ADVERTISEMENT

ಹಾವೇರಿ | ‘ಕಾಂಗ್ರೆಸ್ ಮುಕ್ತ ಜಿಲ್ಲೆ’ಗಾಗಿ ಬಿಜೆಪಿ ಶಪಥ

* ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ * ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಮಲಪಡೆ ಕಹಳೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 14:19 IST
Last Updated 23 ಜೂನ್ 2025, 14:19 IST
ಹಾವೇರಿಯಲ್ಲಿ ಸೋಮವಾರ ಆಯೋಜಿಸಿದ್ದ ‘ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ’ದಲ್ಲಿ ಪಕ್ಷದ ಬಾವುಟ ಹಸ್ತಾಂತರಿಸುವ ಮೂಲಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಅಧಿಕಾರ ವಹಿಸಲಾಯಿತು
ಹಾವೇರಿಯಲ್ಲಿ ಸೋಮವಾರ ಆಯೋಜಿಸಿದ್ದ ‘ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭ’ದಲ್ಲಿ ಪಕ್ಷದ ಬಾವುಟ ಹಸ್ತಾಂತರಿಸುವ ಮೂಲಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಅಧಿಕಾರ ವಹಿಸಲಾಯಿತು   

ಹಾವೇರಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಜಿಲ್ಲಾ ಘಟಕದ ನೂತನ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಅವರ ಪದಗ್ರಹಣ ಸಮಾರಂಭದಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಕಮಲಪಡೆ, ‘ಹಾವೇರಿಯನ್ನು ಕಾಂಗ್ರೆಸ್ ಶಾಸಕ ಮುಕ್ತ ಜಿಲ್ಲೆ ಮಾಡುತ್ತೇವೆ’ ಎಂದು ಶಪಥ ಮಾಡಿತು.

ಜಿಲ್ಲೆಯ ಆರು ಶಾಸಕ ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದು, ‘ಹಾವೇರಿ ಜಿಲ್ಲೆ ಬಿಜೆಪಿ ಮುಕ್ತ ಜಿಲ್ಲೆ’ ಎನಿಸಿಕೊಂಡಿದೆ. ಶಿಗ್ಗಾವಿ ಉಪಚುನಾವಣೆಯ ಸೋಲಿನ ನಂತರ ಬಿಜೆಪಿ ಪದಾಧಿಕಾರಿಗಳ ಮೇಲೆ ಕೆಲ ಕಾರ್ಯಕರ್ತರು ಅಸಮಾಧಾನಗೊಂಡಿದ್ದರು. ಇದರ ನಡುವೆಯೇ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಅರುಣಕುಮಾರ ಪೂಜಾರ ಅವರನ್ನು ಸ್ಥಾನದಿಂದ ಕೆಳಗೆ ಇಳಿಸಲಾಗಿದ್ದು, ಅವರ ಸ್ಥಾನಕ್ಕೆ ನೂತನವಾಗಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರನ್ನು ನೇಮಿಸಲಾಗಿದೆ.

ಹಾವೇರಿಯ ಶಿವಶಕ್ತಿ ಪ್ಯಾಲೇಸ್‌ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕಿಕ್ಕಿರಿದು ತುಂಬಿದ್ದ ಬಿಜೆಪಿ ಕಾರ್ಯಕರ್ತರು, ಹೊಸ ಹುರುಪಿನೊಂದಿಗೆ ಮುಂಬರುವ ಚುನಾವಣೆಗೆ ಕಹಳೆ ಊದಿದರು. ಬಿಜೆಪಿ ಬಾವುಟ ಹಸ್ತಾಂತರಿಸುವ ಮೂಲಕ ನೂತನ ಅಧ್ಯಕ್ಷರಿಗೆ ಅಧಿಕಾರ ವಹಿಸಲಾಯಿತು.

ADVERTISEMENT

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ, ‘ಜಿಲ್ಲೆಯಲ್ಲಿ ಬಿಜೆಪಿಗೆ ಸೋಲಾಗಿದೆಯೆಂದು ನೆನಪಿಸಿಕೊಂಡು ಕುಳಿತುಕೊಳ್ಳಬೇಡಿ. ರಾತ್ರಿ ಮುಗಿದ ಮೇಲೆ ಹಗಲು ಬರಲೇ ಬೇಕು. ಅವರು ಸೋಲಿಸಿದರು ? ಇವರು ಸೋಲಿಸಿದರು ? ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಬಿಜೆಪಿ ಗೆಲ್ಲಿಸಲು ಸಂಘಟನೆ ಮಾಡಿ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರಿಗೆ ತಿಳಿಸಿ ಎಚ್ಚರಿಸಿ’ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಸಂಸದ ಬಸವರಾಜ ಬೊಮ್ಮಾಯಿ, ‘ನನ್ನ ಲೋಕಾಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬಾವುಟ ಹಾರಿಸಲು ಸಂಕಲ್ಪ ಮಾಡಿದ್ದೇನೆ. ಮುಖಂಡರು ಹಾಗೂ ಕಾರ್ಯಕರ್ತರೆಲ್ಲರೂ ಒಗ್ಗಟ್ಟಿನಿಂದ ಸಂಘಟನೆ ಬಲಪಡಿಸೋಣ’ ಎಂದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ‘ಬಿಜೆಪಿ ಸರ್ಕಾರ ಮಾಡಿದ್ದ ಶೇ 10ರಷ್ಟು ಕೆಲಸವನ್ನೂ ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ತಾಯಂದಿರು ಗ್ಯಾರಂಟಿಗೆ ಜೋತು ಬಿದ್ದಿದ್ದರಿಂದ ಬಿಜೆಪಿಗೆ ಹೀನಾಯ ಸೋಲಾಯಿತು. ಇದೇ ನವೆಂಬರ್–ಡಿಸೆಂಬರ್‌ನಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರಲಿವೆ. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮುಂಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಹಾವೇರಿ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಬಿಜೆಪಿಯ ಪತಾಕೆ ಹಾರಬೇಕು’ ಎಂದು ಹೇಳಿದರು.

ಮುಖಂಡ ಬಿ.ಸಿ. ಪಾಟೀಲ ಮಾತನಾಡಿ, ‘ಕಾಂಗ್ರೆಸ್ ಸಿನಿಮಾ ಪ್ಲಾಪ್‌ ಆಗಿದೆ. ಈಗ ಬಿಜೆಪಿ ಸಿನಿಮಾ ನೋಡಲು ಜನರು ಹೆಚ್ಚಿನ ಸಂಂಖ್ಯೆಯಲ್ಲಿ ಬರುತ್ತಿದ್ದಾರೆ’ ಎಂದರು.

ನಿರ್ಗಮಿತ ಅಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ‘ನಾನು ಹಾಗೂ ವಿರೂಪಾಕ್ಷಪ್ಪ, ಅಣ್ಣ–ತಮ್ಮಂದಿರಂತೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸಿ ವೇದಿಕೆ ಮೇಲೆ ಕೂರಿಸುತ್ತೇವೆ’ ಎಂದರು.

ನೂತನ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ‘ಯಾವ ಗ್ಯಾರಂಟಿಗೂ ನಾವು ಸೋತಿಲ್ಲ. ಸಣ್ಣ ವಿಷಯಗಳಿಗೆ ಬಿಜೆಪಿಗೆ ಸೋಲಾಯಿತು. ನಮ್ಮಲ್ಲಿಯೇ ತಪ್ಪುಗಳನ್ನು ಮಾಡಿದ್ದಕ್ಕೆ ಜನರು ಶಿಕ್ಷೆ ಕೊಟ್ಟರು. ಆದರೆ, ಈಗ ನಾವು ಬದಲಾಗೋಣ. ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್‌ಗೆ ಬುದ್ದಿ ಕಲಿಸೋಣ’ ಎಂದರು.

ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಮುಖಂಡರಾದ ಶಿವರಾಜ ಸಜ್ಜನರ, ಭರತ್ ಬೊಮ್ಮಾಯಿ, ನಾಗೇಂದ್ರ ಕಡಕೋಳ, ಶೋಭಾ ನಿಸ್ಸೀಮಗೌಡ್ರ, ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಸಂತೋಷಕುಮಾರ ಪಾಟೀಲ, ಭೋಜರಾಜ ಕರೂದಿ ಇದ್ದರು.

ಸೂರ್ಯ–ಚಂದ್ರರ ರೀತಿಯಲ್ಲಿ ಬಿಜೆಪಿಗೆ ಗ್ರಹಣ ಹಿಡಿದು ಕೆಟ್ಟಕಾಲ ಬಂದಿದ್ದು ಇದುವೇ ಅಂತಿಮ. ಮುಂದೆ ಒಳ್ಳೆಯ ಕಾಲ ಬರಲಿದೆ

-ರಾಜೂಗೌಡ ಉಪಾಧ್ಯಕ್ಷ ಬಿಜೆಪಿ ರಾಜ್ಯ ಸಮಿತಿ

ರಾಜ್ಯದಲ್ಲಿ 700 ಬಾಣಂತಿಯರ ಸಾವಾಗಿದ್ದು 45 ಹೆಣ್ಮಕ್ಕಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಈ ಕಾಂಗ್ರೆಸ್ ಸರ್ಕಾರ ಲಜ್ಜೆಗೆಟ್ಟ ಸರ್ಕಾರ

-ಗೋವಿಂದ ಕಾರಜೋಳ ಸಂಸದ

ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾದರೆ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುತ್ತಾರೆ. ಸಿದ್ದರಾಮಯ್ಯ ಹೇಗೆ ಎಂಬುದನ್ನು ನೋಡಿದ್ದೇನೆ

- ಬಿ.ಸಿ. ಪಾಟೀಲ ಮುಖಂಡ

ರಾಜ್ಯ ಸರ್ಕಾರದ ವಿರುದ್ಧ ಮಾತನಾಡಿದವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ರಾಜ್ಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯಿದೆ

-ಬಸವರಾಜ ಬೊಮ್ಮಾಯಿ ಸಂಸದ

ಜೇಬಿಗೆ ಕತ್ತರಿ: ₹ 1 ಲಕ್ಷ ಕಳವು ಪದಗ್ರಹಣ ಸಮಾರಂಭಕ್ಕೆ ಬಂದಿದ್ದ ಕಾರ್ಯಕರ್ತರ ಜೇಬಿಗೆ ಕಳ್ಳರು ಕತ್ತರಿ ಹಾಕಿದ್ದು ಸುಮಾರು ₹ 1 ಲಕ್ಷ ನಗದು ಕಳವು ಮಾಡಿದ್ದಾರೆ. ಹಾವೇರಿ ನಾಗೇಂದ್ರನಮಟ್ಟಿ ನಿವಾಸಿ ಚಿಕ್ಕಪ್ಪ ದೊಡ್ಡತಳವಾರ ಅವರ ಜೇಬಿನಲ್ಲಿದ್ದ ₹ 50 ಸಾವಿರ ಕಳ್ಳತನವಾಗಿದೆ. ಹಾನಗಲ್ ತಾಲ್ಲೂಕಿನ ದಶರಥಕೊಪ್ಪದ ಮಹೇಶ ಹಿರೇಮಠ ಎಂಬುವವರ ₹ 25 ಸಾವಿರ ಕಳುವಾಗಿದೆ. ಇನ್ನೊಬ್ಬ ಕಾರ್ಯಕರ್ತರ ₹ 25 ಸಾವಿರವನ್ನು ಕದಿಯಲಾಗಿದೆ. ಮೂವರು ಹಾವೇರಿ ಶಹರ ಠಾಣೆಗೆ ದೂರು ನೀಡಿದ್ದಾರೆ. ಮೊಬೈಲ್‌ಗಳೂ ಕಳ್ಳತನವಾದ ಬಗ್ಗೆ ವರದಿಯಾಗಿದೆ. ‘ನಿವೇಶನ ವ್ಯವಹಾರ ಸಂಬಂಧ ವ್ಯಕ್ತಿಯೊಬ್ಬರಿಗೆ ಹಣ ನೀಡಬೇಕಿತ್ತು. ಸಮಾರಂಭ ಮುಗಿಸಿಕೊಂಡು ಕೊಟ್ಟರಾಯಿತೆಂದು ಅಂದುಕೊಂಡಿದ್ದೆ. ಸಮಾರಂಭದಲ್ಲಿ ಯಾರೋ ಕಳ್ಳರು ಹಣ ಕದ್ದಿದ್ದಾರೆ’ ಎಂದು ಕಾರ್ಯಕರ್ತರೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.