ADVERTISEMENT

ಕಣ್ಮನ ಸೆಳೆದ ಫಲ- ಪುಷ್ಪ ಪ್ರದರ್ಶನ

ಪುನೀತ್‌ ರಾಜ್‌ಕುಮಾರ್‌ ಕಲಾಕೃತಿಗೆ ಮೆಚ್ಚುಗೆ: 75 ಸಾವಿರ ಗುಲಾಬಿಯಲ್ಲಿ ಅರಳಿದ ನಂದಿ

ಶಂಕರ ಕೊಪ್ಪದ
Published 6 ಜನವರಿ 2023, 19:45 IST
Last Updated 6 ಜನವರಿ 2023, 19:45 IST
ಹಾವೇರಿಯ 86ನೇ ನುಡಿಜಾತ್ರೆ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಯಿತು   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 
ಹಾವೇರಿಯ 86ನೇ ನುಡಿಜಾತ್ರೆ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಯಿತು   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ    

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಫಲ-ಪುಷ್ಪ ಪ್ರದರ್ಶನ ನೋಡುಗರ ಕಣ್ಣು ಕೋರೈಸಿತು.

ನಗರದ ಹೊರವಲಯದ ಅಜ್ಜಯ್ಯನ ದೇವಸ್ಥಾನದ ಎದುರಿನಲ್ಲಿ 10 ಗುಂಟೆ ಜಾಗದಲ್ಲಿ ತೋಟಗಾರಿಕೆ ಇಲಾಖೆಯು 20ರಿಂದ 25 ತರಹೇವಾರಿ ಹೂವುಗಳಿಂದ ಸುಮಾರು 4 ರಿಂದ 5 ಲಕ್ಷ ಹೂಗಳಿಂದ ಕಲಾಕೃತಿಗಳನ್ನು ಮಾಡಲಾಗಿದೆ. ಅಲ್ಲದೆ 6 ಅಡಿ ಎತ್ತರದ ಸಿರಿಧಾನ್ಯದ ಭುವನೇಶ್ವರಿ ದೇವಿ ಕಲಾಕೃತಿ ಕಣ್ಮನ ಸೆಳೆಯುತ್ತದೆ

ಶಾವಿಗೆ ಹಾಗೂ ಕಲ್ಲಂಗಡಿ ಹಣ್ಣಿನಿಂದ ತಯಾರಿಸಿದ ಪುನೀತ್‌ ರಾಜಕುಮಾರ್‌ ಅವರ ಕಲಾಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 4 ಕೆ.ಜಿ ಏಲಕ್ಕಿ ಬಳಸಿ ಗಣೇಶ ಮೂರ್ತಿಯನ್ನು ಮಾಡಲಾಗಿದೆ.

ADVERTISEMENT

ವಿವಿಧ ತರಕಾರಿಗಳಿಂದ ಕಲಾಕೃತಿ:

ಕಲ್ಲಂಗಡಿ ಹಣ್ಣಿನಿಂದ ನವಿಲು, ಶಿವಲಿಂಗ, ಪ್ರಧಾನಿ ಮೋದಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು,
ಮೊಲ, ತಬಲ, ಬಾತುಕೋಳಿ, ಗಂಟೆ ಹಾಗೂ ಹಗಲಕಾಯಿಯಲ್ಲಿ ಡೈನೋಸಾರ್ ಮತ್ತು ಮೊಸಳೆ, ಮೂಲಂಗಿಯಲ್ಲಿ ಗರುಡ ಪಕ್ಷಿ ಮತ್ತು ನವಿಲು ಕುಬ್ಬಳ ಕಾಯಿಲ್ಲಿ ಗಿಟಾರ್‌, ತಬಲ, ಟೆಡ್ಡಿಬೇರ್, ಚೋಟಾ ಭೀಮ್ ಕುಟುಂಬ ಹಾಗೂ ಕಲಾಕೃತಿಗಳನ್ನು ನೋಡಬಹುದಾಗಿದೆ.

ಸರ್ವಜ್ಞನ ಮಂಟಪ:

ಈರುಳ್ಳಿ, ಸೌತೆಕಾಯಿ, ಬದನೆಕಾಯಿ, ಬೆಂಡೆಕಾಯಿ, ಕ್ಯಾರೆಟ್, ಆಲೂಗಡ್ಡೆ ಹಾಗೂ ಕಿತ್ತಲೆ, ಬಾಳೆ ಹಣ್ಣು, ಸೇಬು ಸೇರಿದಂತೆ ವಿವಿಧ ಹಣ್ಣಗಳಿಂದ ಸುಂದರವಾದ ಮಂಟಪವನ್ನು ಮಾಡಲಾಗಿದೆ. ಅದರೊಳಗೆ ಸರ್ವಜ್ಞ ಮೂರ್ತಿಯನ್ನು ಒಣ ದ್ರಾಕ್ಷಿಯಿಂದ ಮಾಡಿದ್ದು ವಿಶೇಷವಾಗಿದೆ. ಕುಲದ ಮೂಲವೇನು ಬಲ್ಲಿರೇನಯ್ಯ ಎಂದು ಕೇಳಿದ ಕನಕದಾಸರ ಮತ್ತು ಭಾವೈಕ್ಯದ ಗಾನ ಮೊಳಗಿಸಿದ ಶಿಶುನಾಳ ಶರೀಫಜ್ಜ ಹಾಗೂ ಜನಸಮುದಾಯದ ವಿವೇಕ ತಿದ್ದಿ ಸರ್ವಜ್ಞನ ಕಲಾಕೃತಿಗಳು ಫಲ- ಪುಷ್ಪ ಪ್ರದರ್ಶನದಲ್ಲಿ ಸಾರ್ವಜನಿಕರ ಗಮನ ಸೆಳೆಯುತ್ತಿವೆ.

ಸಂತರ ಕಲಾಕೃತಿಗಳು:

ಸುಮಾರು 5 ಲಕ್ಷ ಹೂವುಗಳಿಂದ ವಿವಿಧ ಕಲಾಕೃತಿಗಳನ್ನು ಮಾಡಲಾಗಿದೆ. ಅಲ್ಲದೆ ಒಣ ದ್ರಾಕ್ಷಿಯಿಂದ ಸರ್ವಜ್ಞನ ಮೂರ್ತಿ ನಿರ್ಮಿಸಲಾಗಿದೆ. ಜಿಲ್ಲೆಯ ಸಂತರಾದ ಸರ್ವಜ್ಞ, ಶಿಶುನಾಳದ ಶರೀಫಜ್ಜ, ಕನಕದಾಸರ ಮೂರ್ತಿಗಳನ್ನು ಸಿಮೆಂಟ್ ಮತ್ತು ಬೆಂಡ ಬಳಸಲಾಗಿದೆ. ಕೆಂಪು, ಹಳದಿ, ಬಿಳಿ ಸೇರಿದಂತೆ 75 ಸಾವಿರ ಗುಲಾಬಿ ಹೂವಿನಿಂದ ನಂದಿ ಕಲಾಕೃತಿ ಮಾಡಲಾಗಿದೆ‌. ಯೋಧರ ಸ್ಮಾರಕವನ್ನು ಹೂವಿನಿಂದ ನಿರ್ಮಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾದ ಎಲ್.ಪ್ರದೀಪ ‘ಪ್ರಜಾವಾಣಿ’ಗೆ ಹೇಳಿದರು.

ಹೃದಯ, ಮೀನು, ಶಿವಲಿಂಗ, ಹೂವಾಡಗಿತ್ತಿ, ಹಾರ್ನಬಿಲ್‌, ಚೋಟಾ ಭೀಮ್, ನಗಾರಿ, ವೀಣೆ, ಬಾತುಕೋಳಿ, ಆನೆ, ಜಲಕನ್ಯೆ ಸರ್ವಜ್ಞ, ಶಿಶುವಿನಹಾಳದ ಶರೀಫರು, ಕನಕದಾಸರ ಕಲಾಕೃತಿಗಳು ಅದ್ಭುತವಾಗಿದೆ. ಪುನೀತ್‌ ರಾಜಕುಮಾರ್‌ ಅವರ ಭಾವಚಿತ್ರ ಶಾವಿಗೆಯಲ್ಲಿ ಬಿಡಿಸಿರುವುದು ಸುಂದರವಾಗಿ ಮೂಡಿಬಂದಿದೆ ಎಂದು ಫಲ-ಪುಷ್ಪ ಪ್ರದರ್ಶನ ವೀಕ್ಷಿಸಿದ ವಿಜಯಶ್ರೀ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.