ಬ್ಯಾಡಗಿ: ಪಟ್ಟಣದ ರೈತರ ಜಮೀನಿನಲ್ಲಿ ಗುರುವಾರ ಗೋವಿನ ಜೋಳದ ಬೆಳೆಗೆ ಡ್ರೋನ್ ಮೂಲಕ ನ್ಯಾನೊ ಯೂರಿಯೂ ಮತ್ತು ನ್ಯಾನೊ ಡಿಎಪಿ ಸಿಂಪಡಣಾ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.
ಕೃಷಿ ಇಲಾಖೆ ಇಫ್ಕೊ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಉಪ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಕೊರಚರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ನಿಖರ ಮತ್ತು ಉದ್ದೇಶಿತ ನ್ಯಾನೊ ಗೊಬ್ಬರ ಬಳಕೆಯಿಂದ ಪರಿಸರಕ್ಕೆ ಹಾನಿಯಾಗದೆ ಬೆಳೆಗಳಿಗೆ ಸಾರಜನಕದ ಅಗತ್ಯ ಪೂರೈಸಲಿದೆ. ನ್ಯಾನೊ ಗೊಬ್ಬರವನ್ನು ಎಲೆಗಳ ಮೇಲೆ ಸಿಂಪಡಣೆ ಮಾಡುವುದುರಿಂದ ಪೋಷಕಾಂಶದ ಸದ್ಬಳಕೆಯಾಗಲಿದೆ. ಸಾಮಾನ್ಯ ರಸಗೊಬ್ಬರ ಬಳಕೆಯಿಂದ ಮಣ್ಣು ಮತ್ತು ನೀರಿನ ಮೇಲೆ ಉಂಟಾಗುವ ದುಷ್ಪರಿಣಾಮ ತಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ, ನ್ಯಾನೊ ಯೂರಿಯಾ ಶೇ 4ರಷ್ಟು ಸಾರಜನಕ ಹೊಂದಿದೆ. ನ್ಯಾನೊ ಡಿಎಪಿ ಶೇ ಶೇ 8 ಸಾರಜನಕ ಮತ್ತು ಶೇ 16 ರಂಜಕ ಹೊಂದಿದೆ. ಹೀಗಾಗಿ ಬೆಳೆಗಳ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಪೋಷಕಾಂಶ ಒದಗಿಸಿ ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಡ್ರೋನ್ ಮೂಲಕ ಸಿಂಪಡಿಸಿದರೆ ಶೇ 80 ರಷ್ಟು ಬೆಳೆಗಳಿಗೆ ತಲುಪಲಿದ್ದು, ಕಡಿಮೆ ಖರ್ಚು, ಕಡಿಮೆ ಶ್ರಮದ ಮೂಲಕ ಹೆಚ್ಚು ಬೆಳೆಗಳಿಗೆ ತಲುಪಲಿದೆ ಎಂದು ತಿಳಿಸಿದರು.
ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಗಂಗಣ್ಣ ಎಲಿ ಮಾತನಾಡಿ, ಡ್ರೋಣ್ ಮೂಲಕ 10 ನಿಮಿಷದಲ್ಲಿ ಒಂದು ಎಕರೆಗೆ ಕೇವಲ ₹400ಯಲ್ಲಿ ಸಿಂಪಡಣೆ ಮಾಡಬಹುದು. ಕಾರಣ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಬೆನಕನಕೊಂಡ, ಸದಸ್ಯರಾದ ಶಂಕರಗೌಡ ಪಾಟೀಲ, ಚಿಕ್ಕಪ್ಪ ಛತ್ರದ, ಕೃಷಿ ಅಧಿಕಾರಿ ನಾಗರಾಜ ಬನ್ನಿಹಟ್ಟಿ ಉಪಸ್ಥಿತರಿದ್ದರು.ಹೆಚ್ಚಿನ ಮಾಹಿತಿಗೆ ಪ್ರಶಾಂತ ಅವರ ಮೊ.8088310431 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.