ರಟ್ಟೀಹಳ್ಳಿ: ತಾಲ್ಲೂಕು ಕೇಂದ್ರ ರಟ್ಟೀಹಳ್ಳಿಯ ಪಟ್ಟಣ ಪಂಚಾಯ್ತಿ ಚುನಾವಣೆ ಅಗಸ್ಟ್ 17 ರಂದು ಜರುಗಲಿದ್ದು, ಪ್ರತಿಯೊಂದು ವಾರ್ಡ್‌ಗಳಲ್ಲಿ 5 ರಿಂದ 6 ಜನ ಆಕಾಂಕ್ಷಿಗಳು ಇದ್ದಾರೆ. ಎಲ್ಲರೂ ಸೇರಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆಮಾಡಿದರೆ ಒಪ್ಪಿಗೆ ಸೂಚಿಸಲಾಗುವುದು. ಇಲ್ಲವಾದಲ್ಲಿ ಪಕ್ಷದ ಕಮಿಟಿ ಯಾರನ್ನು ಅಭ್ಯರ್ಥಿ ಎಂದು ಆಯ್ಕೆ ಮಾಡೋವರೋ ಅವರ ಪರವಾಗಿ ಕೆಲಸಮಾಡಬೇಕು ಎಂದು ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.
ಅವರು ರಟ್ಟೀಹಳ್ಳಿ ಪಟ್ಟಣದಲ್ಲಿ ಬುಧವಾರ ಪಟ್ಟಣ ಪಂಚಾಯ್ತಿ ಚುನಾವಣೆ ಹಿನ್ನಲೆಯಲ್ಲಿ 15 ವಾರ್ಡ್‌ಗಳ ಮುಖಂಡರ ಮತ್ತು ಟಿಕೆಟ್ ಅಕಾಂಕ್ಷಿಗಳ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿಯಿಂದ ಎಲ್ಲ ವಾರ್ಡ್‌ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಗೆಲ್ಲುವ ಭರವಸೆ ನನಗಿದೆ. ರಟ್ಟೀಹಳ್ಳಿ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಶಾಸಕರಾಗಿದ್ದ ಸಂದರ್ಭದಲ್ಲಿ 110 ಕಿ.ಮೀ. ಗ್ರೀಡ್ ಸ್ಥಾಪನೆ, ಕುಡಿಯುವ ನೀರಿನ ವ್ಯವಸ್ಥೆ, ರಟ್ಟೀಹಳ್ಳಿ ತಾಲ್ಲೂಕು ಕೇಂದ್ರ ಮಾಡಲಾಗಿದೆ. ಸರ್ಕಾರಿ ಜ್ಯೂನಿಯರ್ ಕಾಲೇಜು, ಕಾರ್ಮಿಕ ಭವನ, ಅಗ್ನಿಶಾಮಕ ದಳ ಕಚೇರಿ, ಕೃಷಿ ಭವನ, ಪ್ರವಾಸಿ ಮಂದಿರ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಕೃಷಿ ಇಲಾಖೆಯ 28 ಎಕರೆ ಭೂಮಿ ಉಳಿಸಿ ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗಿದೆ, ಎಲ್ಲ ಸರ್ಕಾರಿ ಕಚೇರಿಗಳು ಒಂದೇ ಸ್ಥಳದಲ್ಲಿ ಬರುವಂತೆ ಕ್ರಮವಹಿಸಿದ್ದೇವೆ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಸುಮಾರು ₹ 9 ಕೋಟಿ ವೆಚ್ಚದಲ್ಲಿ ಪಟ್ಟಣಕ್ಕೆ ಸಿ.ಸಿ. ರಸ್ತೆ ಸುವರ್ಣ ಗ್ರಾಮ ಯೋಜನೆಯಡಿ ಮಾಡಲಾಗಿದೆ’ ಎಂದು ವಿವರಿಸಿದರು
ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ದೇವರಾಜ ನಾಗಣ್ಣನವರ ಮಾತನಾಡಿ, ‘ಬಿಜೆಪಿ ಅಧಿಕಾರಾವಧಿಯಲ್ಲಿ ನಮ್ಮ ನಾಯಕರಾದ ಬಿ.ಸಿ.ಪಾಟೀಲ ನೇತೃತ್ವದಲ್ಲಿ ಪಟ್ಟಣದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ’ ಎಂದರು.
ಮುಖಂಡರಾದ ಶಂಭಣ್ಣ ಗೂಳಪ್ಪನವರ, ಆರ್.ಎನ್.ಗಂಗೋಳ, ಎನ್.ಎಂ.ಈಟೇರ್, ಪರಮೇಶಪ್ಪ ಹಲಗೇರಿ, ಫಾಲಾಕ್ಷಗೌಡ ಪಾಟೀಲ, ಡಿ.ಎಂ.ಸಾಲಿ, ಮಾಲತೇಶ ಬೆಳಕೇರಿ, ಸುಶೀಲ ನಾಡಗೇರ, ಕಾವ್ಯ ಪಾಟೀಲ, ಸಂದೀಪ ಪಾಟೀಲ, ಪ್ರಶಾಂತ ದ್ಯಾವಕ್ಕಳವರ, ರವಿ ಮುದ್ದಣ್ಣನವರ, ಸುರೇಶ ಬೆಣ್ಣಿ, ಮಾಲತೇಶ ಗಂಗೋಳ, ಸುರೇಶ ದ್ಯಾವಕ್ಕಳವರ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.