ರಾಣೆಬೆನ್ನೂರು: ವಿದ್ಯಾರ್ಥಿಗಳು ಉತ್ತಮ ಗುರಿ ಇಟ್ಟುಕೊಂಡು ಅಧ್ಯಯನ ಮಾಡಿದರೆ ಉತ್ತಮ ಫಲಿತಾಂಶ ಗಳಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ ಹೇಳಿದರು.
ತಾಲ್ಲೂಕು ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ಗುರುವಾರ ನಿವೃತ್ತ ನೌಕರರ ಸಂಘ, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಜೆಸಿಐ ಅಲ್ಯೂಮಿಸಿ ಕ್ಲಬ್ ವಲಯ -24 ಇವರ ಆಶ್ರಯದಲ್ಲಿ ಏರ್ಪಡಿಸಿದ ಉಚಿತ ನೇತ್ರ ತಪಾಸಣೆ ಶಿಬಿರ ಮತ್ತು ನೇತ್ರ ಸಂರಕ್ಷಣೆ, ನೇತ್ರ ದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಗ್ರಾಮೀಣ ಶಾಲೆಯಲ್ಲಿ ಕಲಿತು ಉತ್ತಮ ಸಾಧನೆ ಮಾಡಿರುವದು ತುಂಬಾ ಸಂತೋಷದ ವಿಷಯ. ಈ ವಿದ್ಯಾರ್ಥಿಗಳು ಮುಂದೆ ಇದೆ ರೀತಿ ಸಾಧನೆ ಮಾಡಲಿ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಸಾಹಿತಿ ಜೆ.ಎಂ. ರಾಜಶೇಖರ ಮಾತನಾಡಿ, ಮನುಷ್ಯರು ಮರಣ ಹೊಂದಿದ ಮೇಲೆ ಮಣ್ಣಿನಲ್ಲಿ ಹೂಳದೇ ಅವರ ದೇಹವನ್ನು ಆಸ್ಪತ್ರೆಗೆ ದಾನ ಮಾಡಿದರೆ ಅದರಿಂದ ನೂರಾರು ಜನರ ಜೀವವನ್ನು ಉಳಿಸಿದ ಪುಣ್ಯ ಬರುತ್ತದೆ. ದೇಹ ದಾನ ಮಾಡಲು ಪೋಷಕರು ಮುಂದೆ ಬರಬೇಕು ಎಂದರು.
ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ವೈದ್ಯರ ತಂಡ 92 ಹಿರಿಯ ನಾಗರಿಕರ ಕಣ್ಣು ತಪಾಸಾಣೆ ಮಾಡಿದರು. ಎಸ್. ಕೆ. ನೇಸ್ವಿ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿದರು. ಪ್ರಭುಲಿಂಗಪ್ಪ ಹಲಗೇರಿ, ವಿ. ಎಂ ಕರ್ಜಗಿ, ಎಂ.ಬಿ.ಬೆನಕಣ್ಣನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.