
ಬ್ಯಾಡಗಿ: ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಸಾಲದು, ಅವರಿಗೆ ಉತ್ತಮ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ನೀಡಬೇಕಾಗಿರುವುದು ಅಗತ್ಯವಾಗಿದ್ದು, ಪಾಲಕರ ವರ್ತನೆಗಳೂ ಮಕ್ಕಳಿಗೆ ಮಾದರಿಯಾಗಬೇಕಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಸಲಹೆ ನೀಡಿದರು.
ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವ ಶಿಕ್ಷಣ ನೀಡುವುದು ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಮಕ್ಕಳನ್ನು ತರಬೇತಿಗೊಳಿಸಬೇಕು ಎಂದರು.
ಕಾರ್ಯಕ್ರಮವನ್ನು ಬಿಇಒ ಎಸ್.ಜಿ.ಕೋಟಿ ಉದ್ಘಾಟಿಸಿ, ಶತಮಾನ ಕಂಡ ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿರುವುದು ಹೆಮ್ಮೆಯ ಸಂಗತಿ.ಮಕ್ಕಳ ಪ್ರಗತಿಗೆ ಪಾಲಕರೂ ಸಹ ಕೈಜೋಡಿಸಬೇಕು. ಹೆಣ್ಣುಮಕ್ಕಳು ಶಿಕ್ಷಣ ಪಡೆದರೆ ಒಂದು ಕುಟುಂಬವೇ ಶಿಕ್ಷಣ ಪಡೆದಂತಾಗುತ್ತದೆ ಎಂದರು.
ಕಳೆದ ಸಾಲಿನ 7ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ ರಾಧಿಕಾ ಹುಲ್ಲೂರ, ಕವನಾ ಹಿರೇಮಠ, ಚೈತ್ರಾ ಜಗತಾಪ ಹಾಗೂ ಮೇಘನಾ ಹಿರೇಮಠ ಇವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಈ ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳಾದ ಪೂಜಾ ಹಿತ್ತಲಮನಿ ಹಾಗೂ ನಿವೇದಿತಾ ಪೆದ್ದರ ಅವರಿಗೆ ಪಾರಿತೋಷಕ ವಿತರಿಸಲಾಯಿತು. ಮುಖ್ಯ ಶಿಕ್ಷಕ ಜಿ.ಬಿ.ಮಾಗಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಲ್ಲಿಕಾರ್ಜುನ ಬಳ್ಳಾರಿ, ಶಿವಬಸಪ್ಪ ಕುಳೇನೂರ, ನಾಗರಾಜ ಆನ್ವೇರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಮಡಿವಾಳರ, ಸಂಪನ್ಮೂಲ ವ್ಯಕ್ತಿ ಯಶವಂತಕುಮಾರ, ಗ್ರಾ.ಪಂ ಅಧ್ಯಕ್ಷೆ ಪಾರ್ವತೆವ್ವ ನಾಯಕ, ಉಪಾಧ್ಯಕ್ಷೆ ಮೀನಾಕ್ಷಿ ಅಂಗಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.