ADVERTISEMENT

ಹಾವೇರಿ | ಐವರು ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿ, ವೈದ್ಯನಿಗೂ ಕೋವಿಡ್‌

ಹಾವೇರಿ: ಒಂದೇ ದಿನ 49 ಮಂದಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 14:04 IST
Last Updated 30 ಜೂನ್ 2020, 14:04 IST
   

ಹಾವೇರಿ: ‘ಜಿಲ್ಲೆಯಲ್ಲಿ ಕೋವಿಡ್-19ರಿಂದ ಇಬ್ಬರು ಮಹಿಳೆಯರು ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಐವರು ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿ, ಖಾಸಗಿ ಆಸ್ಪತ್ರೆ ವೈದ್ಯ ಸೇರಿದಂತೆ ಒಂದೇ ದಿನ 49 ಮಂದಿಗೆ ಸೋಂಕು ದೃಢಪಟ್ಟಿದೆ’ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ 118 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ 25 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 91 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದರು.

ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಶಿಗ್ಗಾವಿ ದೇಸಾಯಿ ಓಣಿಯ 75 ವರ್ಷದ ಮಹಿಳೆ (ಪಿ-8295) ಜೂನ್ 20ರಂದು ಆಸ್ಪತ್ರೆಗ ದಾಖಲಾಗಿದ್ದು, ಜೂನ್ 30ರ ಮಂಗಳವಾರ ಬೆಳಿಗ್ಗೆ 6.30ಕ್ಕೆ ಮರಣಹೊಂದಿದ್ದಾರೆ.

ADVERTISEMENT

ಹಾವೇರಿ ತಾಲ್ಲೂಕು ಆಲದಕಟ್ಟಿ ಗ್ರಾಮದ ಬಸವೇಶ್ವರನಗರದ ನಿವಾಸಿ 60 ವರ್ಷದ ವೃದ್ಧೆ (ಪಿ-13268) ಕೆಮ್ಮು ಮತ್ತು ಜ್ವರದ ಹಿನ್ನೆಲೆಯಲ್ಲಿ ಜೂನ್ 24ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಜೂನ್ 27ರಂದು ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ಐ.ಸಿ.ಯು.ನಲ್ಲಿ ವೆಂಟಿಲೇಟರ್ ಸಹಾಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೂನ್ 30ರ ಬೆಳಿಗ್ಗೆ 7.30ಕ್ಕೆ ಮರಣ ಹೊಂದಿದ್ದಾರೆ. ಎರಡು ಕುಟುಂಬಗಳಿಗೆ ಮಾಹಿತಿ ನೀಡಲಾಗಿದ್ದು, ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.