ಸೋಮಪ್ಪ ಶಿವಪ್ಪ ನಾಯ್ಕರ
ಹಾವೇರಿ: ಟ್ರ್ಯಾಕ್ಟರ್ ನೋಂದಣಿ ಮಾಡಿಸಲು ಅಗತ್ಯವಿದ್ದ ಬೋನೊಫೈಡ್ ಪ್ರಮಾಣ ಪತ್ರ ನೀಡಲು ₹5 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪದಡಿ ಕರ್ಜಗಿ ಉಪ ತಹಶೀಲ್ದಾರ್ ಸೋಮಪ್ಪ ಶಿವಪ್ಪ ನಾಯ್ಕರ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹಾವೇರಿ ತಾಲ್ಲೂಕಿನ ಕರ್ಜಗಿಯಲ್ಲಿರುವ ನಾಡಕಚೇರಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಲೋಕಾಯುಕ್ತ ಇನ್‌ಸ್ಪೆಕ್ಟರ್ ಮುಸ್ತಾಕ ಅಹ್ಮದ್ ನೇತೃತ್ವದ ತಂಡ ಸೋಮಪ್ಪ ಅವರನ್ನು ಬಂಧಿಸಿದೆ.
‘ಕಳ್ಳಿಹಾಳದ ಪಂಚಯ್ಯ ಹಿರೇಮಠ ಎಂಬುವವರು ಕೃಷಿ ಕೆಲಸಕ್ಕೆಂದು ತಮ್ಮ ಸಹೋದರನ ಹೆಸರಿನಲ್ಲಿ ಟ್ರ್ಯಾಕ್ಟರ್ ಖರೀದಿಸಿದ್ದರು. ಅದರ ನೋಂದಣಿ ಮಾಡಿಸಲು ಬೋನೊಫೈಡ್ ಪ್ರಮಾಣ ಪತ್ರದ ಅಗತ್ಯವಿತ್ತು. ಅದನ್ನು ಮಾಡಿಕೊಡುವಂತೆ ಅರ್ಜಿ ನೀಡಿದ್ದರು’ ಎಂದು ಲೋಕಾಯುಕ್ತ ಪೊಲೀಸರು ಹೇಳಿದರು.
‘ಅರ್ಜಿ ವಿಲೇವಾರಿ ಮಾಡಿ ಬೋನೊಫೈಡ್ ಪ್ರಮಾಣ ಪತ್ರ ನೀಡಲು ಸೋಮಪ್ಪ, ₹5 ಸಾವಿರ ಲಂಚ ಕೇಳಿದ್ದರು. ಮುಂಗವಾಡಿ ₹500 ಪಡೆದುಕೊಂಡಿದ್ದರು. ಈ ಬಗ್ಗೆ ಪಂಚಯ್ಯ ಅವರು ಮಾಹಿತಿ ನೀಡಿದ್ದರು. ಬುಧವಾರ ಪುನಃ ₹2 ಸಾವಿರ ಪಡೆಯುವ ಸಂದರ್ಭದಲ್ಲಿ ಸೋಮಪ್ಪ ಅವರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.
ಸೋಮಪ್ಪ ಅವರನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು, ಕಚೇರಿ ಹಾಗೂ ಮನೆಯಲ್ಲಿ ಶೋಧ ಮುಂದುವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.