
ಹಾವೇರಿ: ತಾಲ್ಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ‘ವ್ಯಸನಮುಕ್ತ ಗ್ರಾಮಗಳ ಸಂಕಲ್ಪ’ ಹೆಸರಿನಲ್ಲಿ ಗುರುವಾರ ಜನಜಾಗೃತಿ ಪಾದಯಾತ್ರೆ ಜರುಗಿತು.
ಹಾವೇರಿಯ ಹುಕ್ಕೇರಿಮಠದ ಜಾತ್ರಾ ಮಹೋತ್ಸವ, ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಮಹೋತ್ಸವ, ಶಿವಬಸವೇಶ್ವರ ಪ್ರಸಾದ ನಿಲಯದ ಅಮೃತ ಮಹೋತ್ಸವ ಅಂಗವಾಗಿ ಸದಾಶಿವ ಸ್ವಾಮೀಜಿಯವರ ಬೆಳ್ಳಿ ತುಲಾಭಾರ ಕಾರ್ಯಕ್ರಮ ನಡೆಯಲಿದೆ. ಇದರ ನಿಮಿತ್ತ 51 ಗ್ರಾಮಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಹನುಮನಹಳ್ಳಿಯ ಹಾಲಸ್ವಾಮಿ ಮಠದಲ್ಲಿ ಗುರುವಾರ ಜರುಗಿದ ಪಾದಯಾತ್ರೆ ಸಭೆಯಲ್ಲಿ ಆಶೀರ್ವಚನ ನೀಡಿದ ಸದಾಶಿವ ಸ್ವಾಮೀಜಿ, ‘ಯುವಜನತೆ ವ್ಯಸನಿಗಳಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರು ವ್ಯಸನಮುಕ್ತರಾಗಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಿ, ಭವ್ಯ ಭಾರತದಲ್ಲಿ ಶ್ರೇಷ್ಠ ಪ್ರಜೆಗಳಾಗಿ ಉತ್ತಮ ಜೀವನ ನಡೆಸಬೇಕು’ ಎಂದರು.
‘ಸಮಾಜದಲ್ಲಿ ಅನೇಕ ಯುವ ಜನತೆ, ಗುಟ್ಕಾ, ತಂಬಾಕು ಉತ್ಪನ್ನ, ಸಿಗರೇಟ್, ಮದ್ಯ... ಹೀಗೆ ನಾನಾ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಈ ದುಶ್ಚಟಗಳನ್ನು ಹೋಗಲಾಡಿಸಲು ಹುಕ್ಕೇರಿಮಠದ ಜಾತ್ರೆ ಅಂಗವಾಗಿ ‘ವ್ಯಸನಮುಕ್ತ ಸಮಾಜ ನಿರ್ಮಾಣ’ ಮಾಡಲು ಪಾದಯಾತ್ರೆ ಆರಂಭಿಸಿದ್ದೇವೆ’ ಎಂದರು.
‘ಇದೇ ಡಿಸೆಂಬರ್‌ನಲ್ಲಿ ಹಾವೇರಿಯ ಹುಕ್ಕೇರಿಮಠ ಜಾತ್ರಾ ಮಹೋತ್ಸವ ಆರಂಭವಾಗಲಿದೆ. ಜಾತ್ರೆಯಲ್ಲಿ ಶಾಲಾ ಸುವರ್ಣ ಮಹೋತ್ಸವ, ಪ್ರಸಾದ ನಿಲಯದ ಅಮೃತ ಮಹೋತ್ಸವ, ವಿದ್ಯಾರ್ಥಿ ಸಂಘದ ರಜತ ಮಹೋತ್ಸವ, ಜಾನುವಾರು ಜಾತ್ರೆ ಹಾಗೂ ಗುರುವಂದನಾ ಕಾರ್ಯಕ್ರಮವಿದೆ. ಜಾತ್ರೆಯಲ್ಲಿ ಹನುಮನಹಳ್ಳಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಜಾತ್ರೆಯಲ್ಲಿ ಬಸವ ಬುತ್ತಿ ಆಚರಣೆ ಮಾಡಲಾಗುತ್ತಿದೆ. ಭಕ್ತರು ತಮ್ಮ ಭಕ್ತಿಗೆ ಅನುಸಾರವಾಗಿ ರೊಟ್ಟಿ ಸೇವೆ, ಚಪಾತಿ ಸೇವೆ ಸಲ್ಲಿಸಬೇಕು. ಜಾತಿ, ಮತ, ಪಂಥ ಬಿಟ್ಟು ಬಸವ ಬುತ್ತಿ ಆಚರಣೆಗೆ ಸಲ್ಲಿಸಿದ ಸೇವೆಯು ದೇವರಿಗೆ ಸಲ್ಲುತ್ತದೆ’ ಎಂದು ಹೇಳಿದರು.
ರುದ್ರಾಕ್ಷಿ ಧಾರಣೆ: ‘ಮೈ ಮೇಲೆ ರುದ್ರಾಕ್ಷಿ ಇದ್ದರೆ, ಚರ್ಮ ರೋಗ ಬರುವುದಿಲ್ಲ. ಚರ್ಮ ರೋಗವನ್ನು ಕಳೆಯುವ ಶಕ್ತಿ ರುದ್ರಾಕ್ಷಿಗಿದೆ. ಶ್ರೀಮಠದಿಂದ ಒಂದು ಲಕ್ಷ ಜನರಿಗೆ ರುದ್ರಾಕ್ಷಿ ಧಾರಣೆ ಮಾಡುವ ಸಂಕಲ್ಪ ಮಾಡಿದ್ದೇವೆ. ತಂದೆ–ತಾಯಿ ಇಲ್ಲದವರು, ಆರ್ಥಿಕವಾಗಿ ತೊಂದರೆಗೆ ಒಳಗಾದವರು, ಶಿಕ್ಷಣ ಕೊಡಿಸಲು ತಮ್ಮ ಮಕ್ಕಳನ್ನು ಮಠದ ಜೋಳಿಗೆಗೆ ಹಾಕಬಹುದು. 10ನೇ ತರಗತಿವರೆಗೆ ಶಿಕ್ಷಣ ಕೊಡಿಸುವ ಕೆಲಸ ಹುಕ್ಕೇರಿಮಠ ಮಾಡುತ್ತದೆ’ ಎಂದು ಸ್ವಾಮೀಜಿ ತಿಳಿಸಿದರು.
ಅಕ್ಕಿಆಲೂರು ಶಿವಬಸವ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೇರೂರ ಗುಬ್ಬಿ ನಂಜುಂಡೇಶ್ವರ ಸ್ವಾಮೀಜಿ, ಶಿವಬಸವ ದೇವರು, ಓಂ ಗುರೂಜಿ, ಮಲ್ಲಿಕಾರ್ಜುನ ದೇವರು, ವಿರೂಪಾಕ್ಷ ದೇವರು, ಘನಲಿಂಗ ದೇವರು, ರಾಮಕೃಷ್ಣ ದೇವರು, ಹಾಲಸ್ವಾಮಿ ಮಠದ ಸಣ್ಣ ಹಾಲಸ್ವಾಮೀಜಿ, ಓಂಕಾರ ಹಾಲಸ್ವಾಮೀಜಿ, ರುದ್ರಯ್ಯ ಶಾಸ್ತ್ರಿ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.