ADVERTISEMENT

ಎಲ್ಲರ ಹೃದಯದಲ್ಲಿ ‘ಕಮಲ’ ಅರಳಿಸಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 10:16 IST
Last Updated 29 ಫೆಬ್ರುವರಿ 2020, 10:16 IST
ಹಾವೇರಿಯಲ್ಲಿ ಶುಕ್ರವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಶಿವರಾಜ ಸಜ್ಜನರ ಅವರು ಪಕ್ಷದ ಬಾವುಟವನ್ನು ನೂತನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಅವರಿಗೆ ಹಸ್ತಾಂತರಿಸಿದರು. ನಳಿನ್ ಕುಮಾರ್‌ ಕಟೀಲ್ ಇದ್ದಾರೆ  –ಪ್ರಜಾವಾಣಿ ಚಿತ್ರ
ಹಾವೇರಿಯಲ್ಲಿ ಶುಕ್ರವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಶಿವರಾಜ ಸಜ್ಜನರ ಅವರು ಪಕ್ಷದ ಬಾವುಟವನ್ನು ನೂತನ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಅವರಿಗೆ ಹಸ್ತಾಂತರಿಸಿದರು. ನಳಿನ್ ಕುಮಾರ್‌ ಕಟೀಲ್ ಇದ್ದಾರೆ  –ಪ್ರಜಾವಾಣಿ ಚಿತ್ರ   

ಹಾವೇರಿ: ‘ಬಿಜೆಪಿಯ ಹಡಗು ಈಗ ತುಂಬಿದೆ. ಮುಂದಿನ ಪಂಚಾಯ್ತಿ ಚುನಾವಣೆಗಳಲ್ಲೂ ಕಾರ್ಯಕರ್ತರು ಮನೆ–ಮನೆಗೆ ಹೋಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ತಿಳಿಸಿ, ಎಲ್ಲರ ಹೃದಯದಲ್ಲೂ ಕಮಲ ಅರಳಿಸಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಸಲಹೆ ನೀಡಿದರು.

ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಚಹಾ ಮಾರುತ್ತಿದ್ದ ಮೋದಿ ದೇಶದ ಪ್ರಧಾನಿಯಾದರು, ಮಂಡಲ ಅಧ್ಯಕ್ಷರಾಗಿದ್ದ ಅಮಿತ್‌ಶಾ ದೇಶದ ಗೃಹಮಂತ್ರಿಯಾದರು. ಸಾಮಾನ್ಯ ಕಾರ್ಯಕರ್ತನಾಗಿದ್ದ ಸಿದ್ದರಾಜ ಕಲಕೋಟಿ ಇಂದು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಇದು ಪದಗ್ರಹಣ ಸಮಾರಂಭವಲ್ಲ. ಮುಂದಿನ ಚುನಾವಣೆಯ ಸಂಕಲ್ಪ ಸಭೆ. ಪಕ್ಷ ಸಂಘಟನೆಗಾಗಿ ‘ಮನೆ ಬಿಟ್ಟು ಬೂತ್‌ ಸುತ್ತು’ (ಎಂಬಿಬಿಎಸ್‌) ಎಂದು ಹಾಸ್ಯ ದಾಟಿಯಲ್ಲಿ ಸಲಹೆ ನೀಡಿದರು.

ADVERTISEMENT

ಪಕ್ಷಕ್ಕಿಂತ ದೇಶ ಮುಖ್ಯ:ಹಣದ ಅಧಿಕಾರ, ಗೂಂಡಾಗಿರಿ, ಜಾತೀಯತೆಯಿಂದ ಬಿಜೆಪಿ ಬೆಳೆದಿಲ್ಲ. ಹಿರಿಯರ ಪರಿಶ್ರಮ ಮತ್ತು ಸ್ವದೇಶಿ ಮಂತ್ರದಿಂದ ಬೆಳೆದಿದೆ. ಒಬ್ಬರೇ ಒಬ್ಬ ಶಾಸಕನಿಲ್ಲದ ಕಾಲದಲ್ಲಿ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದವರು ಬಿ.ಎಸ್‌. ಯಡಿಯೂರಪ್ಪ. ಅದೇ ರೀತಿ ಜಿಲ್ಲೆಯಲ್ಲಿ ಇಬ್ಬರೇ ಶಾಸಕರಿದ್ದ ಕಾಲದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶಿವರಾಜ ಸಜ್ಜನ, ಇಂದು ಹಾವೇರಿಯನ್ನು ಕಮಲದ ಭದ್ರಕೋಟೆಯನ್ನಾಗಿಸಿದ್ದಾರೆ. ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂದರು.

ದೇಶದ ಯಾವುದೇ ಅಲ್ಪಸಂಖ್ಯಾತರ ಪೌರತ್ವವನ್ನೂ ಸಿಎಎ ಕಸಿಯುವುದಿಲ್ಲ. ಇದು ಪೌರತ್ವ ಕೊಡುವ ಕಾಯ್ದೆ. ಪಾಕಿಸ್ತಾನದಲ್ಲಿ ಇದುವರೆಗೂ ಯಾವುದೇ ಅಲ್ಪಸಂಖ್ಯಾತ ಅಧ್ಯಕ್ಷನಾಗಲಿಲ್ಲ. ನಮ್ಮ ದೇಶದಲ್ಲಿ ಮುಖ್ಯ ನ್ಯಾಯಮೂರ್ತಿ, ರಾಷ್ಟ್ರಪತಿ ಹುದ್ದೆಯನ್ನು ಅಲ್ಪಸಂಖ್ಯಾತರು ಅಲಂಕರಿಸಿದ್ದಾರೆ. ಮುಂದೆಯೂ ಅಲ್ಪಸಂಖ್ಯಾತರನ್ನು ರಾಷ್ಟ್ರಪತಿ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಷಡ್ಯಂತ್ರ:ಸಂಸದ ಶಿವಕುಮಾರ ಉದಾಸಿ ಮಾತನಾಡಿ,ಸಿಎಎ ವಿರೋಧಿಸುವ ನೆಪದಲ್ಲಿ ಕಾಂಗ್ರೆಸ್‌ ಮಿತ್ರಮಂಡಳಿಯಿಂದ ಷಡ್ಯಂತ್ರ ನಡೆಯುತ್ತಿದೆ. ಮನೆಗಳಲ್ಲಿ ಪೆಟ್ರೋಲ್‌ ಬಾಂಬ್‌, ಆಯುಧಗಳು ಸಿಗುತ್ತಿವೆ. ಈ ಷಡ್ಯಂತ್ರದ ಬಗ್ಗೆ ಬಿಜೆಪಿ ಕಾರ್ಯಕರ್ತರು ಮತದಾರರಿಗೆ ತಿಳಿಸಬೇಕು. ಎರಡು ಮೂರು ದಿನಗಳಲ್ಲಿ ಮಂಗಳೂರು ಗಲಭೆಯನ್ನು ರಾಜ್ಯದಲ್ಲಿ ನಿಯಂತ್ರಿಸಲಾಯಿತು. ದೆಹಲಿಯಲ್ಲಿ ಏಕೆ ಸಾಧ್ಯವಾಗುತ್ತಿಲ್ಲ. ಅರ್ಬನ್‌ ನಕ್ಸಲರಿಂದ ಮೋದಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯತ್ನ ನಡೆಯುತ್ತಿದೆ ಎಂದು ಆರೋಪ ಮಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಎಲ್ಲ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ ಪಕ್ಷ ಬಲಪಡಿಸುತ್ತೇನೆ. ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುತ್ತೇನೆ. ಪಕ್ಷಕ್ಕೆ ಕಪ್ಪುಚುಕ್ಕೆ ಬಾರದಂತೆ ಕಾರ್ಯ ನಿರ್ವಹಿಸುತ್ತೇನೆ ಎಂದರು.

ಮರಣದ ನಂತರ ನೇತ್ರದಾನ ಮಾಡುವುದಾಗಿ ಶಪಥ ಪತ್ರವನ್ನು ಕಲಕೋಟಿ ಅವರು ನಳೀನಕುಮಾರ ಕಟೀಲ್‌ ಅವರಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಎಂ. ಉದಾಸಿ, ನೆಹರು ಓಲೇಕಾರ, ಅರುಣ್‌ಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ವಿ. ಸಂಕನೂರ, ರಾಜ್ಯ ಉಪಾಧ್ಯಕ್ಷ ಮಾ.ನಾಗರಾಜ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಶಿವರಾಜ ಸಜ್ಜನ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ನಗರ ಮಂಡಲ ಅಧ್ಯಕ್ಷರು, ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.