ADVERTISEMENT

ಬ್ಯಾಡಗಿ | ಮೆಣಸಿನಕಾಯಿ ಆವಕ ಇಳಿಕೆ, ಬೆಲೆ ಚೇತರಿಕೆ 

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:56 IST
Last Updated 9 ಜನವರಿ 2026, 7:56 IST
   

ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಜ.8ರಂದು 55,404 ಚೀಲ ( 13,851 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟವಾಗಿದ್ದು, ಆವಕದಲ್ಲಿ ಮತ್ತೆ ಇಳಿಕೆಯಾಗಿದೆ. ಆದರೆ ಮೆಣಸಿನಕಾಯಿ ಬೆಲೆಯಲ್ಲಿ ಮತ್ತೆ ಚೇತರಿಕೆ ಕಂಡು ಬಂದಿದೆ. ಪ್ರಸಕ್ತ ಹಂಗಾಮಿನಲ್ಲಿ 4ನೇ ಬಾರಿಗೆ 50 ಸಾವಿರಕ್ಕಿಂತ ಹೆಚ್ಚು ಚೀಲ ಆವಕವಾಗಿದ್ದು, ದಿನದಲ್ಲಿ ಇನ್ನೂ ಲಕ್ಷ ಚೀಲ ದಾಟುತ್ತಿಲ್ಲ.

ಅಕಾಲಿಕ ಮಳೆ ಹಾಗೂ ರೋಗ ಬಾಧೆಯಿಂದ ಇಳುವರಿ ಕಡಿಮೆಯಾಗಿರುವುದು ಮೆಣಸಿನಕಾಯಿ ಆವಕದಲ್ಲಿ ಕುಸಿತವಾಗಲು ಕಾರಣವಾಗಿದೆ. ಅಲ್ಲದೆ ಕಳೆದ ವರ್ಷ ಬೆಲೆಯಲ್ಲಿ ತೀವ್ರ ಕುಸಿತ ಕಂಡು ಬಂದಿದ್ದರಿಂದ ಮೆಣಸಿನಕಾಯಿ ಬೆಳೆಗಾರರು ಬೇರೆ ಫಸಲಿನ ಕಡೆಗೆ ವಾಲಿದ್ದಾರೆ. ಹೀಗಾಗಿ ಮೆಣಸಿನಕಾಯಿ ಬೆಳೆಯುವ ಕ್ಷೇತ್ರ ಪ್ರಸಕ್ತ ಕಡಿಮೆಯಾಗಿದೆ.

ಪ್ರಸಕ್ತ ವರ್ಷ ಕೋಲ್ಡ್‌ ಸ್ಟೋರೇಜ್‌ನಲ್ಲಿ ಸಂಗ್ರಹವಿರುವ ಮೆಣಸಿನಕಾಯಿಗಿಂತ ಹೊಸ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿದ ಪರಿಣಾಮ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಖರೀದಿ ವರ್ತಕರ ಅಭಿಪ್ರಾಯವಾಗಿದೆ. ಕಳೆದ ಜ.5ರಂದು ಮಾರುಕಟ್ಟೆಯಲ್ಲಿ ಒಟ್ಟು67,057 ಚೀಲ (16,764 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟವಾಗಿದ್ದವು. ಗುರುವಾರದ ಮಾರುಕಟ್ಟೆಗೆ ಒಟ್ಟು 9,821 ಲಾಟ್‌ ಮೆಣಸಿನಕಾಯಿ ಟೆಂಡರ್‌ಗೆ ಇಡಲಾಗಿದ್ದು,

ADVERTISEMENT

ಈ ಪೈಕಿ ತೇವಾಂಶ ಹೆಚ್ಚಿರುವ ಮತ್ತು ಗುಣಮಟ್ಟದ ಕೊರತೆ ಇರುವ 249 ಲಾಟ್‌ಗಳಿಗೆ ವರ್ತಕರು ಟೆಂಡರ್‌ ನಮೂದಿಸಿಲ್ಲ. ಬ್ಯಾಡಗಿ ಮೂಲ ತಳಿ (ಲೋಕಲ್‌) ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿದ ಕಾರಣ 20 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹70,119ರಂತೆ, 8 ಚೀಲ ಕಡ್ಡಿ ಮೆಣಸಿನಕಾಯಿ ₹57,777 ರಂತೆ ಹಾಗೂ ಗುಂಟೂರ ತಳಿ ₹16,889 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ.

ಇಂದಿನ ಮಾರುಕಟ್ಟೆಯಲ್ಲಿ ಬ್ಯಾಡಗಿ ಕಡ್ಡಿ ಮತ್ತು 5531 ತಳಿ ಮೆಣಸಿನಕಾಯಿ ಹೆಚ್ಚು ಮಾರಾಟವಾಗಿವೆ. ಬಿಳಿಗಾಯಿ ಪ್ರಮಾಣ ಸಹ ಹೆಚ್ಚಿದೆ ಎನ್ನಲಾಗಿದೆ. ಸರಾಸರಿ ಬೆಲೆಯಲ್ಲಿಯೂ ತುಸು ಹೆಚ್ಚಳ ಕಂಡು ಬಂದಿದ್ದರಿಂದ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹39,509, ಬ್ಯಾಡಗಿ ಕಡ್ಡಿ ₹37,009 ಹಾಗೂ ಗುಂಟೂರ ತಳಿ ₹13,359ರಂತೆ ಮಾರಾಟವಾಗಿವೆ.

ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 398 ಖರೀದಿ ವರ್ತಕರು ಪಾಲ್ಗೊಂಡಿದ್ದು, 1.26 ಲಕ್ಷ ಬಾರಿ ದರವನ್ನು ಕೋಟ್‌ ಮಾಡಿದ್ದಾರೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.