಟುವಟಿಕೆಗೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತಿದೆ ಎಂದರು.

ADVERTISEMENT

ಕೇಂದ್ರ ಅಲ್ಪಸಂಖ್ಯಾತರ ಆಯೋಗಕ್ಕೆ ನಾನು ಮೂರು ವರ್ಷ ಅವಧಿಗೆ ನೇಮಕವಾಗಿದ್ದು, ಅಲ್ಪಸಂಖ್ಯಾತರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಧಿಕಾರಿ ಅಶೋಕ್ ಗಡ್ಡಿಗೌಡರ, ಪ್ರಧಾನಮಂತ್ರಿ ಅಲ್ಪಸಂಖ್ಯಾತ ಅಭಿವೃದ್ಧಿ 15 ಅಂಶಗಳ ಕಾರ್ಯಕ್ರಮದ ಸದಸ್ಯರಾದ ರಮೇಶ ಕಳಸೂರು, ಮನೋಜ್ ಕುಮಾರ ಪುನೀತ್, ಖಾಸಿಂಸಾಬ್ ಕರಸಾಪುರ, ಸಮುದಾಯದ ಮುಖಂಡ ಮಹಮ್ಮದ್ ಸಾಧಿಕ್ ಉಜಾವರ ಇದ್ದರು.

‘ಗ್ರಾಮೀಣ ಜನರಿಗೆ ಸರ್ಕಾರಿ ಯೋಜನೆ ತಿಳಿಸಿ’

ಹಾವೇರಿ: ಸರ್ಕಾರದ ಯೋಜನೆಗಳ ಕುರಿತು ಗ್ರಾಮೀಣ ಭಾಗದ ಅಲ್ಪಸಂಖ್ಯಾತರ ಸಮುದಾಯಗಳಿಗೆ ಮಾಹಿತಿ ನೀಡುವ ಕೆಲಸವಾಗಬೇಕು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ‌ ಧನ್ಯಕುಮಾರ ಜಿನ್ನಪ್ಪ ಗುಂಡೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಕೇಂದ್ರ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಮುಸ್ಲಿಂ, ಕ್ರೈಸ್ತ, ಸಿಖ್, ಜೈನ, ಬೌದ್ಧ, ಪಾರ್ಸಿ ಒಳಗೊಂಡಂತೆ ಅಲ್ಪಸಂಖ್ಯಾತ ಸಮುದಾಯದ ಪ್ರತಿಯೊಬ್ಬರಿಗೂ ತಲುಪಬೇಕು. ಈ ಹಿನ್ನಲೆಯಲ್ಲಿ ಯೋಜನೆಗಳ ಬಗ್ಗೆ ಕಾರ್ಯಾಗಾರ ಮಾಡಬೇಕು ಹಾಗೂ ಕರಪತ್ರಗಳನ್ನು ಹಂಚುವ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು ಯೋಜನೆಗಳ ಮಾಹಿತಿ ತಿಳಿಸಬೇಕು ಎಂದರು.

ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪ್ರೀ ಮೆಟ್ರಿಕ್, ಪೋಸ್ಟ್‌ ಮೆಟ್ರಿಕ್, ವೃತ್ತಿಪರ ಕೋರ್ಸ್‍ಗಳ ವಿದ್ಯಾರ್ಥಿ ವೇತನವನ್ನು ಕಾಲಕಾಲಕ್ಕೆ ಪಾವತಿಸಬೇಕು. ವಿವಿಧ ಇಲಾಖೆಗಳಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ನಿಗದಿಪಡಿಸಿದ ಗುರಿ ಸಾಧಿಸಬೇಕು ಎಂದು ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಅಶೋಕ ಗಡ್ಡಿಗೌಡರ ಅವರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳ ಹಾಗೂ ವಸತಿ ಶಾಲೆಗಳ ಹಾಗೂ ವಿದ್ಯಾರ್ಥಿ ವೇತನ ಪಾವತಿ ಕುರಿತಂತೆ ಸಭೆಗ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.