
ಹಾವೇರಿ: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಫೆ. 13ರಂದು ‘ಶೂನ್ಯ ಸಾಧನೆಯ ಸಮಾವೇಶ’ ಮಾಡುವುದರಿಂದ ಯಾವುದೇ ಅರ್ಥವಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಸರ್ಕಾರದ ಬಗ್ಗೆ ಜನರಿಗೆ ಭ್ರಮ ನಿರಸನ ಆಗಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದೆ.
ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಮ್ಮ ಜನ್ಮದಿನಾಚರಣೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರಿಗೆ ಈಗ ಅಧಿಕಾರ ಇದೆ. ಸರ್ಕಾರದ ದುಡ್ಡಿನಲ್ಲಿ ಜನ ಸೇರಿಸಿ ರಾಜಕಾರಣ ಮಾತನಾಡುತ್ತಾರೆ. ಸರ್ಕಾರದ ದುಡ್ಡಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಾರೆ. ಅದರಲ್ಲಿ ಒಮ್ಮೆ ಮುಖ್ಯಮಂತ್ರಿ ಶಕ್ತಿ ಪ್ರದರ್ಶನ, ಇನ್ನೊಮ್ಮೆ ಉಪ ಮುಖ್ಯಮಂತ್ರಿ ಶಕ್ತಿ ಪ್ರದರ್ಶನ ಆಗುತ್ತದೆ’ ಎಂದರು.
‘ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ ಜನರಿಗೆ ಮನೆ ನೀಡಲಾಗಿದೆ. ಈಗ, ಕಾಂಗ್ರೆಸ್‌ನವರು ಮನೆಗಳನ್ನು ಪುನಃ ಕೊಡುವುದರಲ್ಲಿ ಅರ್ಥ ಏನಿದೆ. ಇನ್ನೊಬ್ಬರ ಸಾಧನೆಯನ್ನು ತಮ್ಮ ಸಾಧನೆ ಎಂದು ಹೇಳಿಕೊಳ್ಳುವುದರಲ್ಲಿ ಕಾಂಗ್ರೆಸ್ಸಿನವರು ನಿಸ್ಸೀಮರು’ ಎಂದರು.
ಜಿ ರಾಮ್ ಜಿ ಸಮಾವೇಶ ಫೆ. 7ರಂದು: ‘ಗ್ರಾಮಗಳ ಅಭಿವೃದ್ಧಿಗೆ ಜಿ ರಾಮ್ ಜಿ ಯೋಜನೆ ಸಹಕಾರಿಯಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತಿ ಎಲ್ಲ ಸದಸ್ಯರು ಹಾಗೂ ಅಧ್ಯಕ್ಷರಿಗೆ ಸಕಲ ಮಾಹಿತಿ ನೀಡಲು ಫೆ. 7ರಂದು ಸಮಾವೇಶ ಮಾಡುತ್ತಿದ್ದೇವೆ. ಜಿ ರಾಮ್ ಜಿ ಯೋಜನೆ ಪ್ರಯೋಜನವೇನು? 100 ದಿನದಿಂದ 125 ದಿನಕ್ಕೆ ಹೆಚ್ಚಳ ಮಾಡಿರುವುದು, ನೇರ ಹಣ ವರ್ಗಾವಣೆ ಮಾಡಿರುವುದರ ಪ್ರಯೋಜನದ ಬಗ್ಗೆ ಜನರಿಗೆ ತಿಳಿಸಲಿದ್ದೇವೆ’ ಎಂದರು.
‘ಕೇಂದ್ರದಿಂದ ಹೇಗೆ ರಾಜ್ಯಗಳಿಗೆ ಅನುದಾನ ಬರುತ್ತದೆಯೋ ಅದೇ ರೀತಿಯಲ್ಲಿಯೇ ಗ್ರಾಮ ಪಂಚಾಯತಿ, ತಾಲ್ಲೂಕು, ಜಿಲ್ಲಾ ಪಂಚಾಯತಿಗಳಿಗೆ, ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರವು ಎಸ್‌ಎಫ್‌ಸಿಯಿಂದ ₹2,000 ಕೋಟಿ ನೀಡಬೇಕು. ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ಕೊಡದೇ ಎರಡೂವರೆ ವರ್ಷವಾಗಿದೆ. ಯಾವುದೇ ಅನುದಾನ ನೀಡದೇ ಗ್ರಾಮ ವಿಕೇಂದ್ರೀಕರಣದ ಬಗ್ಗೆ ಅವರು ಮಾತನಾಡುತ್ತಿದಾರೆ. ಹಣ ಬಿಡುಗಡೆ ಮಾಡಿಲ್ಲವೇಕೆ? ಎಂಬುದನ್ನು ಅವರು ಮೊದಲು ತಿಳಿಸಬೇಕು’ ಎಂದು ಹೇಳಿದರು.
ವಿಶೇಷ ಚೇತನ ಮಕ್ಕಳ ವಸತಿಶಾಲೆ: ಹಾವೇರಿಯ ಇಜಾರಿಲಕಮಾಪುರದಲ್ಲಿರುವ ಜ್ಯೋತಿ ವಿಶೇಷ ಚೇತನ ಮಕ್ಕಳ ವಸತಿ ಶಾಲೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಸದ ಬಸವರಾಜ ಬೊಮ್ಮಾಯಿ ಅವರು 66ನೇ ಜನ್ಮದಿನದ ಆಚರಿಸಿಕೊಂಡರು. ಮಕ್ಕಳಿಗೆ ಬಟ್ಟೆ, ಪುಸ್ತಕಗಳನ್ನು ವಿತರಿಸಿದರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಮುಖಂಡ ಭರತ ಬೊಮ್ಮಾಯಿ ಇದ್ದರು.
ಸಾಧಕರಿಗೆ ಸನ್ಮಾನ: ಹಾವೇರಿಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬಸವರಾಜ ಬೊಮ್ಮಾಯಿ ಅವರ ಅಭಿಮಾನಿಗಳ ಬಳಗದಿಂದ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯಿತು. ರೈತರಿಗೆ, ಕಾರ್ಮಿಕರಿಗೆ, ಮಾಜಿ ಸೈನಿಕರಿಗೆ, ಪೌರ ಕಾರ್ಮಿಕರಿಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು. ಬಿಜೆಪಿ ಹಾವೇರಿ ಜಿಲ್ಲಾ ಘಟಕದಿಂದಲೂ ಜನ್ಮ ದಿನ ಆಚರಿಸಲಾಯಿತು.
Cut-off box - ‘ರಾಜಕಾರಣಕ್ಕೆ ವಯಸ್ಸಿಲ್ಲ’ ‘ಮತ ಹಾಕಲು ವಯಸ್ಸಿದೆ. ರಾಜಕಾರಣಕ್ಕೆ ವಯಸ್ಸಿಲ್ಲ. ನಿವೃತ್ತಿಗೂ ಮಿತಿಯಿಲ್ಲ. ನಾವು ನಿರಂತರವಾಗಿ ಕೆಲಸ ಮಾಡಬೇಕು. ಸರ್ಕಾರಿ ನೌಕರಿಗೆ ಸೇರಲು ವಿದ್ಯಾರ್ಹತೆ ಕೇಳುತ್ತಾರೆ. ರಾಜಕಾರಣದಲ್ಲಿ ಯಾವುದೇ ಶೈಕ್ಷಣಿಕ ಅರ್ಹತೆ ಇಲ್ಲ. ಏಕೆಂದರೆ ರಾಜಕಾರಣವು ಸೇವಾ ಕ್ಷೇತ್ರ ಯಾರ ಅಧಿಕಾರ ಶಾಸ್ವತವಲ್ಲ. ಸೇವೆ ಶಾಶ್ವತ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ‘ನಾನು ಇಪ್ಪತ್ತು ವರ್ಷ ಬೇರೆಯವರನ್ನು ಶಾಸಕ ಹಾಗೂ ಸಚಿವ ಮಾಡಿದ ಮೇಲೆ ನನಗೆ ಅವಕಾಶ ಸಿಕ್ಕಿತು. ಎಲ್ಲಿಯವರೆಗೂ ಸೇವೆ ಮಾಡುವ ಶಕ್ತಿ ಇರುತ್ತದೆಯೋ ಅಲ್ಲಿಯವರೆಗೂ ರಾಜಕಾರಣದಲ್ಲಿ ಇರಬಹುದು. ಇದನ್ನು ಅರ್ಥ ಮಾಡಿಕೊಂಡು ಎಲ್ಲರೂ ಕೆಲಸ ಮಾಡೋಣ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.