ಹಾವೇರಿ: ‘ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದ್ದು, ಪ್ರತಿಯೊಂದು ಕೆಲಸಕ್ಕೂ ಕಮಿಷನ್ ಹೆಚ್ಚಾಗಿದೆ. ಗುತ್ತಿಗೆದಾರರಿಂದ ಎರಡು ಪಟ್ಟು ಕಮಿಷನ್ ವಸೂಲಿ ನಡೆಯುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಮುಂದಿನ ಎರಡೂವರೆ ವರ್ಷ ತಾವೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆಗಿರುತ್ತಾರೆಯೋ ಇಲ್ಲವೋ ಎಂಬುದನ್ನು ಕಾಂಗ್ರೆಸ್ ಪಕ್ಷವೇ ಉತ್ತರ ಕೊಡಬೇಕು. ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿದ್ದಕ್ಕೆ ಯಾರು ಜವಾಬ್ದಾರರು ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು’ ಎಂದರು.
‘ಸಿದ್ದರಾಮಯ್ಯ ಅವರು ಕೇಂದ್ರದ ಜಿಎಸ್‌ಟಿ ಪರಿಹಾರ ವಿಚಾರದಲ್ಲಿ ಒಂದೇ ಸುಳ್ಳನ್ನು ನೂರು ಸಲ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ₹ 11 ಸಾವಿರ ಕೋಟಿ ಬರಬೇಕೆಂದು ಹೇಳುತ್ತಿದ್ದಾರೆ. ಇದಕ್ಕೆ ಯಾವ ಲೆಕ್ಕವಿದೆ. 15ನೇ ಹಣಕಾಸಿನಲ್ಲಿ 2014ರಿಂದ ರಾಜ್ಯಕ್ಕೆ ₹1 ಲಕ್ಷ ಕೋಟಿಗೂ ಹೆಚ್ಚು ಮೊತ್ತ ಬರುತ್ತಿದೆ. ಪ್ರತಿ ವರ್ಷ ವರ್ಷಾಂತ್ಯದಲ್ಲಿ ₹3,000 ಕೋಟಿ ಬರುತ್ತಿದೆ. ಕೇಂದ್ರದಿಂದ ಬಂದಿದ್ದನ್ನು ಸಿದ್ದರಾಮಯ್ಯ ಹೇಳುತ್ತಿಲ್ಲ’ ಎಂದು ದೂರಿದರು.
ಬೆಳಗಾವಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ದೇಶದಲ್ಲಿ ಅರಾಜಕತೆ ಹಾಗೂ ಹಿಂಸೆ ಮಾಡಬೇಕೆಂದು ಒಂದು ವರ್ಗದವರು ಹುನ್ನಾರ ನಡೆಸುತ್ತಿದ್ದಾರೆ. ಅದಕ್ಕೆ ಕೆಲ ಶಕ್ತಿಗಳು ಬೆಂಬಲ ನೀಡುತ್ತಿವೆ. ದಾವಣಗೆರೆ, ಮಂಡ್ಯ, ಮದ್ದೂರು ಘಟನೆ ಬಳಿಕವೂ ಕಾನೂನು ಸುವ್ಯವಸ್ಥೆ ನಿಯಂತ್ರಣ ಮಾಡಲು ಆಗುತ್ತಿಲ್ಲ. ಇಂದಿನ ಪೊಲೀಸರು ಕರ್ತವ್ಯದಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ’ ಎಂದು ಹೇಳಿದರು.
‘ಜನರಲ್ಲಿ ಕಾನೂನು ಹಾಗೂ ಪೊಲೀಸರ ಭಯವೇ ಇಲ್ಲದಂತಾಗಿದೆ. ಹಲವು ಪ್ರಕರಣಗಳನ್ನು
ನಿಭಾಯಿಸುವಲ್ಲಿ ಸರ್ಕಾರ ವಿಫಲಗೊಂಡಿದೆ. ಗೃಹ ಸಚಿವರು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಜಾತಿ, ಧರ್ಮ, ಮತ, ಪಂಥ ಹೆಸರಿನಲ್ಲಿ ದೇಶ ಒಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ’ ಎಂದು ದೂರಿದರು.
‘ಪರಿಹಾರ ಬಿಡುಗಡೆ: ಕಾಲಹರಣ ಬೇಡ’
ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ‘ಕಳೆದ ಬಾರಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ನಂತರವೇ ರಾಜ್ಯ ಸರ್ಕಾರ ಮಳೆ ಹಾನಿಗೆ ಪರಿಹಾರ ನೀಡಿತ್ತು. ಈ ಬಾರಿ ಬೆಳೆ ಹಾನಿ ಘೋಷಣೆ ಮಾಡಿದ್ದಾರೆ. ಇನ್ನೂ ಪರಿಹಾರ ನೀಡಿಲ್ಲ. ನಾನು ಮುಖ್ಯಮಂತ್ರಿ ಇದ್ದಾಗ ಎರಡು ಪಟ್ಟು ಹೆಚ್ಚಿನ ಬೆಳೆ ಹಾನಿ ಪರಿಹಾರ ನೀಡಿದ್ದೆ. ಕೇಂದ್ರದ ಹಣವನ್ನು ಕಾಯಲಿಲ್ಲ. ಈ ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಬಿಡುಗಡೆ ಮಾಡಬೇಕು. ಕೇಂದ್ರದ ನೆಪ ಹೇಳಿ ಕಾಲಹರಣ ಮಾಡಬಾರದು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.