ಬ್ಯಾಡಗಿ ಪಟ್ಟಣದ ಶಿಡೇನೂರ ರಸ್ತೆಯಲ್ಲಿ ನಿರ್ಮಿಸುತ್ತಿರುವ ಕನಕ ಸಮುದಾಯ ಭವನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಅವರು ಭೂಮಿ ಪೂಜೆ ನೆರವೇರಿಸಿದರು
ಬ್ಯಾಡಗಿ: ‘ಈಗ ಎಲ್ಲ ಕಡೆಯೂ ಜಾತಿ–ಜಾತಿ ಎಂಬುದೇ ಹೆಚ್ಚಾಗಿ ನಡೆಯುತ್ತಿದೆ. ‘ಕುಲ–ಕುಲವೆಂದು ಹೊಡೆದಾಡದಿರಿ’ ಎಂದ ಕನಕದಾಸ ಹಾಗೂ ವಿಶ್ವಗುರು ಬಸವಣ್ಣನವರು ಹೇಳಿದ್ದನ್ನು ನಾವು ಪಾಲಿಸುತ್ತಿಲ್ಲ. ಕನಕದಾಸರು ಹೇಳಿದ್ದನ್ನು ಪಾಲಿಸಿದ್ದರೆ, ನಮ್ಮ ದೇಶ ಇಂದು ಸೋದರ ಭಾತೃತ್ವದಿಂದ ಇರುತ್ತಿತ್ತು’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಬ್ಯಾಡಗಿ ಪಟ್ಟಣದ ಶಿಡೇನೂರ ರಸ್ತೆಯಲ್ಲಿ ‘ಸಿ.ಎಂ. ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ನಿರ್ಮಿಸುತ್ತಿರುವ ಕನಕ ಸಮುದಾಯ ಭವನ’ಕ್ಕೆ ಭೂಮಿಪೂಜೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
‘ದಾಸರಲ್ಲೇ ಶ್ರೇಷ್ಠರಾದವರು ಕನಕದಾಸರು. ದಾಸರ ದೊಡ್ಡ ಪರಂಪರೆ ನಮ್ಮಲ್ಲಿದೆ. ಇದೇ ಜಾತಿಯಲ್ಲಿ ಹುಟ್ಟಬೇಕೆಂದು ನಾನು ಯಾರೂ ಅರ್ಜಿ ಹಾಕುವುದಿಲ್ಲ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಆದರೆ, ಬದುಕು ಪ್ರಸ್ತುತ. ಒಂದು ಕಾಲದಲ್ಲಿ ಭೂಮಿ ಇದ್ದವರು ಜಗತ್ತು ಆಳುತ್ತಿದ್ದರು. ನಂತರ ದುಡ್ಡಿದ್ದವರು ಜಗತ್ತನ್ನು ಆಳಿದ್ದರು. ಅದಕ್ಕೆ ಬ್ರಿಟಿಷರು ನಮ್ಮನ್ನು ಆಳಿದರು. ಈಗ ಯಾರ ಬಳಿ ಜ್ಞಾನ ಇದೆಯೂ ಅವರು ಜಗತ್ತನ್ನು ಆಳುತ್ತಿದ್ದಾರೆ’ ಎಂದರು.
‘ಹಾಲುಮತದ ಸಮುದಾಯ ಹಾಲಿನಷ್ಟೇ ಪವಿತ್ರವಾಗಿರುವ ಸಮುದಾಯ. ಈ ಸಮುದಾಯದ ಮಕ್ಕಳು, ಜಗತ್ತಿನ ಇತರ ಮಕ್ಕಳ ಜೊತೆ ಪೈಪೋಟಿ ನಡೆಸಬೇಕೆಂದರೆ ಶಿಕ್ಷಣವಂತರಾಗಬೇಕು. ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ, ತಂತ್ರಜ್ಞಾನದಿಂದ ಕೃತಕ ಬುದ್ದಿಮತ್ತೆಗೆ ಬಂದು ನಿಂತಿದ್ದೇವೆ. ಜಗತ್ತಿನ ಆಡಳಿತ, ರಾಜಕೀಯ ಶಕ್ತಿ, ಈಗ ಜ್ಞಾನದ ಕಡೆಗೆ ಹೋಗುತ್ತಿದೆ. ಕನಕದಾಸರದ್ದು ಅದ್ಭುತವಾದ ಜ್ಞಾನವಾಗಿತ್ತು. ಎಷ್ಟೇ ಪರೀಕ್ಷೆಯಾದರೂ ಅದರಲ್ಲಿ ಗೆದ್ದು ಬಂದವರು ಕನಕದಾಸರು. ಅಂಥ ಪರಂಪರೆಗೆ ಸೇರಿದವರು ನಾವು ಎಂಬ ಹೆಮ್ಮೆ ನಮ್ಮದು’ ಎಂದು ಹೇಳಿದರು.
‘ಆಧುನಿಕ ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಕನಕದಾಸರು ಉತ್ತರ ಕೊಟ್ಟಿದ್ದಾರೆ. ಸಂಸಾರ ಹೇಗೆ ನಡೆಸಬೇಕು? ಜೀವನದಲ್ಲಿ ಹೇಗೆ ಇರಬೇಕು? ಪರೋಪಕಾರಿ ಜೀವನ ಹೇಗೆ ನಡೆಸಬೇಕು? ಎಂದು ಅರ್ಥಪೂರ್ಣವಾಗಿ ಹೇಳಿದ್ದಾರೆ. ಅದನ್ನ ನಾವೆಲ್ಲರೂ ಪಾಲಿಸಬೇಕು’ ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ‘ಸಮಾಜದಲ್ಲಿ ಮೇಲು–ಕೀಳು ಎನ್ನುವ ಭಾವನೆ ಬಿಟ್ಟು, ಒಗ್ಗಟ್ಟಿನಿಂದ ಬಾಳಬೇಕು. ಶಕ್ತಿಶಾಲಿ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಶಿಕ್ಷಣ, ಕಾಯಕ ಹಾಗೂ ಒಗ್ಗಟ್ಟಿನಿಂದ ಸಮುದಾಯ ಮುಂದುವರಿಯಲು ಸಾಧ್ಯ’ ಎಂದರು.
ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಮಾಸಣಗಿ ಗ್ರಾ.ಪಂ. ಅಧ್ಯಕ್ಷೆ ರೇಣುಕಾ ತಗಡಿನಮನಿ, ಉಪಾಧ್ಯಕ್ಷ ನೀಲಗಿರಿಯಪ್ಪ ಕಾಕೋಳ, ಬೀರೇಶ್ವರ ಪಂಚ ಕಮಿಟಿ ಅಧ್ಯಕ್ಷ ಚಿಕ್ಕಪ್ಪ ಹಾದಿಮನಿ, ಉಪಾಧ್ಯಕ್ಷ ಗುಡ್ಡಪ್ಪ ಆಡಿನವರ, ಸದಸ್ಯ ರಾಮಣ್ಣ ಉಕ್ಕುಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.