ಅಕ್ಕಿಆಲೂರು: ಸರದಿ ಪ್ರಕಾರ ಆಟೊ ನಿಲ್ಲಿಸುವ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ಗಲಾಟೆ ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ಅಕ್ಕಿಆಲೂರಿನ ಬಸ್ ನಿಲ್ದಾಣದಲ್ಲಿ ಬುಧವಾರ ಸಂಜೆ ನಡೆದಿದೆ.
ವೆಂಕಟೇಶ ನಿಂಗಪ್ಪ ಆಡೂರ (55) ಕೊಲೆಯಾದ ದುರ್ದೈವಿ. ಸರದಿಯಂತೆ ಆಟೊ ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಆಶೋಕ ಹನುಮಂತಪ್ಪ ಶೇಷಗಿರಿ, ಮತ್ತವರ ಪುತ್ರ ಅಭಿಲಾಷ ಅಶೋಕ ಶೇಷಗಿರಿ ಹಾಗೂ ವೆಂಕಟೇಶ ನಿಂಗಪ್ಪ ಆಡೂರ ಅವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.
ಗಲಾಟೆಯಲ್ಲಿ ಪೆಟ್ಟು ಬಿದ್ದು ವೆಂಕಟೇಶ ಕುಸಿದು ಬಿದ್ದಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಆಶೋಕ ಮತ್ತು ಅವರ ಮಗ ಅಭಿಲಾಷನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.