ADVERTISEMENT

ಮಹಾತ್ಮ ಗಾಂಧೀಜಿ ಆತ್ಮದಲ್ಲಿ ಶ್ರೀರಾಮ: ಸಂಸದ ಬಸವರಾಜ ಬೊಮ್ಮಾಯಿ

‘ವಿಬಿ–ಜಿ ರಾಮ್‌ ಜಿ’ ಕಾಯ್ದೆ ಜನಜಾಗೃತಿ ಸಮಾವೇಶ: ಸಂಸದ ಬಸವರಾಜ ಬೊಮ್ಮಾಯಿ ಭಾಗಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:50 IST
Last Updated 24 ಫೆಬ್ರುವರಿ 2026, 6:50 IST
ಹಾವೇರಿಯ ಶಿವಬಸವ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಾವೇರಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ವಿಬಿ–ಜಿ ರಾಮ್‌ ಜಿ’ ಜನಜಾಗೃತಿ ಸಮಾವೇಶ’ದಲ್ಲಿ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು 
ಹಾವೇರಿಯ ಶಿವಬಸವ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಾವೇರಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ವಿಬಿ–ಜಿ ರಾಮ್‌ ಜಿ’ ಜನಜಾಗೃತಿ ಸಮಾವೇಶ’ದಲ್ಲಿ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು    

ಹಾವೇರಿ: ‘ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಿಂದ ಆಗುತ್ತಿರುವ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ‘ವಿಬಿ–ಜಿ ರಾಮ್ ಜಿ’ ಯೋಜನೆ ಜಾರಿಗೆ ತರಲಾಗಿದೆ. ಗಾಂಧೀಜಿ ಹೆಸರು ತೆಗೆದಿರುವ ಬಗ್ಗೆ ಕೆಲವರು ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಗಾಂಧಿಜಿ ಬೇರೆಯಲ್ಲ, ಶ್ರೀರಾಮ ಬೇರೆಯಲ್ಲ. ಗಾಂಧೀಜಿಯ ಆತ್ಮದಲ್ಲಿ ರಾಮ ಇದ್ದಾರೆ ಎಂಬುದನ್ನು ಅವರೆಲ್ಲರೂ ತಿಳಿದುಕೊಳ್ಳಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಾವೇರಿ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ವಿಬಿ–ಜಿ ರಾಮ್‌ ಜಿ’ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಗಾಂಧಿ ಅವರು ಕಂಡ ಕನಸಿನ ರಾಮ ರಾಜ್ಯ ಹಾಗೂ ಗ್ರಾಮ ರಾಜ್ಯ ಎರಡೂ ಒಂದೇ. ಭಾರತದಲ್ಲಿ ರಾಮ ರಾಜ್ಯವನ್ನು ಮಾಡುವ ಸಂಕಲ್ಪವನ್ನು ಪ್ರಧಾನಿ ಮೋದಿ ಅವರು ಮಾಡುತ್ತಿದ್ದಾರೆ. ಪ್ರತಿ ಗ್ರಾಮದಲ್ಲಿ ಶಾಲೆ, ಆಸ್ಪತ್ರೆ ನಿರ್ಮಾಣ ಮಾಡಿ, ಎಲ್ಲ ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಯೋಜನೆಯಲ್ಲಿ ಅವಕಾಶ ನೀಡಲಾಗಿದೆ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಆಯ್ಕೆಯಾಗಬೇಕು’ ಎಂದರು.

ADVERTISEMENT

‘ಗ್ರಾಮ ಪಂಚಾಯಿತಿಗೆ ರಾಜ್ಯ ಸರ್ಕಾರದ ಅವಲಂಬನೆ ಅವಶ್ಯಕತೆಯಿಲ್ಲ. ಮನೆಗಳನ್ನು ಹಂಚಿಕೆ ಮಾಡುವ ಅಧಿಕಾರವೂ ಗ್ರಾಮ ಸಭೆಗಿದೆ. ವಿಧಾನ ಸಭೆಗೆ ಅಧಿಕಾರವಿಲ್ಲ. ಈ ಸರ್ಕಾರ ಗ್ರಾಮ ಸಭೆಗಳನ್ನು ನಿಷ್ಕ್ರಿಯ ಮಾಡಿದೆ. ಜನರು ತಮ್ಮ ಹಕ್ಕಿಗಾಗಿ ಧ್ವನಿ ಎತ್ತಬೇಕಿದೆ. ರಾಜ್ಯ ಸರ್ಕಾರದ ಧೋರಣೆಯನ್ನು ಧಿಕ್ಕರಿಸಿ, ಸಂವಿಧಾನದ ಪ್ರಕಾರ ಅಧಿಕಾರ ಬಳಸಬೇಕಿದೆ’ ಎಂದರು.

‘ರಾಜ್ಯದಲ್ಲಿ ನರೇಗಾ ಜಾರಿಯಾಗಿ 25 ವರ್ಷವಾದರೂ ಗ್ರಾಮಗಳು ಅಭಿವೃದ್ಧಿಯಾಗಿಲ್ಲ. ನಿರುದ್ಯೋಗವೂ ಕಡಿಮೆಯಾಗಿಲ್ಲ. ಬಡವರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿತ್ತು. ಕೂಲಿಕಾರರಿಗೆ ಅನ್ಯಾಯ ಮಾಡಲಾಗುತ್ತಿತ್ತು. ಇದೇ ಕಾರಣಕ್ಕೆ ಪ್ರಧಾನಿಯವರು, ಯೋಜನೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಿದ್ದಾರೆ’ ಎಂದರು.

ಭ್ರಷ್ಟಾಚಾರ ನಿಯಂತ್ರಣ: ‘ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಈ ಯೋಜನೆ ಜಾರಿಗೆ ತಂದಾಗ, ₹ 125 ಕೂಲಿ ಕೊಡುತ್ತಿದ್ದರು. ಆಗ, ದೇಶದ ಬಜೆಟ್ ₹ 30 ಸಾವಿರ ಕೋಟಿ ಇತ್ತು. ಈಗ ₹1.30 ಲಕ್ಷ ಕೋಟಿ ಆಗಿದೆ. ನರೇಂದ್ರ ಮೋದಿಯವರು ಬಂದ ಮೇಲೆ ಈ ಯೋಜನೆಗೆ ಸರಾಸರಿ ಪ್ರತಿ ವರ್ಷ ₹ 1 ಲಕ್ಷ ಕೋಟಿ ಕೊಡುತ್ತಿದ್ದಾರೆ. ಆದರೆ, ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯಿತು. ಏಜೆಂಟರೂ ಹುಟ್ಟಿಕೊಂಡರು. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ, ನರೇಗಾ ಅಕ್ರಮ ಪತ್ತೆ ಹಚ್ಚಿ ಸಿಬಿಐ ತನಿಖೆ ನಡೆಸಲಾಯಿತು. ಕಲಬುರ್ಗಿಯಲ್ಲೂ ಅವ್ಯವಹಾರ ಆಗಿತ್ತು. ಆ ಬಗ್ಗೆಯೂ ಸಿಬಿಐ ತನಿಖೆ ನಡೆಯಿತು. ಭ್ರಷ್ಟಾಚಾರ ನಿಯಂತ್ರಣಕ್ಕಾಗಿಯೇ ಈಗ ಯೋಜನೆ ಬದಲಾಯಿಸಲಾಗಿದೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

₹ 25 ಸಾವಿರ ಕೋಟಿ ಸಾಲ ಮಾಡಿದ್ದ ಸಿದ್ದರಾಮಯ್ಯ: ‘ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ₹ 25 ಸಾವಿರ ಕೋಟಿ ಸಾಲ ಮಾಡಿ, ಅಧಿಕಾರ ಬಿಟ್ಟು ಹೋಗಿದ್ದರು. ಅವರು ಮಾಡಿದ ಸಾಲವನ್ನು ನಮ್ಮ ಸರ್ಕಾರ ತೀರಿಸಿದೆ. ಪ್ರತಿ ವರ್ಷ ನಾಲ್ಕು ಲಕ್ಷ ಕೋಟಿ ಬಜೆಟ್ ಮಂಡನೆ ಮಾಡುವ ಸಿದ್ದರಾಮಯ್ಯ ಅವರಿಗೆ ₹ 30 ಸಾವಿರ ಕೋಟಿ ಸಾಲ ತೀರಿಸಲು ಆಗುವುದಿಲ್ಲವೇ ?. ಸಿದ್ದರಾಮಯ್ಯ ಅವರು ಮುಂದೆ ಬರುವವರಿಗೆ ಸಾಲದ ಹೊರೆ ಹೊರಿಸಿ ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತಾರೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

‘ಲೋಕೋಪಯೋಗಿ ಇಲಾಖೆ, ಎಲೆಕ್ಟ್ರಿಕಲ್, ಬೆಸ್ಕಾಂ ಗುತ್ತಿಗೆದಾರರು ಎಲ್ಲರೂ ಕಮಿಷನ್ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಹಕ್ಕಿಲ್ಲ. ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದರೂ ಎಸ್‌.ಟಿ ಮೀಸಲಾತಿ ಹೆಚ್ಚಳ ಮಾಡಲಿಲ್ಲ. ನಾವು ಅಧಿಕಾರಕ್ಕೆ ಬಂದು ಮಾಡಿದ್ದೇವೆ. ಮುಂದೊಂದು ದಿನ ಮೀಸಲಾತಿ ಹೆಚ್ಚಳಕ್ಕೆ ನ್ಯಾಯ ಸಿಗುತ್ತದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ ಅವರು ಕಸ ತೆಗೆಯಿರಿ ಎಂದರೆ ಪ್ರತಿಪಕ್ಷದ ನಾಯಕರ ಮನೆಗಳ ಮುಂದೆ ಕಾಸ ಹಾಕುತ್ತೇನೆ ಎನ್ನುತ್ತಿದ್ದಾರೆ. ಆಡಳಿತದಲ್ಲಿ ಭ್ರಷ್ಟಾಚಾರದ ಕಸ ಈಗಾಗಲೇ ಹಾಕಿದ್ದಾರೆ. ಈ ತರ ಆಡಳಿತವನ್ನು ನಾನು ನೋಡಿರಲಿಲ್ಲ. ಈ ಮೂರು ವರ್ಷದಲ್ಲಿ ಹಲವು ಯೋಜನೆಗಳನ್ನು ನಿಲ್ಲಿಸಿದ್ದಾರೆ’ ಎಂದು ಕಿಡಿಕಾರಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದು ಸೇವೆ: ‘ಕಾಗ್ರೆಸ್‌ನವರು ಅಧಿಕಾರದ ರಾಜಕಾರಣ ಮಾಡುತಿದ್ದಾರೆ. ನಾವು ಜನರ ನಡುವೆ ರಾಜಕಾರಣ ಮಾಡೋಣ. ಕೇಂದ್ರ ಸರ್ಕಾರ ರೈತರಿಗೆ, ಬಡವರಿಗೆ, ಮಹಿಳೆಯರಿಗೆ ಮಾಡಿರುವ ಯೋಜನೆಗಳನ್ನು ಜನರಿಗೆ ತಿಳಿಸೋಣ. ಮುಂಬರುವ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ಗೆದ್ದು ಜನರ ಸೇವೆ ಮಾಡೋಣ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮುಖಂಡರಾದ ಬಿ.ಸಿ. ಪಾಟೀಲ, ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಗವಿಸಿದ್ದಪ್ಪ ದ್ಯಾಮಣ್ಣವರ, ಭರತ ಬೊಮ್ಮಾಯಿ, ಭೋಜರಾಜ ಕರೂದಿ, ಕಿರಣ ಕೊಳ್ಳಿ, ಮಾರುತಿ ಗೊರವರ, ಬಸವರಾಜ ಕೋಳಿವಾಡ ಇತರರು ಇದ್ದರು. 

‘ಪರಿಶಿಷ್ಟರಿಗೆ ಸಿ.ಎಂ. ಆಗುವ ಹಕ್ಕು’

ರಾಜ್ಯದಲ್ಲಿರುವ ಪರಿಶಿಷ್ಟ ಸಮುದಾಯದವರು 75 ವರ್ಷಗಳಿಂದ ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತ ಬಂದಿದ್ದಾರೆ. ಅವರಿಗೆ ಮುಖ್ಯಮಂತ್ರಿ ಹಕ್ಕಿದೆ. ಅದು ಭಿಕ್ಷೆಯಲ್ಲ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ‘ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರ ನಾಯಕರೆಂದು ಹೇಳಿಕೊಳ್ಳುತ್ತಾರೆ. ಆದರೆ ರಾಜ್ಯದಲ್ಲಿ ಹಿಂದುಳಿದವರು ಮತ್ತು ಪರಿಶಿಷ್ಟರ ಅಭಿವೃದ್ಧಿಗೆ ಏನು ಮಾಡುತ್ತಿಲ್ಲ’ ಎಂದು ದೂರಿದರು.