ತಡಸ (ಅರಟಾಳ): ಪ್ರಾಚೀನ ಕಾಲದಲ್ಲಿ ಅನೇಕ ಬಗೆಯ ಕುರುಹುಗಳನ್ನು, ರಾಜ ಮಹಾರಾಜರು ಆಳಿರುವ ಶಿಗ್ಗಾವಿ ತಾಲ್ಲೂಕಿನ ಅರಟಾಳ ಗ್ರಾಮವು ತನ್ನದೇಯಾದ ಕೆಲವು ವಿಶೇಷ ಅಂಶಗಳಿಂದ ಜನಮನ ಸೆಳೆಯುತ್ತದೆ.
ಬ್ರಿಟಿಷರ ಕಾಲದಲ್ಲಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದ ರುದ್ರಪ್ಪ ಪಾಟೀಲ್ ಈ ಗ್ರಾಮದವರಾಗಿದ್ದು ಇತಿಹಾಸಕ್ಕೆ ಸಾಕ್ಷಿಯಾಗುತ್ತದೆ. ಅಲ್ಲದೆ ಹಿಂದಿನ ಕಾಲದಿಂದಲೂ ಈ ಗ್ರಾಮ ಐತಿಹಾಸಿಕ ಮನ್ನಣೆಯ ಪಡೆದಿದೆ.
12ನೇ ಶತಮಾನದಲ್ಲಿ ಜೈನ ಧರ್ಮದ ಪಾರ್ಶ್ವನಾಥ ತೀರ್ಥಂಕರ ಅತಿಶಯ ರೂಪದ ಸೂರ್ಯ ಗ್ರಹಣ ಹಿಡಿದ ದಿನದಂದು ಸ್ಥಾಪಿಸಲಾಗಿರುವ ಮೂರ್ತಿ ಭಾರತದಲ್ಲೇ ಬೆರೆಲ್ಲೂ ಕಾಣಸಿಗದು. ಇಂಥ ಮೂರ್ತಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಅರಟಾಳ ಗ್ರಾಮದಲ್ಲಿ ಇರುವುದು ಹೆಮ್ಮೆಯ ಸಂಗತಿ.
ಅರಟಾಳ ಗ್ರಾಮವು ಮೊದಲು ರಾಜರ ರಾಜಧಾನಿ ಇದ್ದು ಪ್ಲೇಗ್ ರೋಗ ನಿಯಂತ್ರಣಕ್ಕೆ ಅಲ್ಲಲ್ಲಿ ಜನ ವಲಸೆ ಹೋಗಿದ್ದು ಪ್ರಾಚೀನ ಹೆಸರು ಹಿರೇಕೋಪ ಎಂದು ಕರೆಯುತ್ತಿದ್ದರು. ಜೈನರ ಪವಿತ್ರ ಸ್ಥಳಗಳಲ್ಲಿ ಇದು ಒಂದಾಗಿದ್ದು ಮಧ್ಯಪ್ರದೇಶದ ಜನರು ಮೊದಲು ಇಲ್ಲಿಗೆ ಬಂದು ನಂತರ ಶ್ರವಣಬೆಳಗೋಳಕ್ಕೆ ಹೋಗುವ ಪ್ರತೀತಿ ಇದೆ. ಎಲ್ಲಾ ರಾಜ್ಯದಿಂದ ಇಲ್ಲಿಗೆ ಬರುತ್ತಿದ್ದು ಇನ್ನಷ್ಟು ವಿಸ್ತಾರವಾಗಿ ಬೆಳೆದು ನಿಲ್ಲುವ ತಾಣ ಇದಾಗುತ್ತದೆ ಎಂದು ವಾತ್ಸಲ್ಯ ಮೂರ್ತಿ ಅಭಿಜ್ಞಾನ ಭಾಸ್ಕರ ಹೇಳುತ್ತಾರೆ.
ಈಗಾಗಲೇ 24 ತೀರ್ಥಂಕರ ಮೂರ್ತಿ ಸ್ಥಾಪಿಸಲಾಗಿದ್ದು ಅಪಾರ ಸಂಖ್ಯೆಯ ಶ್ರಾವಕ,ಶ್ರಾವಕಿಯರು ಇಲ್ಲಿ ಬಂದು ಅಧ್ಯಾತ್ಮದ ಚಿಂತನೆ ಮಾಡುತ್ತಿದ್ದಾರೆ. ವಿಶಾಲವಾದ ಪರಿಸರದ ಮಡಿಲಲ್ಲಿ ಇರುವ ಈ ಗ್ರಾಮ ತನ್ನದೇಯಾದ ವಿಶಿಷ್ಟತೆ ಹೊಂದುವುದರ ಜೊತೆಗೆ ಸಾಮಾಜಿಕವಾಗಿ ಶಿಕ್ಷಣ, ಗೋಶಾಲೆ, ವೈದ್ಯಕೀಯ ಸೇವಾಕಾರ್ಯ ಮಾಡುತ್ತಿದೆ.
ಜನಾಲಯನ ಶಾಸನ: 1045ನೇ ಶಕೆಯ ಶುಭ ಸವಂತ್ಸರ ಪುಷ್ಯ ಅಮಾವಾಸ್ಯೆ ಆದಿತ್ಯ ವಾರ ಸೂರ್ಯ ಗ್ರಹಣ ಕ್ರಿ.ಶ 1,122ರ ಡಿಸೆಂಬರ್ 30ರಂದು ಕುಂತ ಕುಳಿಯ ಇಂದಿನ ಮುಂಡಗೋಡ ತಾಲ್ಲೂಕಿನ ಪೂರ್ವ ಭಾಗದ ಮತ್ತು ಶಿಗ್ಗಾವಿ ತಾಲ್ಲೂಕಿನ ಪಶ್ಚಿಮ ವಾಯವ್ಯ ಭಾಗದ 30 ಹಳ್ಳಿಗಳನ್ನು ಒಳಗೊಂಡ ಒಂದು ಉಪ ಆಡಳಿತ ಘಟಕವಾದ ಪರಿಸರದ ಪ್ರಮುಖ ಗ್ರಾಮವಾದ ಪಯಿರಣ(ಅರಟಾಳ) ಗ್ರಾಮದ ಬೆಟ್ಟಕೆರೆಯ ಗಂಗ ವಂಶದ ಬಮ್ಮಿಷೆಟ್ಟಿ ಎಂಬಾತ ಮಾಡಿಸಿದ ಬಸದಿಯ ಇತಿಹಾಸ ಈ ಶಾಸನದಲ್ಲಿದೆ.
ಕುಕ್ಕೆ ಸುಬ್ರಮಣ್ಯ ಉದ್ಭವ ಮೂರ್ತಿ:ಸ್ಕಂದ ಪುರಾಣದಲ್ಲಿ ಈ ಗ್ರಾಮದಲ್ಲಿ ಸುಮಾರು 500 ರಿಂದ 600 ವರ್ಷಗಳ ಹಿನ್ನಲೆ ಇದ್ದು ಕುಕ್ಕೆ ಸುಬ್ರಮಣ್ಯ ಉದ್ಭವ ಮೂರ್ತಿಯಿದೆ ಎಂದು ತಿಳಿಸುತ್ತದೆ. ಅರಟಾಳ ಸುಬ್ರಹ್ಮಣ್ಯ ಎಂದು ಜಕ್ಕನಕಟ್ಟಿ ಮಠದ ಚರಮೂರ್ತೇಶ್ವರ ಅಜ್ಜರ ಹೇಳಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವರ ವಿಗ್ರಹ ಮೂಲತಃ ಅರಟಾಳ ಗ್ರಾಮದಲ್ಲಿ ಕಾಣಿಸಿದ್ದು ಹಲವಾರು ಭಕ್ತರು ಇಲ್ಲಿಗೆ ಬಂದು ದರುಶನ ಪಡೆದುಕೊಳ್ಳುತ್ತಾರೆ. ವಿಶೇಷವಾಗಿ ಹಾವು ತುಳಿದವರು, ಹಾವಿಗೆ ಅಡ್ಡಿ ಪಡಿಸಿದವರಿಗೆ ಮಂತ್ರಾಕ್ಷತೆಯನ್ನು ಮಂತ್ರಿಸಿ ಕೊಡಲಾಗುತ್ತದೆ ಎಂದು ಸೇವಕರಾದ ಪಟದಯ್ಯ ಹಿರೇಮಠ ಹೇಳಿದರು.
ಕುಕ್ಕೆಗೆ ಹೋಗುವ ಭಕ್ತರಿಗೆ ಅಲ್ಲಿಯವರು ಅರಟಾಳ ಗ್ರಾಮಕ್ಕೆ ಹೋಗಿ ಅಲ್ಲಿ ಮೂಲತಃ ಸುಬ್ರಮಣ್ಯ ವಿಕಾಶದ ಪುರಾವೆ ಇದೆ ಎಂದು ತಿಳಿಸಿದ್ದರಿಂದ ಹಲವು ಭಕ್ತರು ಅರಟಾಳಕ್ಕೆ ಭೇಟಿ ನೀಡಿ ಹೋಗುತ್ತಾರೆ.
ವೀರಭದ್ರೇಶ್ವರ ದೇವಸ್ಥಾನ ಇದ್ದು ಪ್ರತಿ ವರ್ಷ ಯುಗಾದಿ ಹಬ್ಬ ಸಂದರ್ಭದಲ್ಲಿ ರಥೋತ್ಸವ ಜರುಗುತ್ತದೆ ಪ್ರತಿ ಅಮಾವಾಸ್ಯೆ ದಿನ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.