ಶಿಗ್ಗಾವಿ: ದೇಶ ದೇಶಗಳ ನಡುವಿನ ಯುದ್ದ, ವೈಷಮ್ಯ ನಿಲ್ಲಬೇಕು. ಸರ್ವ ಧರ್ಮದ ಸಾರ ಒಂದೇ ಎಂಬ ಸತ್ಯಾಂಶ ಮನುಕುಲ ಅರಿಯಬೇಕಾಗಿದೆ. ಒಗ್ಗಟ್ಟಿನ ಮಂತ್ರವನ್ನು ಸರ್ವರು ಜಪಿಸುವುದು ಮುಖ್ಯವಾಗಿದೆ ಎಂದು ಮುಂಡಗೋಡದ ಬೌದ್ಧ ಧರ್ಮದ ಲಾಮಾ ಲೋಬಸಂಗ್ ಟಾಫ್ ಗೇಲ್ ಗುರೂಜಿ ಸಲಹೆ ನೀಡಿದರು.
ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಗುರುವಾರ ಮೊಹರಂ ಹಬ್ಬದ ಅಂಗವಾಗಿ ನಡೆದ ವಿವಿಧ ಧರ್ಮದ ಸಾಮೀಜಿಗಳು ಮತ್ತು ಮುಖಂಡರಿಂದ ‘ಭಾವೈಕ್ಯ ನಡಿಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭಾವೈಕ್ಯ ನೆಲದಿಂದ ಸಮಾನತೆ, ಸೌಹಾರ್ದತೆ ಸಂದೇಶ ಇಡೀ ಜಗತ್ತಿಗೆ ತೋರಿಸಬೇಕಾಗಿದೆ. ಬೇರೆ ದೇಶದಿಂದ ಭಾರತಕ್ಕೆ ಕಲಿಯಲು ಬರುತ್ತಿದ್ದಾರೆ. ಇಡೀ ವಿಶ್ವದಲ್ಲಿ ಶಾಂತಿ, ನೆಮ್ಮದಿ, ಸಹೋದರತೆ ತೋರುವ ಮೂಲಕ ವಿಶ್ವಶಾಂತಿ ಸಂದೇಶ ಪ್ರಚಾರಿಸಿದೆ. ಅಂತಹ ಗುಣ ಭಾರತ ಹಾಗೂ ಭಾರತೀಯರಲ್ಲಿದೆ ಎಂದರು.
ಮುಸ್ಲಿಂ ಧರ್ಮ ಗುರು ಸೈಯದ ಶಾ ಮೊಹ್ಮದ ಖುತುಬ್ ಎ ಅಲಂ ಖಾದ್ರಿ ಮಾತನಾಡಿ, ಮನುಷ್ಯನಲ್ಲಿನ ದ್ವೇಷ ಭಾವನೆ ನಾಡಿನ ಏಳ್ಗೆಗೆ ಮಾರಕವಾಗಿದೆ. ಸಮಾನತೆ, ಪ್ರೀತಿ, ವಿಶ್ವಾಸಗಳಿಂದ ಪ್ರತಿ ಕಾಯಕದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ಅದಕ್ಕೆ ಭಾರತ ದೇಶವೇ ಸಾಕ್ಷಿಯಾಗಿದೆ. ಸರ್ವ ಧರ್ಮದ ಶಾಂತಿ ತೋಟವೆಂದರೆ ಭಾರತ ಬಿಟ್ಟು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಸೂರ್ಯ, ಚಂದ್ರ ಮತ್ತು ಭೂಮಿಯ ಸಹನಾಶಕ್ತಿ ಪ್ರತಿಯೊಬ್ಬರಲ್ಲಿ ಮೂಡಬೇಕು. ಭಾರತ ದೇಶ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದರು.
ಕ್ರೈಸ್ತ ಧರ್ಮ ಗುರು ಫಾಧರ ಮೈಕೇಲ್ ವಾಗ್ ಗುರೂಜಿ ಮಾತನಾಡಿ, ಹಳ್ಳ, ನದಿ, ಹೊಂಡಗಳು ಹರಿದು ಸಮುದ್ರ ಸೇರುವಂತೆ ಮನುಕುಲದ ಪ್ರಾರ್ಥನೆ ಒಂದೆ ಆಗಿದೆ. ಅವುಗಳ ಆಚರಣೆ ಬೇರೆ, ಬೇರೆಯಾಗಿದ್ದರು. ಮನಸ್ಸಿನ ಭಾವನೆಗಳು ಒಂದೇ ಆಗಿವೆ. ಹೀಗಾಗಿ ಸರ್ವ ಸಮುದಾಯಗಳಲ್ಲಿ ಸಮಾನತೆ ತತ್ವ ಮೂಡಬೇಕು ಎಂದರು.
ವಿರಕ್ತಮಠದ ಸಂಗನಬಸವ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ಸರ್ವ ಧರ್ಮದಲ್ಲಿ ಸಮಾನತೆ ದೇಶದ ಅಭಿವೃದ್ಧಿಗೆ ಕಾರಣ, ಹಬ್ಬ ಹರಿದಿಗಳನ್ನು ಒಗ್ಗಟ್ಟಿನಿಂದ ಆಚರಿಸಬೇಕು ಎಂದರು.
ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಪ್ರತಿ ಮನುಷ್ಯನಿಗೆ ಸಂಸ್ಕಾರಯುತ ಜೀವನ ಮುಖ್ಯವಾಗಿದೆ. ಧರ್ಮಗಳು ಅಡ್ಡಿಬರಬಾರದು. ಶ್ರೇಷ್ಟ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಹುಬ್ಬಳ್ಳಿ ಗುರುಸಿಂಗ್ ಸಭಾ ಗುರುದ್ವಾರದ ಶಿಖ್ ಧರ್ಮದ ಗುರು ಗ್ಯಾನಿ ಗುರುವಂತಸಿಂಗ್, ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ್ , ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಮಾತನಾಡಿದರು.
ಸದಾಶಿವಪೇಟೆ ಶರಣಬಸವೇಶ್ವರ ದಾಸೋಹಮಠದ ಶಿವದೇವ ಶರಣರು, ಭಾವನಾಮಠದ ಚಂದ್ರಪ್ಪ ಕಾಳೆ ಸಾಧುಮಾಹಾರಾಜರು, ಭೌದ್ಧ ಧರ್ಮ ಗುರುಗಳಾದ ಸೋನಮ್ ಜಾಂಗ್ ಚುಪ್, ನಂಗವಾಂಗ್ ಲುಡುಪ್, ಜಂಪಾ ಲೋಬಸಂಗ, ಲೋಬಸಂಗ್ ಟಾಫ್ ಗೇಲ್, ಮುಸ್ಲಿಂ ಗುರುಗಳಾದ ಹುಬ್ಬಳ್ಳಿ ಸೈಯದ ತಾಜುದ್ಧೀನ್ ಖಾದ್ರಿ, ಧಾರವಾಡದ ಸೈಯದಶಾ ವಲೀಯುಲ್ಲಾ ಖಾದ್ರಿ, ಜಹೀರ ರಝಾ ಹಾಸ್ಕಿಂ ಸುತಾರಿ, ಮೌಲಾನಾ ಖ್ವಾಜಾ ಮೊಹಿಯುದ್ದಿನ ಖಾದ್ರಿ, ಸೈಯದಶಾ ಮೊಹಮ್ಮದ ಹುಸೈನಿ ಬಾದಷಾ ಖಾದ್ರಿ ಸಾನ್ನಿಧ್ಯ ವಹಿಸಿದ್ದರು.
ಮುಖಂಡರಾದ ಮುಖ್ತ್ಯಾರಖಾನ ತಿಮ್ಮಾಪುರ, ಜೀಲಾನಿ ಜಂಗ್ಲಿ, ಮಜಿದ ಮಾಳಗಿಮನಿ, ಡಿ.ಎಸ್.ಓಲೇಕಾರ, ಮಖಬೂಲ ಅಹ್ಮದ ಗುಜ್ಜರ, ಅಸ್ಕರ ಅಲಿ ಮುಕ್ಕೇರಿ, ಮೌಲಾಲಿ ಟಪಾಲ, ರಬ್ಬಾನಿ ಗೂಟಗೋಡಿ, ಇಮಾಮ ಹುಸೇನ ಅದಂಬಾಯಿ, ಅಬ್ದುಲಖಾದರ ಸವಣೂರ ಸೇರಿದಂತೆ ಹಿಂದೂ, ಮುಸ್ಲಿಂ ಸರ್ವ ಧರ್ಮದ ಮುಖಂಡರು ಇದ್ದರು.
ಗಣ್ಯರ ಮೂರ್ತಿಗಳಿಗೆ ಪೂಜೆ
ಪಟ್ಟಣದಲ್ಲಿ ಗುರುವಾರ ಮೊಹರಂ ಹಬ್ಬದ ಅಂಗವಾಗಿ ನಡೆದ ವಿವಿಧ ಧರ್ಮದ ಸಾಮೀಜಿಗಳು ಮತ್ತು ಮುಖಂಡರಿಂದ ’ಭಾವೈಕ್ಯ ನಡೆಗೆ‘ ಕಾರ್ಯಕ್ರಮ ಆರಂಭವನ್ನು ಕಿತ್ತೂರ ರಾಣಿ ಚನ್ನಮ್ಮ ಮೂರ್ತಿಗೆ ಹೂವಿನ ಹಾರ ಹಾಕುವುದರ ಮೂಲಕ ಚಾಲನೆ ನೀಡಿದರು. ನಂತರ ಮಾಬಿಸಾ ದರ್ಗಾಕ್ಕೆ ಭೇಟಿ ನೀಡಿ ಹೂವಿನ ಹಾರ ಹಾಕಿ ನಮಿಸಿದರು. ನಂತರ ಡಾ.ಬಿ.ಆರ್.ಅಂಬೇಡ್ಕರ ಮೂರ್ತಿಗೆ ಹೂವಿನ ಹಾರ ಹಾಕಿದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ವೈಭವದೊಂದಿಗೆ ಭಾವೈಕ್ಯ ನಡೆಗೆ ಸಂಚರಿಸಿತು. ಸಾಲಗೇರ ಓಣಿಯ ದೊಡ್ಡ ಮಸೀದಿ ಮೊಹರಂ ದೇವರ ದರ್ಗಾದವರೆಗೆ ನಡೆಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.