ADVERTISEMENT

ಸಿಎಂ ಕುರ್ಚಿ ಚರ್ಚೆಯಲ್ಲಿ ಕಾಲಹರಣ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 5:45 IST
Last Updated 3 ನವೆಂಬರ್ 2025, 5:45 IST
ಹಾನಗಲ್‌ಗೆ ಭಾನುವಾರ ಸಂಸದ ಬಸವರಾಜ ಬೊಮ್ಮಾಯಿ ಅವರು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಹಾನಗಲ್‌ಗೆ ಭಾನುವಾರ ಸಂಸದ ಬಸವರಾಜ ಬೊಮ್ಮಾಯಿ ಅವರು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.   

ಹಾನಗಲ್: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಮ್ಮ ಸಚಿವರ ಮೇಲೆ ಹಿಡಿತ ಇಲ್ಲ. ಕಾಂಗ್ರೆಸ್‌ ಕೇಂದ್ರ ವರಿಷ್ಠರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಕುರಿತು ಎರಡು ಗುಂಪುಗಳಾಗಿವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಖಾಸಗಿ ಕಾರ್ಯಕ್ರಮದ ನಿಮಿತ್ತ ಪಟ್ಟಣಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್‌ನ ನವೆಂಬರ್ ರಾಜಕೀಯ ಕ್ರಾಂತಿ ಖಾಸಗಿ ವ್ಯವಹಾರವಾಗಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಾವಿಬ್ಬರೇ ಮಾತನಾಡಿಕೊಳ್ಳುತ್ತೇವೆ ಎಂದು ವ್ಯವಹಾರ ಮಾಡಿಕೊಂಡಿದ್ದಾರೆ. ಉಳಿದ ಮಂತ್ರಿ, ಶಾಸಕರಿಗೆ ಸಂಬಂಧವೇ ಇಲ್ಲ ಎನ್ನುವಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ಮುಖ್ಯಮಂತ್ರಿ ಸ್ಥಾನದ ಚರ್ಚೆಯಲ್ಲಿಯೇ ದಿನ ನೂಕುತ್ತ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಹೇಳಿದರು.

ADVERTISEMENT

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂಬ ವಿಷಯ ಖಾಸಗೀಕರಣಗೊಂಡಿರುವುದು ಇದೇ ಮೊದಲು. ಇಷ್ಟು ಕೆಳ ಮಟ್ಟಕ್ಕೆ ವಿಚಾರ ಹೋಗಬಾರದಾಗಿತ್ತು. ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ಅಭಿವೃದ್ಧಿ ಮರೀಚಿಕೆಯಾಗಿದೆ. ಸರ್ಕಾರ ರೈತರನ್ನು ಮರೆತೇ ಬಿಟ್ಟಿದೆ. ಕಿತ್ತು ಹೋದ ರಸ್ತೆ ಗುಂಡಿ ಮುಚ್ಚಲು ಹಣವಿಲ್ಲ ಎಂಬುದನ್ನು ಇಡೀ ರಾಜ್ಯದ ಜನತೆ ಗಮನಿಸಿದ್ದಾರೆ. ನೀರಾವರಿ ಯೋಜನೆಗಳಿಗೆ ದುಡ್ಡಿಲ್ಲ. ಇಂತಹ ಶೋಚನೀಯ ಸ್ಥಿತಿ ರಾಜ್ಯದ ಸರ್ಕಾರದ್ದಾಗಿದೆ. ರೈತರಿಗೆ ಬೆಳೆ ಪರಿಹಾರವಿಲ್ಲ. ಸರ್ಕಾರ ಇದ್ದೂ ಇಲ್ಲದಾಗಿದೆ. ಕೇವಲ ಅಧಿಕಾರದ ಚರ್ಚೆಯಲ್ಲಿಯೇ ಎರಡೂವರೆ ವರ್ಷ ಕಳೆದಿದ್ದಾರೆ ಎಂದರು.

’ಶಾಸಕರಿಗೆ ಅನುದಾನ ಕೊಡುತ್ತೇವೆ ಎಂದವರು ಇಂದಿಗೂ ಅದರ ಮಾತಿಲ್ಲ. ಹಣವಿದ್ದರೆ ತಾನೆ ಕೊಡುವುದು. ರಾಜ್ಯದ ಅಭಿವೃದ್ಧಿ ಹಿಂದಕ್ಕೆ ಹೋಗುತ್ತಿದೆ. ಎರಡು ವರ್ಷಗಳಲ್ಲಿ ₹3.5 ಲಕ್ಷ ಕೋಟಿ ಸಾಲ ಮಾಡಿದ್ದೇ ಈ ಸರ್ಕಾರದ ಸಾಧನೆ. ಅಧಿಕಾರ ಮುಗಿಯುವಷ್ಟರಲ್ಲಿ ಈ ಸಾಲ ₹6 ಲಕ್ಷ ಕೋಟಿಗೆ ಮುಟ್ಟಿರುತ್ತದೆ ಎಂದರು.

’ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡಬಹುದು ಎಂದುಕೊಂಡಿದ್ದೆವು. ಆದರೆ ರಾಜ್ಯದ ಜನತೆಗೆ ನಿರಾಸೆ ಮೂಡಿಸಿದ್ದಾರೆ. ಈ ಸರ್ಕಾರ ಬಂದಾಗಿನಿಂದ ಖುರ್ಚಿ ಚರ್ಚೆಯಾಗುತ್ತಿದೆಯೇ ಹೊರತು, ರಾಜ್ಯದ ಅಭಿವೃದ್ಧಿ ಚರ್ಚೆ ಆಗುತ್ತಿಲ್ಲ’ ಎಂದರು.

ಭೂಗ್ಯಾರಂಟಿ ಕಾಂಗ್ರೇಸ್ ಸರ್ಕಾರದ ಸಾಧನೆ ಎಂದು ಹೇಳಿಕೊಳ್ಳುತ್ತಿರುವುದರಲ್ಲಿ ಅರ್ಥವಿಲ್ಲ. ಅಲ್ಲಿ ವಾಸಿಸುವ ಅವರೆಲ್ಲ ತಮ್ಮ ಜಾಗೆಯಲ್ಲಿ ವಾಸಿಸುತ್ತಿದ್ದರು. ಇಲಾಖೆಗಳು ಅವರಿಗೆ ದಾಖಲೆ ನೀಡಿವೆ ಅಷ್ಟೇ. ಇದರಲ್ಲಿ ಸರ್ಕಾರದ ಯಾವುದೇ ದೊಡ್ಡಸ್ತಿಕೆ ಇಲ್ಲ. ಅವರಿಗೆ ಗ್ಯಾರಂಟಿಗೆ ಇನ್ನೊಂದನ್ನು ಸೇರಿಸಿಕೊಳ್ಳಲು ಭೂ ಗ್ಯಾರಂಟಿ ಎಂದು ಪ್ರಚಾರ ಪಡೆಯುತ್ತಿದ್ದಾರೆ ಅಷ್ಟೇ ಎಂದರು.

ತಾಲ್ಲೂಕು ಘಟಕದ ಬಿಜೆಪಿ ಅಧ್ಯಕ್ಷ ಮಹೇಶ ಕಮಡೊಳ್ಳಿ, ಬಿಜೆಪಿ ಮುಖಂಡರಾದ ಕಲ್ಯಾಣಕುಮಾರ ಶೆಟ್ಟರ, ಸಿದ್ದಲಿಂಗಣ್ಣ ಕಮಡೊಳ್ಳಿ, ಭೋಜರಾಜ ಕರೂದಿ, ಮಹೇಶ ಬಣಕಾರ, ರಾಮು ಯಳ್ಳೂರ, ರಾಘವೇಂದ್ರ ತಹಶೀಲ್ದಾರ, ಅಣ್ಣಪ್ಪ ಚಾಕಾಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.