ADVERTISEMENT

‘ಮಾನವ ಸರಪಳಿ’ ರಚಿಸಿ ಪ್ರತಿಭಟನೆ

ನಗರದಲ್ಲಿ ‘ಬ್ಯಾಂಕ್‌ ಪಾಸ್‌ ಬುಕ್‌ ಚಳವಳಿ’ ನಡೆಸಿದ ಆಶಾ ಕಾರ್ಯಕರ್ತೆಯರು

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 13:15 IST
Last Updated 14 ಜುಲೈ 2020, 13:15 IST
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಾವೇರಿ ನಗರದಲ್ಲಿ ಮಂಗಳವಾರ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ 
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಾವೇರಿ ನಗರದಲ್ಲಿ ಮಂಗಳವಾರ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ    

ಹಾವೇರಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಗರದ ಮೈಲಾರ ಮಹದೇವಪ್ಪ ವೃತ್ತದ ಬಳಿ ಮಂಗಳವಾರ ‘ಮಾನವ ಸರಪಳಿ’ ರಚಿಸಿ ಪ್ರತಿಭಟನೆ ನಡೆಸಿದರು.

ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ನಡೆದಿರುವ ರಾಜ್ಯವ್ಯಾಪಿ ಅನಿರ್ದಿಷ್ಟ ಅವಧಿ ಕೆಲಸ ಸ್ಥಗಿತ ಹೋರಾಟದ ಅಂಗವಾಗಿ ನಗರದಲ್ಲಿ ‘ಬ್ಯಾಂಕ್ ಪಾಸ್ ಬುಕ್ ಚಳವಳಿ’ ಯನ್ನು ನಡೆಸಿದರು. ಬ್ಯಾಂಕ್‌ ಖಾತೆಗೆ ಸಮರ್ಪಕವಾಗಿ ಹಣ ಹಾಕಿಲ್ಲ ಎಂಬುದನ್ನು ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಾಲ್ಕು ತಿಂಗಳುಗಳಿಂದ ಆಶಾ ಕಾರ್ಯಕರ್ತೆಯರು ತಾವು ಮಾಡಬಹುದಾದ ಬಾಣಂತಿ ಭೇಟಿ, ಆಹಾರ ವಿತರಣೆ ಮುಂತಾದ ಕೆಲಸಗಳನ್ನು ಬಿಟ್ಟು ಕೇವಲ ಕೊರೊನಾ ಸಮೀಕ್ಷೆ, ಕ್ವಾರಂಟೈನ್‌ ಕೇಂದ್ರ ಮತ್ತು ಚೆಕ್‌ಪೋಸ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದೇವೆ.ಇದರಿಂದಾಗಿ ಪ್ರತಿ ಆಶಾ ಕಾರ್ಯಕರ್ತೆ ಗೆ ಈ ಕೆಲಸಗಳಿಗೆ ಬರಬೇಕಾಗಿದ್ದ ₹3ರಿಂದ ₹5 ಸಾವಿರ ನಷ್ಟವಾಗಿದೆ. ರಾಜ್ಯ ಸರ್ಕಾರ ಸಹಕಾರಿ ಸಂಘಗಳ ಮೂಲಕ ಘೋಷಿಸಿದ ₹3 ಸಾವಿರ ಎಲ್ಲರಿಗೂ ತಲುಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕೇಂದ್ರ ಸರ್ಕಾರ ಘೋಷಿಸಿದ ₹2 ಸಾವಿರ ಇನ್ನೂ ತನಕ ಬ್ಯಾಂಕ್ ಖಾತೆ ಸೇರಿಲ್ಲ. ಇದರಿಂದಾಗಿ ಆಶಾಗಳ ಬದುಕು ಬೀದಿಗೆ ಬಂದಿದೆ. ಕೊರೊನಾ ವಾರಿಯರ್ಸ್‌ ಆಗಿ ಕೆಲಸ ಮಾಡಿದ ಆಶಾಗಳಿಗೆ ಸರಿಯಾಗಿ ಸುರಕ್ಷತಾ ಉಪಕರಣಗಳು ಸಿಗದ ಕಾರಣ ಜಿಲ್ಲೆಯಲ್ಲಿ 17 ಆಶಾ ಕಾರ್ಯಕರ್ತರಿಗೆ ಕರೋನಾ ಸೋಂಕು ತಗುಲಿದೆ ಎಂದು ನೋವು ತೋಡಿಕೊಂಡರು.ಸರ್ಕಾರ ಬೇಡಿಕೆಗಳನ್ನು ಈಡೇರಿಸುವವರೆಗೂ ರಾಜಿ ರಹಿತ ಹೋರಾಟ ಮುಂದುವರಿಯಲಿದೆ ಎಂದು ಆಶಾ ಕಾರ್ಯಕರ್ತೆಯರು ಹೇಳಿದರು.

ಪ್ರತಿಭಟನೆಯಲ್ಲಿ ರತ್ನಾ ಗಿರಣಿ, ಮಂಗಳಾ ಹಾವೇರಿ, ಚೇತನಾ ಹಿರೇಮಠ, ಶಶಿಕಲಾ ಹೊಂಬರಡಿ, ಶೀಲಾ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.