ಬ್ಯಾಡಗಿ: ಪಟ್ಟಣದಲ್ಲಿ ಐದು ವರ್ಷಕ್ಕೊಮ್ಮೆ ನಡೆಯಲಿರುವ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವಕ್ಕೆ ಶನಿವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಶಾಸಕ ಬಸವರಾಜ ಶಿವಣ್ಣನವರ ಧ್ವಜಾರೋಹಣ ನೆರವೇರಿಸಿದರು.
ಮುಪ್ಪಿನೇಶ್ವರ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ‘ಜಾತ್ರೆಗಳು ಒಂದು ಗ್ರಾಮದ ಪರಂಪರೆಯಾಗಿದ್ದು, ಎಲ್ಲಾ ಧರ್ಮದವರೂ ಒಂದು ಗೂಡಿ ಸಂಭ್ರಮಿಸುವುದು ಭಾವೈಕ್ಯತೆಗೆ ಸಾಕ್ಷಿಯಾಗಲಿದೆ‘ ಎಂದರು.
ಗ್ರಾಮದೇವತೆ ಧರ್ಮಾಧಿಕಾರಿ ಪುಟ್ಟಪ್ಪ ಛತ್ರದ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ, ಗಣ್ಯ ವರ್ತಕ ಕುಮಾರಗೌಡ್ರ ಪಾಟೀಲ, ವಿವಿಧ ಸಮಾಜಗಳ ಮುಖಂಡರಾದ ಬಿ.ಎಂ.ಛತ್ರದ, ಸುರೇಶ ಆಸಾದಿ, ಗಜಾನನ ರಾಯ್ಕರ, ಜಯಪ್ಪ ಸುಣಗಾರ, ಸೋಮಣ್ಣ ಕರ್ನೂಲ್, ದುಂಡೆಪ್ಪ ಕಾಯಕದ, ಬುದ್ದಿವಂತ ಹಂಜಗಿ, ಬಿ.ಆರ್.ಹೊತ್ತಿಗೌಡ್ರ, ರಾಮಣ್ಣ ಕೋಡಿಹಳ್ಳಿ. ಮುಕ್ತಿಯಾರ್ ಮುಲ್ಲಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಮಾರ್ಚ್ 2ರಂದು ದೇವಿಯ ಘಟಸ್ಥಾಪನೆ ನಡೆಯಲಿದ್ದು, ಬೆಳಿಗ್ಗೆ 8ಗಂಟೆಗೆ ಗ್ರಾಮ ದೇವತೆಯ ಅಲಂಕಾರ, ಅಭಿಷೇಕ, ನವಗ್ರಹಮ ಅಷ್ಟದಿಕ್ಪಾಲಕರು ಮತ್ತು ಸಪ್ತಸಭಾಪತಿಗಳ ಪೂಜೆ, ದುರ್ಗಾಹೋಮ, ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ.
ಮಾರ್ಚ್ 3ರಂದು ಬೆಳಿಗ್ಗೆ 9 ಗಂಟೆಗೆ ಸಕಲ ಕುಲದೇವತೆಗಳಿಗೆ ಉಡಿ ತುಂಬುವುದು ಹಾಗೂ ಅಂಕಿ ಹಾಕುವುದು, ಬಳಿಕ ಸಂತೆ ಮೈದಾನದಲ್ಲಿ ದೇಶಿ ತಳಿ ಜಾನುವಾರಗಳ ಪ್ರದರ್ಶನ ನಡೆಯಲಿದೆ. ಮಾರ್ಚ್ 4ರಂದು ಬೆಳಿಗ್ಗೆ 8 ಗಂಟೆಯಿಂದ ದೇವಿಗೆ ಉಡಿ ತುಂಬುವುದು, ಸಂಜೆ 4.35ಕ್ಕೆ ದ್ಯಾನವ್ವದೇವಿಯ ಮೆರವಣೆಗೆ ನಡೆಯಲಿದೆ. ಮಾರ್ಚ್ 5ರಂದು ಬೆಳಿಗ್ಗೆ 3 ಗಂಟೆಗೆ ದೇವಿಯ ಧಾರ್ಮಿಕ ಕಾರ್ಯಕ್ರಮಗಳು ಮತ್ತು ರಾಣಗೇರ, ಕಾರ್ಯಕ್ರಮಗಳು ಜರುಗಲಿವೆ.
ಮಾರ್ಚ್ 6ರಂದು ಮಧ್ಯಾಹ್ನ 3 ಗಂಟೆಗೆ ಗಡಿ ವಿಮೋಚನೆ, ಮಾರ್ಚ್ 7ರಂದು ದೇವಿಯ ಮಂದಿರ ಪ್ರವೇಶ, ರುದ್ರಾಭಿಷೇಕ, ಬಿಲ್ವಾರ್ಚನೆ, ಕುಕುಮಾರ್ಚನೆ, ಉಡಿ ತುಂಬುವುದು. ಬಳಿಕ ಮಂಗಲ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಸಂಜೆ 6 ಗಂಟೆಗೆ ಅಟಲ್ ಬಿಹಾರಿ ವಾಜಪೇಯಿ ರಂಗಮಂದಿರದಲ್ಲಿ ಖಾಸಿಂ ಅಲಿ ತಂಡ, ಹನುಮಂತ ಲಮಾಣಿ, ಬಾಳು ಬೆಳಗುಂದಿ, ಹರೀಶ ಹಿರಿಯೂರು, ಹಾಗೂ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಸಿಂಗಾರಗೊಂಡ ಪಟ್ಟಣ: ಏಳು ದಿನಗಳವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಹಂಸಭಾವಿ ರಸ್ತೆ ಹಾಗೂ ಮೋಟೆಬೆನ್ನೂರ ರಸ್ತೆಯಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.