ADVERTISEMENT

ಹೋರಿ ಗುದ್ದಿ ನಾಲ್ವರು ಸಾವು: ಹೋರಿ ಮಾಲೀಕರು, ಆಯೋಜಕರ ವಿರುದ್ಧ ಎಫ್‌ಐಆರ್

ಹಟ್ಟಿ ಹಬ್ಬದ ಆಚರಣೆ: ಹೋರಿ ಗುದ್ದಿ ನಾಲ್ವರು ಸಾವು, ಸ್ಪರ್ಧೆ ಆಯೋಜನೆ ಮೇಲೆ ಪೊಲೀಸರು ಕಣ್ಣು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 4:27 IST
Last Updated 24 ಅಕ್ಟೋಬರ್ 2025, 4:27 IST
ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಏರ್ಪಡಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಫೈಲ್ವಾನರು ಹೋರಿ ಹಿಡಿಯಲು ಜಮಾಯಿಸಿದ್ದರೆ, ಕೆಲ ಯುವಕರ ಗುಂಪು ಪ್ರಾಣದ ಹಂಗು ತೊರೆದು ಕೈಯಲ್ಲಿ ಮೊಬೈಲ್ ಹಿಡಿದು ಓಡುವ ಹೋರಿಗಳ ಎದುರೇ ನಿಂತು ವಿಡಿಯೊ ಮಾಡಿದರು
ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಏರ್ಪಡಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಫೈಲ್ವಾನರು ಹೋರಿ ಹಿಡಿಯಲು ಜಮಾಯಿಸಿದ್ದರೆ, ಕೆಲ ಯುವಕರ ಗುಂಪು ಪ್ರಾಣದ ಹಂಗು ತೊರೆದು ಕೈಯಲ್ಲಿ ಮೊಬೈಲ್ ಹಿಡಿದು ಓಡುವ ಹೋರಿಗಳ ಎದುರೇ ನಿಂತು ವಿಡಿಯೊ ಮಾಡಿದರು   

ಹಾವೇರಿ: ಜಿಲ್ಲೆಯಾದ್ಯಂತ ಹಟ್ಟಿ ಹಬ್ಬದ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ಹೋರಿ ಬೆದರಿಸುವ ಆಚರಣೆ’ ವೇಳೆ ಅವಘಡ ಸಂಭವಿಸಿ ನಾಲ್ವರು ಮೃತಪಟ್ಟಿದ್ದು, ಪ್ರಾಣಿ ಹಿಂಸೆ ಹಾಗೂ ನಿರ್ಲಕ್ಷ್ಯದ ಆರೋಪದಡಿ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೀಪಾವಳಿ ಹಬ್ಬವನ್ನು ಜಿಲ್ಲೆಯ ಜನರು, ಹಟ್ಟಿ ಹಬ್ಬ (ಹಟ್ಟಿ ಲಕ್ಕವ್ವ ಪೂಜೆ) ಎಂದೇ ಆಚರಿಸುತ್ತಾರೆ. ಹಬ್ಬದ ದಿನದಂದು ಹೋರಿಗಳನ್ನು ಅಲಂಕರಿಸಿ ಪೂಜೆ ಮಾಡುತ್ತಾರೆ. ಇದೇ ಹೋರಿಗಳನ್ನು ಕಿಕ್ಕಿರಿದು ಸೇರುವ ಜನರ ನಡುವೆ ಓಡಿಸುತ್ತಾರೆ. ಈ ಗ್ರಾಮೀಣ ಆಚರಣೆ ವೇಳೆಯಲ್ಲಿಯೇ ಈ ವರ್ಷ ನಾಲ್ವರು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡು ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ.

‘ಹೋರಿ ಬೆದರಿಸುವ ಆಚರಣೆಗೂ ಸ್ಪರ್ಧೆಗೂ ವ್ಯತ್ಯಾಸವಿದೆ. ಆಚರಣೆ ವೇಳೆ ನಡೆದಿರುವ ಅವಘಡಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮುಂದಿನ ದಿನಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹೆಚ್ಚುವರಿ ಪೊಲೀಸ್ ಎಸ್‌ಪಿ ಎಲ್‌.ವೈ. ಶಿರಕೋಳ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹಾವೇರಿಯ ದಾನೇಶ್ವರಿನಗರದ ಚಂದ್ರಶೇಖರ ಕೋಡಿಹಳ್ಳಿ (75), ಹಾವೇರಿ ತಾಲ್ಲೂಕಿನ ದೇವಿಹೊಸೂರಿನ ಘನಿಸಾಬ ಮಹಮ್ಮದ್ ಹುಸೇನ್ ಬಂಕಾಪುರ (75), ಹಾನಗಲ್ ತಾಲ್ಲೂಕಿನ ತಿಳವಳ್ಳಿಯ ಭರತ್ ರಾಮಪ್ಪ ಹಿಂಗಮೇರಿ (24), ಯಳವಟ್ಟಿ ಗ್ರಾಮದ ಶ್ರೀಕಾಂತ ಗುರುಶಾಂತಪ್ಪ ಕೋಣನಕೇರಿ (40) ಎಂಬುವವರು ಅವಘಡದಲ್ಲಿ ಮೃತಪಟ್ಟಿದ್ದಾರೆ.’

‘ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಹೇಳಿಕೆ ಪಡೆಯಲಾಗಿದೆ. ಪ್ರಾಣಿ ಹಿಂಸೆ ಹಾಗೂ ಪ್ರಾಣಿಯನ್ನು ಪ್ರಚೋದಿಸಿ ನಿರ್ಲಕ್ಷ್ಯ ವಹಿಸಿ ಸಾವಿಗೆ ಕಾರಣವಾದ ಆರೋಪದಡಿ ಹೋರಿ ವಾರಸುದಾರರು/ಪೋಷಕರು, ಆಯೋಜಕರು ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಸ್ಪರ್ಧೆಗಳು ನಡೆದರೆ, ಹೋರಿ ಮಾಲೀಕರು, ಆಯೋಜಕರು, ಪ್ರೋತ್ಸಾಹಕರು, ಬಹುಮಾನ ಕೊಡಿಸುವ ದಾನಿಗಳು ಹಾಗೂ ಪ್ರಚೋದಿಸುವ ಎಲ್ಲರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪೆಟ್ಟಾದರೂ ಮನೆಗೆ ಹೋಗಿದ್ದ ಮೆಕ್ಯಾನಿಕ್: ‘ತಿಳವಳ್ಳಿಯ ಭರತ್ (24), ಸಹೋದರನ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದರು. ಆಚರಣೆ ನೋಡಲು ಹೋಗಿದ್ದಾಗ ಹೋರಿಯೊಂದು ಗುದ್ದಿದ್ದರಿಂದ ನೆಲಕ್ಕೆ ಬಿದ್ದಿದ್ದರು. ತಲೆಗೆ ತೀವ್ರ ಪೆಟ್ಟಾಗಿತ್ತು. ಜನರು ನೀರು ಕುಡಿಸಿದ್ದರು. ನಂತರ, ಚೇತರಿಸಿಕೊಂಡಿದ್ದ ಅವರು ಮನೆಗೆ ಹೋಗಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ಸಂಜೆ ಭರತ್ ಅವರಿಗೆ ತಲೆ ನೋವು ಹೆಚ್ಚಾಗಿತ್ತು. ಕೂಡಲೇ ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಲೆಯ ಒಳಭಾಗದಲ್ಲಿ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಅವರು ತೀರಿಕೊಂಡರು’ ಎಂದು ತಿಳಿಸಿದರು.

ಕಟ್ಟೆ ಮೇಲೆ ಕುಳಿತಿದ್ದ ವೃದ್ಧ: ‘ದೇವಿಹೊಸೂರಿನ ಘನಿಸಾಬ್ (75) ಅವರು ಮನೆಯ ಕಟ್ಟೆ ಮೇಲೆ ಕುಳಿತಿದ್ದರು. ಮೆರವಣಿಗೆಯಲ್ಲಿ ಹೊರಟಿದ್ದಾಗ ಬೆದರಿದ್ದ ಹೋರಿ, ಕಟ್ಟೆಗೆ ನುಗ್ಗಿ ಘನಿಸಾಬ್ ಎದೆ ಹಾಗೂ ಕುತ್ತಿಗೆಗೆ ಕೊಂಬಿನಿಂದ ತಿವಿದಿತ್ತು. ತೀವ್ರ ಗಾಯಗೊಂಡ ಘನಿಸಾಬ್ ಅವರು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ’ ಎಂದು ಗ್ರಾಮಸ್ಥರೊಬ್ಬರು ಹೇಳಿದರು.

ಮಾರುಕಟ್ಟೆಗೆ ಹೊರಟಿದ್ದ ನಿವೃತ್ತ ಲೈನ್‌ಮನ್: ‘ಹೆಸ್ಕಾಂ ನಿವೃತ್ತ ಲೈನ್‌ಮನ್ ಚಂದ್ರಶೇಖರ್ (75) ಅವರು ಮಾರುಕಟ್ಟೆಗೆ ಹೊರಟಿದ್ದರು. ಹಾವೇರಿಯ ವೀರಭದ್ರೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹೋರಿ ಬೆದರಿಸುವ ಆಚರಣೆಯಿತ್ತು. ಅಲ್ಲಿಗೆ ಬಂದಿದ್ದ ಹೋರಿಯೊಂದು ಓಡಿ ಬಂದು ಚಂದ್ರಶೇಖರ್ ಅವರಿಗೆ ಗುದ್ದಿತ್ತು. ನೆಲಕ್ಕೆ ಬಿದ್ದ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ನೆಲಕ್ಕೆ ಬಿದ್ದು ತಲೆಗೆ ಪೆಟ್ಟು: ‘ಯಳವಟ್ಟಿಯ ಶ್ರೀಕಾಂತ್ (40), ಹೋರಿ ಬೆದರಿಸುವ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಹೋರಿಯೊಂದು ಗುದ್ದಿದ್ದರಿಂದ ನೆಲಕ್ಕೆ ಬಿದ್ದಿದ್ದರು. ತಲೆಗೆ ತೀವ್ರ ಪೆಟ್ಟಾಗಿದ್ದ ಅವರನ್ನು ಹುಬ್ಬಳ್ಳಿಯ ಕೆಎಂಸಿ–ಆರ್‌ಐ (ಕಿಮ್ಸ್‌) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ’ ಎಂದು ಹಾನಗಲ್ ಪೊಲೀಸರು ಹೇಳಿದರು.

ಹಿರೇಕೆರೂರು ತಾಲ್ಲೂಕಿನ ಹಂಸಬಾವಿಯಲ್ಲಿ 2024ರ ಮಾರ್ಚ್‌ 6ರಂದು ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸೇರಿ ಇಬ್ಬರು ಮೃತಪಟ್ಟಿದ್ದರು. ಹಾನಗಲ್‌ ತಾಲ್ಲೂಕಿನಲ್ಲಿ 2011ರಲ್ಲಿ ಇಬ್ಬರು ತೀರಿಕೊಂಡಿದ್ದರು. 

ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆಗೆ ಅನುಮತಿ ಇಲ್ಲ. ಇಂಥ ಸ್ಪರ್ಧೆಗಳನ್ನು ಆಯೋಜಿಸದಂತೆ ಹೋರಿ ಮಾಲೀಕರು ಆಯೋಜಕರಿಗೆ ಎಚ್ಚರಿಕೆಯ ನೋಟಿಸ್ ನೀಡಲಾಗುವುದು
ಯಶೋಧಾ ವಂಟಗೋಡಿ ಜಿಲ್ಲಾ ಎಸ್‌ಪಿ

ಎರಡು ಹೋರಿಗಳು ಸಾವು

ತಿಳವಳ್ಳಿ: ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಹೋರಿ ಬೆದರಿಸುವ ಆಚರಣೆಯಲ್ಲಿ ಪಾಲ್ಗೊಂಡಿದ್ದ ಎರಡು ಹೋರಿಗಳು ಮೃತಪಟ್ಟಿವೆ. ಹಬ್ಬದಲ್ಲಿದ್ದ ತಿಳವಳ್ಳಿ ಜಾಕಿ ಎಂಬ ಪಿಪಿ ಹೋರಿ ಕೆರೆಯ ಹಿರಿಯಾರ ಕಾಲುವೆಗೆ ಬಿದ್ದು ಮೃತಪಟ್ಟಿದೆ. ಇನ್ನೊಂದು ಹೋರಿ ಸಹ ಆರೋಗ್ಯ ಸಮಸ್ಯೆ ಉಂಟಾಗಿ ತೀರಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.