
ಬ್ಯಾಡಗಿ ಮೆಣಸಿನಕಾಯಿ
ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನ.18ನೇ ಮಂಗಳವಾರ 21,917 ಚೀಲ (5,479 ಕ್ವಿಂಟಲ್) ಮೆಣಸಿನಕಾಯಿ ಮಾರಾಟವಾಗಿದ್ದು, ಆವಕದಲ್ಲಿ ತುಸು ಹೆಚ್ಚಳ ಕಂಡು ಬಂದಿದೆ.
ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಕಳೆದ ವಾರ ಒಟ್ಟಾರೆ 46,867 ಚೀಲ (11,701) ಕ್ವಿಂಟಲ್ ಮೆಣಸಿನಕಾಯಿ ಮಾರಾಟವಾದಂತಾಗಿದೆ. ಪೇಟೆಗೆ ಹೊಸ ಮೆಣಸಿನಕಾಯಿ ಆವಕ ತುಸು ಹೆಚ್ಚಿದ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ನ.18ರಂದು ಪ್ರಾಂಗಣದಲ್ಲಿ ಒಟ್ಟು 1,011 ಲಾಟ್ ಮೆಣಸಿನಕಾಯಿ ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಮತ್ತು ಗುಣಮಟ್ಟದ ಕೊರತೆ ಇರುವ 89 ಲಾಟ್‌ಗಳಿಗೆ ವರ್ತಕರು ಟೆಂಡರ್ ನಮೂದಿಸಿಲ್ಲ.
ದರ ಹೆಚ್ಚಳದ ಹಿನ್ನೆಲೆಯಲ್ಲಿ ರೈತರು ಹಸಿ ಮೆಣಸಿನಕಾಯಿ ತರದಂತೆ ದಲಾಲರು ಅವರಿಗೆ ತಿಳಿವಳಿಕೆ ನೀಡಬೇಕು. ಒಣಗಿಸಿದ ಮೆಣಸಿನಕಾಯಿಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದ್ದು, ಅಲ್ಪ ಹಸಿ ಇರುವ ಮೆಣಸಿನಕಾಯಿ ಮಾರಾಟಕ್ಕೆ ತಂದಲ್ಲಿ ಅದರ ಗುಣಮಟ್ಟದಲ್ಲಿ ವ್ಯತ್ಯಾಸಗಳಾಗುವ ಸಾಧ್ಯತೆಗಳಿವೆ. ಕಾರಣ ರೈತರು ಸಂಪೂರ್ಣವಾಗಿ ಒಣಗಿಸಿಕೊಂಡು ಮೆಣಸಿನಕಾಯಿ ಮಾರಾಟಕ್ಕೆ ತರುವಂತೆ ವರ್ತಕರ ಸಂಘ ಮನವಿ ಮಾಡಿಕೊಂಡಿದೆ.
88 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹ 43,000 ರಂತೆ, 17 ಚೀಲ ಕಡ್ಡಿ ಮೆಣಸಿನಕಾಯಿ ₹ 39,000 ರಂತೆ ಹಾಗೂ ಗುಂಟೂರು ತಳಿ ಮೆಣಸಿನಕಾಯಿ ₹ 14,500 ರಂತೆ ಗರಿಷ್ಟ ಬೆಲೆಯಲ್ಲಿ ಮಾರಾಟವಾಗಿವೆ. ಡಬ್ಬಿ ಮೆಣಸಿಕಾಯಿ ಕ್ವಿಂಟಲ್‌ಗೆ ₹ 2 ಸಾವಿರ ಮಾತ್ರ ಏರಿಕೆಯಾಗಿದೆ. ಸರಾಸರಿ ಬೆಲೆಯಲ್ಲಿಯೂ ತುಸು ಚೇತರಿಕೆ ಕಂಡು ಬಂದಿದ್ದು, ಬ್ಯಾಡಗಿ ಡಬ್ಬಿ ₹ 29,500, ಬ್ಯಾಡಗಿ ಕಡ್ಡಿ ₹ 28,029 ಹಾಗೂ ಗುಂಟೂರ ತಳಿ ₹ 12,629ರಂತೆ ಮಾರಾಟವಾಗಿವೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 116 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.