ADVERTISEMENT

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಸರ್ಕಾರ ಪತನ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 15:34 IST
Last Updated 1 ಫೆಬ್ರುವರಿ 2024, 15:34 IST
ಹಾವೇರಿಯಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ.ಸಿ.ಪಾಟೀಲ ಪಾಲ್ಗೊಂಡಿದ್ದರು
ಹಾವೇರಿಯಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ.ಸಿ.ಪಾಟೀಲ ಪಾಲ್ಗೊಂಡಿದ್ದರು   

ಹಾವೇರಿ: ‘ಗ್ಯಾರಂಟಿ ಸೌಲಭ್ಯ ಸಿಗದ ಜನರು ಕಾಂಗ್ರೆಸ್‌ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್‌ಗೆ ತಿರುಗುಬಾಣವಾಗಲಿದ್ದು, ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ಇಲ್ಲಿ ಗುರುವಾರ ನಡೆದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಒಂದೆಡೆ ರಾಜ್ಯದಲ್ಲಿ ಕಾಂಗ್ರೆಸ್‌ ಸಚಿವರಿಗೆ ಧೈರ್ಯವಿಲ್ಲ, ಮತ್ತೊಂದೆಡೆ  ‘ಇಂಡಿಯಾ’ ಒಕ್ಕೂಟದಲ್ಲಿ ಒಡಕಿದೆ. ರಾಜ್ಯದಲ್ಲಿ 28 ಸ್ಥಾನಗಳನ್ನೂ ಬಿಜೆಪಿ ಗೆಲ್ಲಲಿದೆ’ ಎಂದರು. 

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ತಕ್ಷಣ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ₹4 ಸಾವಿರ ನಿಲ್ಲಿಸಿದರು. ರೈತರ ವಿದ್ಯಾನಿಧಿ ಮತ್ತು ರೈತಶಕ್ತಿ ಯೋಜನೆಯನ್ನು ಸ್ಥಗಿತಗೊಳಿಸಿದರು. ರೈತರ ಪಾಲಿಗೆ ಕಾಂಗ್ರೆಸ್ ಸರ್ಕಾರ ಮಾರಕವಾಗಿದೆ’ ಎಂದು ಅವರು ಆರೋಪಿಸಿದರು. 

ADVERTISEMENT

ಆತ್ಮಹತ್ಯೆ ಹೆಚ್ಚಳ:

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ 500ಕ್ಕೂ ಹೆಚ್ಚು ರೈತರ ಆತ್ಮಹತ್ಯೆಗಳಾಗಿವೆ. ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಸಮರ್ಪಕವಾಗಿ ಬರ ಪರಿಹಾರ ನೀಡದೆ, ಕೇವಲ ₹2 ಸಾವಿರ ನೀಡುತ್ತಿದೆ’ ಎಂದರು.

‘ಗ್ಯಾರಂಟಿ ಯೋಜನೆಗಳನ್ನು ಪ್ರಚಾರ ಮಾಡಿದ್ದಕ್ಕೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡದಲ್ಲಿ ಕಾಂಗ್ರೆಸ್‌ ನೆಲಕಚ್ಚಿತು. ಈಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತರೆ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುತ್ತವೆ ಎಂದು ಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್‌ ನಾಯಕರು ಮತದಾರರಿಗೆ ಧಮಕಿ ಹಾಕುತ್ತಿದ್ದಾರೆ’ ಎಂದರು.

ಅಭಿವೃದ್ಧಿ ಶೂನ್ಯ:

‘ಕಾಂಗ್ರೆಸ್‌ನ ಯಾವ ಶಾಸಕರಿಗೂ ಕ್ಷೇತ್ರದ ಅಭಿವೃದ್ಧಿಗೆ  ₹50 ಕೋಟಿ ಕೊಟ್ಟಿಲ್ಲ. 8 ತಿಂಗಳಾದರೂ ಒಂದು ಅಭಿವೃದ್ಧಿ ಕಾರ್ಯವೂ ನಡೆದಿಲ್ಲ. ‘ಗರೀಬಿ ಹಠಾವೋ’ ಎನ್ನುತ್ತ ದೇಶವನ್ನು 50 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್‌ ಬಡತನ ನಿವಾರಿಸಲಿಲ್ಲ’ ಎಂದರು.

Quote - ಎಲ್ಲರಿಗೂ ಉಚಿತ ವಿದ್ಯುತ್‌ ಎಂದು ಹೇಳಿದ್ದ ಕಾಂಗ್ರೆಸ್‌ ಸರ್ಕಾರ ಎಷ್ಟು ಜನರಿಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುತ್ತಿದೆ ಎಂಬ ಬಗ್ಗೆ ಪಟ್ಟಿ ಬಿಡುಗಡೆ ಮಾಡಲಿ – ಬಸವರಾಜ ಬೊಮ್ಮಾಯಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.