ADVERTISEMENT

ಹಾನಗಲ್ ಉಪ ಚುನಾವಣೆ: ಗಡಿ ತಾಲ್ಲೂಕುಗಳಲ್ಲಿ ಕಟ್ಟೆಚ್ಚರ ವಹಿಸಿ- ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 12:48 IST
Last Updated 16 ಅಕ್ಟೋಬರ್ 2021, 12:48 IST
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ   

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪಾರದರ್ಶಕವಾಗಿ ನಡೆಸುವ ಹಿನ್ನೆಲೆಯಲ್ಲಿ ಯಾವುದೇ ಚುನಾವಣಾ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಗಡಿ ತಾಲ್ಲೂಕುಗಳ ಚೆಕ್‍ಪೋಸ್ಟ್‌ಗಳಲ್ಲಿ ಕಂದಾಯ, ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಹಾನಗಲ್ ತಾಲ್ಲೂಕಿಗೆ ಹೊಂದಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು, ಕಾರವಾರ ಜಿಲ್ಲೆಯ(ಉತ್ತರ ಕನ್ನಡ) ಶಿರಸಿ, ಮುಂಡಗೋಡ ತಾಲ್ಲೂಕು, ಹಾವೇರಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌, ಅಬಕಾರಿ ಹಾಗೂ ಪೊಲೀಸ್ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಮಾದರಿ ನೀತಿಸಂಹಿತೆ ಜಾರಿಗೊಳಿಸಲಾಗಿದೆ. ಗಡಿ ಭಾಗ ಸೇರಿದಂತೆ 16 ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಅರಣ್ಯ, ಆರ್.ಟಿ.ಒ. ಚೆಕ್ ಪೋಸ್ಟ್‌ಗಳು ಸೇರಿದಂತೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿ ಚೆಕ್‍ಪೋಸ್ಟ್‌ಗಳ ಮೇಲೆ ತೀವ್ರ ಕಣ್ಗಾವಲು ಇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಚುನಾವಣೆಯ ಈ ವೇಳೆ ಹೊರ ಜಿಲ್ಲೆಗಳಿಂದ ಬರುವ ವಾಹನ ವ್ಯಕ್ತಿಗಳ ಮೇಲೆ ತೀವ್ರ ನಿಗಾವಹಿಸಬೇಕು. ಅಕ್ರಮ ಸಾಮಗ್ರಿಗಳು, ಹಣ, ಮದ್ಯ ಸೇರಿದಂತೆ ಶಿರಸಿ, ಮುಂಡಗೋಡ, ಸೊರಬ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ಹಾನಗಲ್ ಕ್ಷೇತ್ರ ಪ್ರವೇಶಿಸುವವರ ಮೇಲೆ ತೀವ್ರ ನಿಗಾವಹಿಸಿ. ರಾತ್ರಿ ವೇಳೆಯಲ್ಲಿ ವಿವಿಧ ತಂಡಗಳನ್ನು ರಚಿಸಿಕೊಂಡು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಜಿಲ್ಲೆಯಾದ್ಯಂತ ರೌಡಿ, ಗೂಂಡಾ, ಸಮಾಜಘಾತುಕ ಶಕ್ತಿಗಳ ಮೇಲೆ ತೀವ್ರ ನಿಗಾವಹಿಸಬೇಕು. ಖಾಸಗಿ ಹೋಟೆಲ್, ರೆಸಾರ್ಟ್, ಲಾಡ್ಜ್, ಕಲ್ಯಾಣ ಮಂಟಪ, ಸಮುದಾಯ ಭವನ ಸೇರಿದಂತೆ ವಿವಿಧೆಡೆ ಚುನಾವಣಾ ಉದ್ದೇಶದಿಂದ ವಾಸ್ತವ್ಯ ಹೂಡಿರುವವರ ಮೇಲೆ ತೀವ್ರ ನಿಗಾವಹಿಸಿ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಮಾತನಾಡಿ, ಚುನಾವಣೆಗೆ ಬಳಸುವ ಬ್ಯಾನರ್, ಬಂಟಿಂಗ್ಸ್ ಹಾಗೂ ಇತರ ಸಾಮಗ್ರಿಗಳನ್ನು ತಯಾರಿಸಲು ಎಂ.ಸಿ.ಎಂ.ಸಿ. ತಂಡದಿಂದ ಪೂರ್ವಾನುಮತಿ ಪಡೆಯಬೇಕು. ಪ್ರಚಾರ ಸಾಮಗ್ರಿಗಳ ಮೇಲೆ ಮುದ್ರಿಸಿದ ಸಂಖ್ಯೆ, ಮುದ್ರಕರ ವಿಳಾಸ ಸೇರಿದಂತೆ ಪೂರ್ಣ ಮಾಹಿತಿ ಪ್ರಕಟಿಸಬೇಕು. ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರ ಸಾಮಗ್ರಿ ಮುದ್ರಿಸಿದ್ದರೆ ಜಿಲ್ಲಾ ಮಟ್ಟದ ವೆಚ್ಚ ನಿರ್ವಹಣಾ ತಂಡಕ್ಕೆ ಮಾಹಿತಿ ನೀಡುವಂತೆ ಸೂಚನೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.