ಹಾವೇರಿ: ‘ನಮ್ಮ ನ್ಯಾಯಯುತ ಬೇಡಿಕೆಗಳನ್ನು ರಾಜ್ಯ ಸರ್ಕಾರ ತ್ವರಿತವಾಗಿ ಈಡೇರಿಸಬೇಕು. ಇಲ್ಲದಿದ್ದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆದಿಂದ ದೂರ ಉಳಿಯುತ್ತೇವೆ’ ಎಂದು ಜಿಲ್ಲೆಯ ಹಲವು ಆಶಾ ಕಾರ್ಯಕರ್ತೆಯರು ಎಚ್ಚರಿಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರ) ಜಯಾನಂದ ಅವರಿಗೆ ಬುಧವಾರ ಮನವಿ ಸಲ್ಲಿಸಿರುವ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು, ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಮೀಕ್ಷೆಯಲ್ಲಿ ಭಾಗವಹಿಸುವ ಬಗ್ಗೆ ಸಭೆ ಕರೆಯಲಾಗಿತ್ತು. ಸರ್ಕಾರ ಸ್ಪಂದಿಸದಿದ್ದರೆ, ದೂರ ಉಳಿಯಲು ನಿರ್ಣಯ ಕೈಗೊಳ್ಳಲಾಗಿದೆ’ ಎಂದಿದ್ದಾರೆ.
‘ಗ್ರಾಮೀಣ ಆಶಾ ಕಾರ್ಯಕರ್ತೆಯರಿಗೆ ಸಮೀಕ್ಷೆಯ ಕೆಲಸಕ್ಕೆ ₹ 5,000 ಮತ್ತು ನಗರ ಆಶಾ ಕಾರ್ಯಕರ್ತೆಯರಿಗೆ ₹10,000 ಕನಿಷ್ಠ ಗೌರವಧನ ನಿಗದಿ ಮಾಡಿ ಆದೇಶ ಮಾಡಬೇಕು. ಇಲ್ಲವೇ, ಸಮೀಕ್ಷೆ ಕೆಲಸದಿಂದ ಕೈಬಿಡಬೇಕು. ಈ ಹಿಂದೆ ಗ್ಯಾರಂಟಿ ಯೋಜನೆ ಬಗ್ಗೆ ಆಶಾ ಕಾರ್ಯಕರ್ತೆಯರು ಕೈಗೊಂಡಿದ್ದ ಸಮೀಕ್ಷೆ ಕೆಲಸಕ್ಕೆ ನೀಡಬೇಕಿದ್ದ ₹ 1,000 ಗೌರವಧನ ಸಹ ವರ್ಷದಿಂದ ಬಾಕಿ ಉಳಿದಿದೆ’ ಎಂದು ಆಶಾ ಕಾರ್ಯಕರ್ತೆಯರು ದೂರಿದ್ದಾರೆ.
‘ಬೆಂಗಳೂರು ಮಹಾನಗರದಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಲ್ಲಿ ಕೆಲಸ ಮಾಡಿದ್ದ ಆಶಾ ಕಾರ್ಯಕರ್ತೆಯರ ಗೌರವಧನ ಪಾವತಿಯು ಬಾಕಿಯಿದೆ. ಈಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಂದಿದ್ದು, ಪ್ರತಿ ಮನೆಗೂ ಹೋಗಿ ನಮೂನೆಗಳನ್ನು ವಿತರಿಸುವಂತೆ ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಹೇಳಿದೆ. ಸಮೀಕ್ಷೆಯಲ್ಲಿರುವ 60 ಪ್ರಶ್ನೆಗಳಿಗೆ ಮಾಹಿತಿ ನೀಡಲು ಕುಟುಂಬದ ಸದಸ್ಯರು ಮುಂಚಿತವಾಗಿ ತಯಾರಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ನಮೂನೆ ಹಂಚಿರುವ ವಿವರಗಳನ್ನು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡುವ ಕೆಲಸವನ್ನೂ ವಹಿಸಲಾಗಿದೆ. ಈ ಕೆಲಸಕ್ಕೆ ₹ 2,000 ಗೌರವಧನ ನೀಡುವುದಾಗಿ ಸರ್ಕಾರ ಹೇಳಿರುವುದು ಪತ್ರಿಕೆಗಳ ಮೂಲಕ ಗೊತ್ತಾಗಿದೆ. ಆದರೆ, ಇಲಾಖೆಯಿಂದ ಇದುವರೆಗೂ ಯಾವುದೇ ಆದೇಶ ಬಂದಿಲ್ಲ. ಕಳೆದ ಸಮೀಕ್ಷೆಯಲ್ಲಿ ನಮಗೆ ಯಾವುದೇ ಗೌರವ ಧನ ಬಂದಿಲ್ಲ. ಬಾಕಿ ಗೌರವ ಧನ ನೀಡಬೇಕು ಹಾಗೂ ಹೊಸ ಸಮೀಕ್ಷೆಯಲ್ಲಿ ಗೌರವ ಧನ ಹೆಚ್ಚಿಸಬೇಕು. ಇಲ್ಲದಿದ್ದರೆ, ಸಮೀಕ್ಷೆ ಕೆಲಸಕ್ಕೆ ಗೈರಾಗುತ್ತೇವೆ’ ಎಂದು ಆಶಾ ಕಾರ್ಯಕರ್ತೆಯರು ಮನವಿಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.