ADVERTISEMENT

ಅಂಬಿಗರ ಶರಣ ಸಂಸ್ಕೃತಿ ಉತ್ಸವಕ್ಕೆ ಸಿದ್ಧತೆ: ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ 

ಜ. 14, 15ರಂದು ವಿಶೇಷ ಕಾರ್ಯಕ್ರಮ | ವಚನ ಗ್ರಂಥ ಮಹಾ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 4:30 IST
Last Updated 3 ಜನವರಿ 2026, 4:30 IST
<div class="paragraphs"><p>ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ&nbsp;</p></div>

ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ 

   

ಹಾವೇರಿ: ‘ತಾಲ್ಲೂಕಿನ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಿಂದ ‘ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ–2026’ ಹಾಗೂ ‘ವಚನ ಗ್ರಂಥ ಮಹಾ ರಥೋತ್ಸವ’ ಹಮ್ಮಿಕೊಳ್ಳಲಾಗುತ್ತಿದೆ. ಇದರ ನಿಮಿತ್ತ ಜ. 14 ಹಾಗೂ ಜ. 15ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಬಿಗರ ಚೌಡಯ್ಯನವರ ಶಿಲಾಮಂಟಪ, ಕಂಚಿನ ಪುತ್ಥಳಿ ಲೋಕಾರ್ಪಣೆ ಹಾಗೂ ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪದ ಉದ್ಘಾಟನೆಯೂ ನಡೆಯಲಿದೆ’ ಎಂದರು.

ADVERTISEMENT

‘ಜ. 14ರಂದು ಬೆಳಿಗ್ಗೆ 6 ಗಂಟೆಗೆ ಅಂಬಿಗರ ಚೌಡಯ್ಯನವರ ತೊಟ್ಟಿಲೋತ್ಸವವಿದೆ. ಬೆಳಿಗ್ಗೆ 8 ಗಂಟೆಗೆ ಅಂಬಿಗರ ಚೌಡಯ್ಯನವರ ಐಕ್ಯಮಂಟಪ ಪೂಜೆ, ಬೆಳಿಗ್ಗೆ 10 ಗಂಟೆಗೆ ಸಾಮೂಹಿಕ ರಕ್ತದಾನ ಶಿಬಿರ, ಬೆಳಿಗ್ಗೆ 11 ಗಂಟೆಗೆ ಶಾಂತಮುನಿ ಸ್ವಾಮೀಜಿಯವರ 10ನೇ ಸ್ಮರಣೋತ್ಸವ ನಿಮಿತ್ತ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವಿದೆ. ಮಧ್ಯಾಹ್ನ 12 ಗಂಟೆಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ವಚನ ಕಂಠಪಾಠ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವಿದೆ. ಸಂಜೆ 7 ಗಂಟೆಗೆ ಗಂಗಾರತಿ ಹಾಗೂ ರಾತ್ರಿ 8 ಗಂಟೆಗೆ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ತಿಳಿಸಿದರು.

‘ಜ. 15ರಂದು ಬೆಳಿಗ್ಗೆ 8 ಗಂಟೆಗೆ ಧರ್ಮ ಧ್ವಜಾರೋಹಣವಿದೆ. ಬೆಳಿಗ್ಗೆ 9.30ಕ್ಕೆ ಧರ್ಮಸಭೆ ಜರುಗಲಿದೆ. ಬೆಳಿಗ್ಗೆ 10 ಗಂಟೆಗೆ ಅಂಬಿಗರ ಚೌಡಯ್ಯನವರ ಶಿಲಾಮಂಟಪ, ಕಂಚಿನ ಪುತ್ಥಳಿ ಲೋಕಾರ್ಪಣೆ ಹಾಗೂ ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪದ ಉದ್ಘಾಟನೆ ಜರುಗಲಿದೆ. ಬೆಳಿಗ್ಗೆ 11 ಗಂಟೆಗೆ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯುತ್ಸವವಿದೆ. ಮಧ್ಯಾಹ್ನ 12 ಗಂಟೆಗೆ ಪೀಠಾರೋಹಣದ ದಶಮಾನೋತ್ಸವವಿದೆ. ಸಂಜೆ 5 ಗಂಟೆಗೆ ವಚನ ಗ್ರಂಥ ಮಹಾ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಲಿದೆ’ ಎಂದು ಹೇಳಿದರು. 

ಪ್ರಾಧಿಕಾರ ರಚನೆಗೆ ಒತ್ತಾಯ: ‘ಸಮುದಾಯಕ್ಕೆ ಎಸ್‌.ಟಿ. ಮೀಸಲಾತಿ ನೀಡುವಂತೆ ಉತ್ಸವದ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು. ಜೊತೆಗೆ, ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ಅಭಿವೃದ್ಧಿ ಸೇರಿ ವಿವಿಧ ಕೆಲಸಗಳನ್ನು ಕೈಗೊಳ್ಳಲು ಪ್ರತ್ಯೇಕ ಪ್ರಾಧಿಕಾರ ರಚಿಸುವಂತೆಯೂ ಸರ್ಕಾರವನ್ನು ಆಗ್ರಹಿಸಲಾಗುವುದು’ ಎಂದು ಸ್ವಾಮೀಜಿ ತಿಳಿಸಿದರು.

ಸಮುದಾಯದ ಮುಖಂಡರಾದ ಪರಶುರಾಮ ಸೊನ್ನದ, ಮಂಜುನಾಥ ಭೋವಿ, ಬಸವರಾಜ ಕಳಸೂರು, ಕೃಷ್ಣಮೂರ್ತಿ ಒಡ್ನಿಕೊಪ್ಪ, ಶಂಕರ‌ ಸುತಾರ, ಕರಬಸಪ್ಪ ಹಳದೂರು, ಪ್ರಕಾಶ ಅಂಬಿಗೇರ ಹಾಗೂ ಇತರರು ಇದ್ದರು.

ಚೆನ್ನಣ್ಣ ವಾಲೀಕಾರ

ದಿ. ಚೆನ್ನಣ್ಣ ವಾಲೀಕಾರಗೆ ಪ್ರಶಸ್ತಿ 

‘ಬಂಡಾಯ ಸಾಹಿತ್ಯದಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ದಿವಂಗತ ಚೆನ್ನಣ್ಣ ವಾಲೀಕಾರ ಅವರಿಗೆ ಈ ಬಾರಿ ಮರಣೋತ್ತರವಾಗಿ ‘ಅಂಬಿಗರ ಚೌಡಯ್ಯ ರಾಜ್ಯ ಮಟ್ಟದ ವೀರ ಗಣಾಚಾರ್ಯ ಪ್ರಶಸ್ತಿ’ ಘೋಷಿಸಲಾಗಿದೆ’ ಎಂದು ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು. ‘ಕಲಬುರಗಿಯ ಬಂಡಾಯದ ಧ್ವನಿಯಾಗಿದ್ದ ಚೆನ್ನಣ್ಣ ಅವರು ಕಾದಂಬರಿ ಕಥೆ  ಹಾಗೂ ವಿಮರ್ಶೆ ಮೂಲಕ ಸಾಹಿತ್ಯ ಕೃಷಿ ಮಾಡಿದ್ದರು. ಅವರ ಸಾಧನೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಕಾರ್ಯಕ್ರಮಕ್ಕೆ ವಾಲೀಕಾರ್ ಕುಟುಂಬಸ್ಥರನ್ನು ಆಹ್ವಾನಿಸಲಾಗಿದ್ದು ಅವರ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.