ADVERTISEMENT

ಕೋವಿಡ್ ಲಸಿಕೆ ಅಭಿಯಾನ: ಶೇ 90ರ ಗುರಿ ಸಾಧನೆಗೆ ಸೂಚನೆ –ಸಿಎಂ ಬಸವರಾಜ ಬೊಮ್ಮಾಯಿ

'ಗ್ರಾಮ ಮಟ್ಟದಲ್ಲಿ ಲಸಿಕಾಕರಣಕ್ಕೆ ಆದ್ಯತೆ ನೀಡಿ'

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 15:47 IST
Last Updated 25 ನವೆಂಬರ್ 2021, 15:47 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಸಿಇಒ ಮೊಹಮ್ಮದ್‌ ರೋಶನ್‌, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ ಪಾಲ್ಗೊಂಡಿದ್ದರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಸಿಇಒ ಮೊಹಮ್ಮದ್‌ ರೋಶನ್‌, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ ಪಾಲ್ಗೊಂಡಿದ್ದರು   

ಹಾವೇರಿ: ಜಿಲ್ಲೆಯಲ್ಲಿ ಮಿಷನ್ ಮೋಡ್‍ನಲ್ಲಿ ಕೋವಿಡ್ ಲಸಿಕಾ ಅಭಿಯಾನ ಕೈಗೊಂಡು ಒಂದು ವಾರದ ಒಳಗಾಗಿ ರಾಜ್ಯದ ಲಸಿಕಾ ಸರಾಸರಿ ಪ್ರಮಾಣ ದರದ ಸಮನಾಗಿ ಶೇ 90ರಷ್ಟು ಜನರಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡುವ ಗುರಿ ಸಾಧಿಸುವಂತೆ ಜಿಲ್ಲೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಕೋವಿಡ್ ಲಸಿಕೆ ಕಾರ್ಯಕ್ರಮ ಪ್ರಗತಿ ಕುರಿತಂತೆ ಜಿಲ್ಲಾಡತದೊಂದಿಗೆ ಬೆಂಗಳೂರಿನಿಂದ ಗುರುವಾರ ಸಂಜೆ ವಿಡಿಯೊ ಸಂವಾದದ ಮೂಲಕ ಜಿಲ್ಲೆಗಳ ಕೋವಿಡ್ ಲಸಿಕೆಯ ಪ್ರಗತಿಯ ಮಾಹಿತಿ ಪಡೆದುಕೊಂಡರು.

ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ನೂರರಷ್ಟು ಪ್ರಮಾಣದಲ್ಲಿ ಮೊದಲ ಡೋಸ್ ಹಾಗೂ ಶೇ 70ರಷ್ಟು ಪ್ರಮಾಣದಲ್ಲಿ ಎರಡನೇ ಡೋಸ್ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಪ್ರಸ್ತುತ ರಾಜ್ಯದ ಸರಾಸರಿಯಂತೆ ಮೊದಲ ಡೋಸ್ ಶೇ 90ರಷ್ಟು ಹಾಗೂ ಎರಡನೇ ಡೋಸ್ ಶೇ 57ರಷ್ಟಿದೆ ಎಂದರು.

ADVERTISEMENT

ರಾಜ್ಯದ ಸರಾಸರಿ ಪ್ರಮಾಣಕ್ಕೆ ಸಮನಾಗಿ ಹಾವೇರಿ ಜಿಲ್ಲೆಯಲ್ಲೂ ಒಂದು ವಾರದೊಳಗೆ ಜಿಲ್ಲೆಯಲ್ಲಿ ಪ್ರಸ್ತುತ ಶೇ 86.11 ರಷ್ಟಿರುವ ಮೊದಲ ಡೋಸ್ ಲಸಿಕೆ ಪ್ರಮಾಣವನ್ನು ಶೇ 90ರಷ್ಟಕ್ಕೆ ಹಾಗೂ ಶೇ 46.11ರಷ್ಟಿರುವ ಎರಡನೇ ಡೋಸ್ ಲಸಿಕಾ ಪ್ರಮಾಣವನ್ನು ರಾಜ್ಯದ ಸರಾಸರಿಗೆ ಸಮನಾಗಿ ಶೇ 70ರಷ್ಟು ಗುರಿ ಸಾಧಿಸಬೇಕು ಎಂದು ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲಸಿಕೆ ಪ್ರಮಾಣ ಯಾವ ಗ್ರಾಮದಲ್ಲಿ ಕಡಿಮೆ ಇದೆಯೋ, ಯಾವ ಪ್ರದೇಶದಲ್ಲಿ ಲಸಿಕೆ ಹಾಕಿಸಕೊಳ್ಳಲು ಜನ ಹಿಂಜರಿಯುತ್ತಾರೋ ಅಂತಹವರ ಮನವೊಲಿಸಿ ಲಸಿಕೆ ನೀಡುವ ಕೆಲಸವಾಗಬೇಕು. ಇವರನ್ನು ಪ್ರಭಾವಿಸುವ ವ್ಯಕ್ತಿ, ಸಂಸ್ಥೆಗಳನ್ನು ಬಳಸಿಕೊಂಡು ನಿಗದಿತ ಗುರಿ ಸಾಧಿಸುವಂತೆ ಸೂಚನೆ ನೀಡಿದರು.

ಮೂರನೇ ಅಲೆ ಗೋಚರ:ಕೋವಿಡ್ ಅಲೆ ಕಡಿಮೆಯಾಗಿದೆ ಎಂಬ ಭಾವನೆ ಬೇಡ. ಈಗಾಗಲೇ ಮೂರನೇ ಅಲೆ ಆರಂಭದ ಲಕ್ಷಣಗಳು ದೇಶ ಮತ್ತು ರಾಜ್ಯದಲ್ಲಿ ಗೋಚರವಾಗುತ್ತಿದೆ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪ್ರತಿನಿತ್ಯ ಕನಿಷ್ಠ ಒಂದು ತಾಸು ಕೋವಿಡ್ ಲಸಿಕಾ ಪ್ರಗತಿಯ ಕುರಿತಂತೆ ಪರಿಶೀಲನೆ ನಡೆಸಬೇಕು ಎಂದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಪ್ರಗತಿ ಕುರಿತಂತೆ ಮಾಹಿತಿ ನೀಡಿ, ನಿಗದಿತ ಗುರಿ ಸಾಧಿಸಲು ಈಗಾಗಲೇ ತಂಡಗಳನ್ನು ರಚಿಸಿ ಜನರ ಮನವೊಲಿಕೆ ಕ್ರಮವಹಿಸಲಾಗಿದೆ. ‘ಗೀವ್ ಇಂಡಿಯಾ ಹಾಗೂ ಕೇರ್ ಇಂಡಿಯಾ’ ಎಂಬ ಎರಡು ಸ್ವಯಂ ಸೇವಾ ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಜಿಲ್ಲೆಯ ಕೋವಿಡ್ ಲಸಿಕಾ ಕಾರ್ಯಕ್ರಮದ ಯಶಸ್ವಿಗೆ ಕೆಲಸ ಮಾಡಲು ಮುಂದೆ ಬಂದಿವೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 11,79,000 ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, 10,15,185 ಜನರಿಗೆ ಮೊದಲ ಡೋಸ್, 5,50,902 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದ ಸರಾಸರಿ ಪ್ರಮಾಣದಲ್ಲಿ ಲಸಿಕೆ ಹಾಕಲು ಎಲ್ಲ ಕ್ರಮವಹಿಸುವುದಾಗಿ ಮಾಹಿತಿ ನೀಡಿದರು.

ವಿಡಿಯೊ ಸಂವಾದದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ, ತಹಶೀಲ್ದಾರ ಗಿರೀಶ ಸ್ವಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.