ADVERTISEMENT

ನುಡಿಜಾತ್ರೆಗೆ ಏಲಕ್ಕಿ ಮಾಲೆ ಕಂಪು: ₹5 ಲಕ್ಷ ಮೌಲ್ಯದ ಒಂದು ಸಾವಿರ ಮಾಲೆ ತಯಾರಿ

ಉಸ್ಮಾನ್‌ ಸಾಹೇಬ್‌ ಪಟವೇಗಾರ್‌ ಕುಟುಂಬಸ್ಥರಿಂದ ಸಿದ್ಧತೆ

ಸಿದ್ದು ಆರ್.ಜಿ.ಹಳ್ಳಿ
Published 5 ಜನವರಿ 2023, 14:42 IST
Last Updated 5 ಜನವರಿ 2023, 14:42 IST
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಿರುವ ಹಾವೇರಿಯ ಉಸ್ಮಾನ್‌ಸಾಹೇಬ್‌ ಪಟವೇಗಾರ್ ಕುಟುಂಬಸ್ಥರು –ಪ್ರಜಾವಾಣಿ ಚಿತ್ರ/ ಮಾಲತೇಶ ಇಚ್ಚಂಗಿ
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಿರುವ ಹಾವೇರಿಯ ಉಸ್ಮಾನ್‌ಸಾಹೇಬ್‌ ಪಟವೇಗಾರ್ ಕುಟುಂಬಸ್ಥರು –ಪ್ರಜಾವಾಣಿ ಚಿತ್ರ/ ಮಾಲತೇಶ ಇಚ್ಚಂಗಿ   

ಹಾವೇರಿ: ಏಲಕ್ಕಿ ಕಂಪಿನ ನಾಡಿನಲ್ಲಿ ಜನವರಿ 6ರಿಂದ 8ರವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಮ್ಮೇಳನಾಧ್ಯಕ್ಷ, ಮುಖ್ಯಮಂತ್ರಿ ಹಾಗೂ ಇತರೆ ಗಣ್ಯರನ್ನು ಗೌರವಿಸಲು ₹5 ಲಕ್ಷ ಮೌಲ್ಯದ ಒಂದು ಸಾವಿರ ಏಲಕ್ಕಿ ಮಾಲೆಗಳನ್ನು ಸಿದ್ಧಪಡಿಸಲಾಗುತ್ತಿದೆ.

ಈ ಮಾಲೆಗಳು ತನ್ನ ಸೊಬಗು ಮತ್ತು ಪರಿಮಳದಿಂದ ಹಾವೇರಿಗೆ ‘ಏಲಕ್ಕಿ ಕಂಪಿನ ನಗರ’ ಎಂದು ಹೆಸರು ತಂದುಕೊಟ್ಟಿವೆ. ಬೆಂಗಳೂರಿನ ವಿಧಾನಸೌಧದಿಂದ ನವದೆಹಲಿಯ ರಾಷ್ಟ್ರಪತಿ ಭವನದವರೆಗೆ ಅನೇಕ ಗಣ್ಯರ ಕೊರಳನ್ನು ಅಲಂಕರಿಸಿವೆ. ಅಷ್ಟೇ ಏಕೆ ಅಮೆರಿಕ, ಇಂಗ್ಲೆಂಡ್‌, ಜಪಾನ್‌ ಮುಂತಾದ ವಿದೇಶಗಳಲ್ಲೂ ಕಂಪನ್ನು ಬೀರಿವೆ.

ಹಾವೇರಿಯ ಚಂದ್ರಪಟ್ಟಣ ರಸ್ತೆಯ ಉಸ್ಮಾನ್‌ ಸಾಹೇಬ್‌ ಪಟವೇಗಾರ್‌ ಕುಟುಂಬ ಎಂಟು ದಶಕಗಳಿಂದ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಾ ಬಂದಿದೆ. 1996ರಲ್ಲಿ ಈ ಕುಟುಂಬಕ್ಕೆ ರಾಜ್ಯ ಪ್ರಶಸ್ತಿಯ ಗೌರವವೂ ಸಂದಿದೆ. ಹೀಗಾಗಿ, ಈ ಕುಟುಂಬಕ್ಕೆ ನುಡಿಜಾತ್ರೆಗೆ ಸಾವಿರ ಏಲಕ್ಕಿ ಮಾಲೆಗಳನ್ನು ತಯಾರಿಸುವ ಹೊಣೆಯನ್ನು ಜಿಲ್ಲಾಡಳಿತ ನೀಡಿದೆ.

ADVERTISEMENT

ಸಮ್ಮೇಳನಾಧ್ಯಕ್ಷರಿಗೆ ಬೃಹತ್‌ ಹಾರ: ‘ಸಮ್ಮೇಳನಾಧ್ಯಕ್ಷ ಡಾ.ದೊಡ್ಡರಂಗೇ
ಗೌಡ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 4 ಅಡಿ ಎತ್ತರದ 10 ಎಳೆಗಳುಳ್ಳ ಬೃಹತ್‌ ಏಲಕ್ಕಿ ಮಾಲೆಯನ್ನು ತಯಾರಿಸುತ್ತಿದ್ದೇವೆ. ಎರಡೂವರೆ ಅಡಿ ಎತ್ತರದ 5 ಎಳೆಯ 400 ಹಾರಗಳು ಮತ್ತು 2 ಅಡಿ ಎತ್ತರದ 600 ಹಾರಗಳನ್ನು ಸಿದ್ಧಪಡಿಸುತ್ತಿದ್ದೇವೆ. ಕೈಯಿಂದಲೇ ಮಾಲೆ ಕಟ್ಟಬೇಕಿರುವುದರಿಂದ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಸುಮಾರು 40 ಕಾರ್ಮಿಕರೊಂದಿಗೆ ಹಗಲು–ರಾತ್ರಿ ಬಿಡುವಿಲ್ಲದೆ ಮಾಲೆ ಕಟ್ಟುತ್ತಿದ್ದೇವೆ’ ಎಂದು ವ್ಯಾಪಾರಿ ಹಜರತ್‌ ಸಾಹೇಬ್‌ ಪಟವೇಗಾರ್‌ ತಿಳಿಸಿದರು.

ತಮಿಳುನಾಡಿನಿಂದ ಏಲಕ್ಕಿ ರವಾನೆ: ತಮಿಳುನಾಡು ಮತ್ತು ಸಕಲೇಶಪುರ, ಮೂಡಿಗೆರೆಯಿಂದ ಗುಣಮಟ್ಟದ ಏಲಕ್ಕಿ ತರಿಸಿ, 8 ದಿನಗಳವರೆಗೆ ಬ್ಲೀಚಿಂಗ್‌ ಪೌಡರ್‌ ಬೆರಸಿದ ಲವಣಯುಕ್ತ ನೀರಿನಲ್ಲಿ ತೊಳೆಯಲಾಗುತ್ತದೆ. ಏಲಕ್ಕಿ ಕಾಳುಗಳನ್ನು 24 ಗಂಟೆ ಹೊಗೆಯಾಡಿಸಲಾಗುತ್ತದೆ. ನಂತರ ತೊಳೆದು ಒಣಗಿ ಸಲಾಗುತ್ತದೆ. ಇದರಿಂದ ಏಲಕ್ಕಿಗಳು ಬಿಳುಪಾಗಿ ಹೊಳೆಯುತ್ತವೆ. ರೇಷ್ಮೆ ದಾರ, ಉಣ್ಣೆಯ ಆಲಂಕಾರಿಕ ಸಾಮಗ್ರಿ, ಬಂಗಾರ ವರ್ಣದ ಮಣಿಗಳು ಮುಂತಾದ ಸಾಮಗ್ರಿ ಬಳಸಿ ಚೆಂದನೆಯ ಏಲಕ್ಕಿ ಮಾಲೆ ತಯಾರಿಸುತ್ತೇವೆ’ ಎಂದು ವ್ಯಾಪಾರಿ ಜಹೀರ್‌ ಸಾಹೇಬ್‌ ಪಟವೇಗಾರ್‌ ವಿವರಿಸಿದರು.

ನೆಹರೂ ಕೊರಳು ಅಲಂಕರಿಸಿದ್ದ ಏಲಕ್ಕಿ ಮಾಲೆ

‘ಒಂದು ಕಾಲದಲ್ಲಿ ಹಾವೇರಿ ಏಲಕ್ಕಿಯ ವ್ಯಾಪಾರ ಕೇಂದ್ರವಾಗಿತ್ತು. ಸ್ವಾತಂತ್ರ್ಯ ನಂತರ ರಾಜಕೀಯ ಧುರೀಣ ಹೊಸಮನಿ ಸಿದ್ದಪ್ಪ ಅವರು ಹಾವೇರಿಯ ‘ಟ್ರೇಡ್‌ ಮಾರ್ಕ್‌’ ಆಗಿದ್ದ ಏಲಕ್ಕಿಯನ್ನು ಬಳಸಿ ಮಾಲೆ ಮಾಡಲು ಪ್ರಯತ್ನಿಸುವಂತೆ ನನ್ನ ತಂದೆ ಹಜರತ್‌ ಸಾಹೇಬ್‌ ಅವರನ್ನು ಕೇಳಿಕೊಂಡರು. ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಗೆ ನನ್ನ ತಂದೆ ತಾವೇ ತಯಾರಿಸಿದ ಏಲಕ್ಕಿ ಮಾಲೆ ಹಾಕಿದ್ದರು. ಹೀಗೆ ಏಲಕ್ಕಿ ಮಾಲೆಯ ವ್ಯಾಪಾರ ಆರಂಭವಾಯಿತು’ ಎಂದು ಉಸ್ಮಾನ್‌ ಸಾಹೇಬ್ ಪಟವೇಗಾರ್ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.