ADVERTISEMENT

52 ಸಲ ಡ್ರಾ, ₹ 7.20 ಲಕ್ಷ ದೋಚಿದರು!

ರಾಣೆಬೆನ್ನೂರು ಸಿವಿಲ್ ಗುತ್ತಿಗೆದಾರನ ಬ್ಯಾಂಕ್ ಖಾತೆಗೆ ಕನ್ನ

ಎಂ.ಸಿ.ಮಂಜುನಾಥ
Published 29 ಆಗಸ್ಟ್ 2019, 14:29 IST
Last Updated 29 ಆಗಸ್ಟ್ 2019, 14:29 IST
ಸ್ಕಿಮ್ಮಿಂಗ್
ಸ್ಕಿಮ್ಮಿಂಗ್   

ಹಾವೇರಿ: ರಾಣೆಬೆನ್ನೂರಿನ ಉಮಾಶಂಕರನಗರದ ಸಿವಿಲ್ ಗುತ್ತಿಗೆದಾರ ರಾಜೇಂದ್ರಸ್ವಾಮಿ ಹಿರೇಮಠ್ ಅವರ ಎಟಿಎಂ ಕಾರ್ಡ್‌ನ ವಿವರಗಳನ್ನು ಕಳವು ಮಾಡಿದ ಕಿಡಿಗೇಡಿಗಳು, ನಾಲ್ಕು ದಿನಗಳಲ್ಲಿ 52 ಸಲ ಹಣ ಡ್ರಾ ಮಾಡಿ ಬರೋಬ್ಬರಿ ₹ 7.20 ಲಕ್ಷ ದೋಚಿದ್ದಾರೆ!

ಖಾತೆಯಲ್ಲಿದ್ದ ಅಷ್ಟೂ ಹಣ ಆ.11ರಿಂದ ಆ.14ರ ನಡುವೆ ಕಳವಾಗಿದ್ದು, ರಾಜೇಂದ್ರಸ್ವಾಮಿ ಅವರು ಬ್ಯಾಂಕ್ ಸ್ಟೇಟ್‌ಮೆಂಟ್ (ವಹಿವಾಟಿನ ಮಾಹಿತಿ) ತೆಗೆಸಿದಾಗ ಈ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಕೂಡಲೇ ಅವರು ಹಾವೇರಿಯ ಸಿಇಎನ್ ಠಾಣೆಯ ಮೆಟ್ಟಿಲೇರಿದ್ದಾರೆ. ವಂಚಕರು ಎಟಿಎಂ ಕಾರ್ಡ್ ಸ್ಕಿಮ್ಮಿಂಗ್ ಮಾಡಿ, ಹಣ ದೋಚಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಪೊಲೀಸರು, ತನಿಖೆಗೆ ಬೆಂಗಳೂರು ಸೈಬರ್ ವಿಭಾಗದ ನೆರವು ಕೋರಿದ್ದಾರೆ.

ವೈದ್ಯಕೀಯ ಸೀಟಿಗಾಗಿ:‘ನಾನು ಏಳೆಂಟು ವರ್ಷಗಳಿಂದ ಎಸ್‌ಬಿಐ ಬ್ಯಾಂಕಿನ ರಾಣೆಬೆನ್ನೂರು ಶಾಖೆಯಲ್ಲಿ ಖಾತೆ ಹೊಂದಿದ್ದೇನೆ. ಮಗನಿಗೆ ಬೆಂಗಳೂರಿನ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಕೊಡಿಸಬೇಕಿತ್ತು. ಆ.6ರಂದುಕೌನ್ಸೆಲಿಂಗ್ ಇದ್ದಿದ್ದರಿಂದ, ಹಿಂದಿನ ದಿನವೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ದೇಶಕರ ಹೆಸರಿನಲ್ಲಿ ₹ 6.76 ಲಕ್ಷ, ₹ 52 ಸಾವಿರ ಹಾಗೂ ₹ 59 ಸಾವಿರ ಮೊತ್ತದ ಮೂರುಡಿ.ಡಿಗಳನ್ನು ತೆಗೆದುಕೊಂಡಿದ್ದೆ’ ಎಂದು ರಾಜೇಂದ್ರಸ್ವಾಮಿ ದೂರಿನಲ್ಲಿ ಹೇಳಿದ್ದಾರೆ.

ADVERTISEMENT

‘ಮರುದಿನ ಕೌನ್ಸೆಲಿಂಗ್ ನಡೆದಿದ್ದು, ನನ್ನ ಮಗನಿಗೆ ಸೀಟು ಸಿಗಲಿಲ್ಲ. ಹೀಗಾಗಿ, ಆ.9ರಂದು ಆ ಡಿ.ಡಿಗಳನ್ನು ಮರಳಿ ರಾಣೆಬೆನ್ನೂರು ಎಸ್‌ಬಿಐ ಶಾಖೆಗೆ ಜಮೆ ಮಾಡಲು ಕೊಟ್ಟಿದ್ದೆ. ಆ ನಂತರ ಅಣ್ಣನ ಮಗನ ಕಾಲೇಜು ಶುಲ್ಕ ಹಾಗೂ ಹಾಸ್ಟೆಲ್ ಶುಲ್ಕ ತುಂಬಲು ಆರ್‌ಟಿಜಿಎಸ್‌ ಮಾಡಲು ಹೋದರೆ ನನ್ನ ಖಾತೆಯಲ್ಲಿ ಹಣವೇ ಇರಲಿಲ್ಲ’ ಎಂದರು.

‘ವಹಿವಾಟಿನ ವಿವರ ತೆಗೆಸಿದಾಗ ಬೆಂಗಳೂರಿನ ನಾಗಶೆಟ್ಟಿಹಳ್ಳಿಯಲ್ಲಿ 7 ಸಲ, ವಿಲ್ಸನ್‌ ಗಾರ್ಡನ್‌ನಲ್ಲಿ 5 ಸಲ, ಯಲಹಂಕದಲ್ಲಿ 11 ಸಲ, ನ್ಯೂಬಿಇಎಲ್‌ ರಸ್ತೆಯಲ್ಲಿ 10 ಸಲ,ಜಯನಗರದಲ್ಲಿ 1 ಸಲ, ಮಡಿವಾಳದಲ್ಲಿ 10 ಸಲ, ಅಶೋಕನಗರದಲ್ಲಿ 3 ಸಲ ಹಾಗೂ ಆನ್‌ಲೈನ್‌ನಲ್ಲಿ 5 ಸಲ ಹಣ ಡ್ರಾ ಆಗಿರುವುದು ಗೊತ್ತಾಯಿತು’ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲನೆ: ‘ರಾಜೇಂದ್ರಸ್ವಾಮಿ ಅವರು ಆ.5 ಹಾಗೂ ಆ.8ರಂದು ಬೆಂಗಳೂರಿನ ಕೆಲ ಎಟಿಎಂ ಘಟಕಗಳಲ್ಲಿ ಹಣ ಡ್ರಾ ಮಾಡಿದ್ದರು. ದುಷ್ಕರ್ಮಿಗಳು ಸ್ಕಿಮ್ಮಿಂಗ್ ಸಾಧನ ಬಳಸಿ ಆ ಘಟಕಗಳಲ್ಲೇ ಎಟಿಎಂ ಕಾರ್ಡ್‌ನ ವಿವರ ಕದ್ದಿರಬಹುದು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾವ್ಯಾವ ಘಟಕಗಳಿಂದ ಹಣ ಡ್ರಾ ಆಗಿದೆಯೋ, ಅಲ್ಲಿನ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲು ಸ್ಥಳೀಯ ಪೊಲೀಸರ ನೆರವು ಕೋರಿದ್ದೇವೆ’ ಎಂದು ಹಾವೇರಿ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ಶುಲ್ಕ ಕಟ್ಟಲು ಕಡೇ ದಿನ:‘ಅದು ನನ್ನ ಹಾಗೂ ಅಣ್ಣನ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಕೂಡಿಟ್ಟಿರುವ ಹಣ. ಕಾಲೇಜು ಹಾಗೂ ಹಾಸ್ಟೆಲ್ ಶುಲ್ಕ ಕಟ್ಟಲೆಂದೇ ಸಾಲ ಮಾಡಿ ಹಣ ಹೊಂದಿಸಿದ್ದೆ. ಈ ತಿಂಗಳ ಅಂತ್ಯದೊಳಗೆ ಶುಲ್ಕ ಪಾವತಿಸದಿದ್ದರೆ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತದೆ. ದಯಮಾಡಿ ಆರೋಪಿಗಳನ್ನು ಪತ್ತೆ ಮಾಡಿ, ಹಣ ವಾಪಸ್ ಕೊಡಿಸಿ’ ಎಂದು ರಾಜೇಂದ್ರಸ್ವಾಮಿ ಮನವಿ ಮಾಡಿದ್ದಾರೆ.

ಸ್ಕಿಮ್ಮಿಂಗ್ ಹೇಗೆ ನಡೆಯುತ್ತದೆ?:ಯಂತ್ರದಲ್ಲಿ ಎಟಿಎಂ ಕಾರ್ಡ್ ಹಾಕುವ ಜಾಗಕ್ಕೆ ಸ್ಕಿಮ್ಮಿಂಗ್ ಪ್ಲೇಟ್ ಅಳವಡಿಸುವ ವಂಚಕರು, ಗ್ರಾಹಕರು ಪಿನ್ ನಂಬರ್ ಒತ್ತುವುದು ಕಾಣಿಸುವಂತೆ ಯಂತ್ರದ ಮೇಲ್ಭಾಗದಲ್ಲಿ ಮೈಕ್ರೊ ಕ್ಯಾಮೆರಾ ಇಟ್ಟಿರುತ್ತಾರೆ. ಜನ ಕಾರ್ಡ್ ಹಾಕುತ್ತಿದ್ದಂತೆಯೇ, ಅದರ ಪೂರ್ತಿ ಡಾಟಾ ಸ್ಕಿಮ್ಮಿಂಗ್ ಪ್ಲೇಟ್‌ನಲ್ಲಿ ದಾಖಲಾಗುತ್ತದೆ. ಅಲ್ಲದೇ, ಪಿನ್ ನಂಬರ್ ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ.

ಆ ನಂತರ ಕ್ಯಾಮೆರಾ ಹಾಗೂ ಪ್ಲೇಟ್ ತೆಗೆದುಕೊಂಡು ಹೋಗುವ ವಂಚಕರು,ಸ್ಕಿಮ್ಮಿಂಗ್‌ನಲ್ಲಿ ದಾಖಲಾಗುವ ಡೇಟಾವನ್ನು ‘ಎಂ.ಎಸ್.ಆರ್ 2000’ ಸಾಫ್ಟ್‌ವೇರ್ ಮೂಲಕ ನಕಲಿ ಕಾರ್ಡ್‌ಗೆ ತುಂಬುತ್ತಾರೆ. ಬಳಿಕ ಎಂಬೋಸರ್ ಯಂತ್ರ ಬಳಸಿ ಆ ಕಾರ್ಡ್‌ ಮೇಲೆ ನಮೂದು ಮಾಡಬೇಕಾದ 16 ಅಂಕಿಗಳು ಹಾಗೂ ಬ್ಯಾಂಕಿನ ಹೆಸರನ್ನು ಪಂಚ್ ಮಾಡುತ್ತಾರೆ. ಈ ರೀತಿ ನಕಲಿ ಕಾರ್ಡ್ ತಯಾರಾದ ನಂತರ ಪಿನ್ ನಂಬರ್ ಬಳಸಿ ಹಣ ಎಗರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.