ADVERTISEMENT

ರಾಜಶೇಖರ ಸಿಂಧೂರನ ಸಾವು ದಿಗ್ಭ್ರಮೆ ಮೂಡಿಸಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 13:32 IST
Last Updated 7 ಆಗಸ್ಟ್ 2021, 13:32 IST
ಸವಣೂರಿನಲ್ಲಿ ಶನಿವಾರ ಮಾಜಿ ಶಾಸಕ ರಾಜಶೇಖರ ಸಿಂಧೂರ ಅವರ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಬಿ.ಸಿ.ಪಾಟೀಲ
ಸವಣೂರಿನಲ್ಲಿ ಶನಿವಾರ ಮಾಜಿ ಶಾಸಕ ರಾಜಶೇಖರ ಸಿಂಧೂರ ಅವರ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಬಿ.ಸಿ.ಪಾಟೀಲ   

ಹಾವೇರಿ: ‘ನನ್ನ ಆತ್ಮೀಯ ಸ್ನೇಹಿತ ಹಾಗೂ ಸೋದರ ಸಮಾನರಾದ ರಾಜಶೇಖರ ಸಿಂಧೂರ ಅವರ ಸಾವಿನಿಂದ ನನಗೆ ಅತ್ಯಂತ ದುಃಖ ಆಗಿದೆ. ಅವರನ್ನು ಕಳೆದುಕೊಂಡ ಸವಣೂರ ಬಡವಾಗಿದೆ. ಅವರು ಪ್ರಾಮಾಣಿಕ ರಾಜಕಾರಣಿ. ನೇರ ನುಡಿ ಮತ್ತು ಜನಪರ ಕಾಳಜಿಯಿದ್ದ ನಾಯಕ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸವಣೂರ ಪಟ್ಟಣದಲ್ಲಿ ಶನಿವಾರ ಮಾಜಿ ಶಾಸಕ ರಾಜಶೇಖರ ಸಿಂಧೂರ ಅವರ ಅಂತಿಮ ದರ್ಶನ ಪಡೆದು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ರಾಜಶೇಖರ ಅವರಿಗೆ ಆರೋಗ್ಯ ಸಮಸ್ಯೆಯಾಗಿ, ಮತ್ತೆ ಚೇತರಿಸಿಕೊಂಡಿದ್ದರು. ಅವರ ದಿಢೀರ್‌ ಸಾವಿನಿಂದ ನನಗೆ ದಿಗ್ಭ್ರಮೆಯಾಗಿದೆ ಎಂದರು.

ADVERTISEMENT

ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಸವಣೂರಿಗೆ ಭೇಟಿ ನೀಡಿದ ನಾನು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನನಗೆ ಈ ವಿಚಾರದಲ್ಲಿ ಬಹಳಷ್ಟು ನೋವು, ದುಃಖ ಆಗಿದೆ. ಅವರ ಕುಟುಂಬದ ಎಲ್ಲ ಸದಸ್ಯರು ಮತ್ತು ಸವಣೂರು ಜನರು ದುಃಖತಪ್ತರಾಗಿದ್ದಾರೆ ಎಂದರು.

‘ರಾಜಶೇಖರ ಅವರು ನೂತನ ಕೃಷಿ ಪದ್ಧತಿ ಅಳವಡಿಸಿಕೊಂಡು, ರೈತರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ಶಿಗ್ಗಾವಿ–ಸವಣೂರ ಕ್ಷೇತ್ರದ ಶಾಸಕರಿದ್ದಾಗ ರೈತರ ಸಹಕಾರಿ ಸಂಘದ ಸಾಲವನ್ನು ತಾವೇ ಕಟ್ಟಿ, ಮನ್ನಾ ಮಾಡಿಸಿರುವುದು ದೇಶದಲ್ಲೇ ದಾಖಲೆ ಎನಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.